ಬೆಂಗಳೂರು : ರಾಜ್ಯದ ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಡೀಸೆಲ್ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಹೆಚ್ಚಿಸಿದೆ. BMTC, KSRTC ಸೇರಿದಂತೆ ರಾಜ್ಯದ ಸಾರಿಗೆ ಬಸ್‌ಗಳ ಟಿಕೆಟ್ ದರ ಪರಿಷ್ಕರಣೆ ಮಾಡಲಾಗಿದ್ದು, ಕೆಲವು ಸೇವೆಗಳಲ್ಲಿ ₹9ರವರೆಗೆ ದರ ಏರಿಕೆಯಾಗಿದೆ. ಪರಿಷ್ಕೃತ ದರಗಳು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
BMTC ಬಸ್ ಪ್ರಯಾಣ ದರ ಎಷ್ಟು ಹೆಚ್ಚಳ?
ಬೆಂಗಳೂರಿನಲ್ಲಿ ಸಂಚರಿಸುವ BMTC ಸಾಮಾನ್ಯ ಬಸ್‌ಗಳ ಕನಿಷ್ಠ ಟಿಕೆಟ್ ದರವನ್ನು 6 ರೂಪಾಯಿಯಿಂದ 10 ರೂಪಾಯಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ಗರಿಷ್ಠ ಟಿಕೆಟ್ ದರವನ್ನು 35 ರೂಪಾಯಿಯಿಂದ 45 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಪ್ರಯಾಣಿಕರಿಗೆ ಮತ್ತೊಂದು ಆಘಾತವೆಂದರೆ, ಎಸಿ ವಜ್ರ ಬಸ್‌ಗಳ ಗರಿಷ್ಠ ಟಿಕೆಟ್ ದರವೂ ಹೆಚ್ಚಳವಾಗಿದೆ. ಈ ಹಿಂದೆ 75 ರೂಪಾಯಿ ಇದ್ದ ಗರಿಷ್ಠ ದರವನ್ನು ಇದೀಗ 90 ರೂಪಾಯಿಗೆ ಹೆಚ್ಚಿಸಲಾಗಿದೆ.
ಪರಿಷ್ಕೃತ ದರಗಳ ವಿವರ ಹೀಗಿದೆ:
· ಸಾಮಾನ್ಯ BMTC ಬಸ್: ಕನಿಷ್ಠ ದರ ₹6ರಿಂದ ₹10ಕ್ಕೆ ಏರಿಕೆ.
· ಗರಿಷ್ಠ ಟಿಕೆಟ್ ದರ: ₹35ರಿಂದ ₹45ಕ್ಕೆ ಹೆಚ್ಚಳ.
· AC ವಜ್ರ ಬಸ್: ಗರಿಷ್ಠ ದರ ₹75ರಿಂದ ₹90ಕ್ಕೆ ಏರಿಕೆ.
· ವಾಯು ವಜ್ರ ಬಸ್: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಂಚರಿಸುವ ಬಸ್‌ಗಳ ಗರಿಷ್ಠ ದರ ₹405ರಿಂದ ₹425ಕ್ಕೆ ಹೆಚ್ಚಳ.
ಇದರಿಂದ ಪ್ರತಿನಿತ್ಯ ಬಸ್‌ಗಳಲ್ಲಿ ಸಂಚರಿಸುವ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಪ್ರಯಾಣಿಕರ ಜೇಬಿಗೆ ಹೆಚ್ಚುವರಿ ಹೊರೆ ಬೀಳಲಿದೆ.
ವಿಮಾನ ನಿಲ್ದಾಣದ ವಾಯು ವಜ್ರ ಬಸ್ ಪ್ರಯಾಣವೂ ದುಬಾರಿ!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಅಲ್ಲಿಂದ ಬೆಂಗಳೂರಿನ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ವಾಯು ವಜ್ರ ಬಸ್‌ಗಳ ಪ್ರಯಾಣ ದರವೂ ಹೆಚ್ಚಳವಾಗಿದೆ.ಈ ಹಿಂದೆ ಗರಿಷ್ಠ 405 ರೂಪಾಯಿ ಇದ್ದ ಟಿಕೆಟ್ ದರವನ್ನು ಇದೀಗ 425 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರಿಂದ ವಿಮಾನ ನಿಲ್ದಾಣಕ್ಕೆ BMTC ಬಸ್‌ಗಳಲ್ಲಿ ಪ್ರಯಾಣಿಸುವವರ ಜೇಬಿಗೆ ಹೆಚ್ಚುವರಿ ಹೊರೆ ಬೀಳಲಿದೆ.
KSRTC ಬಸ್ ದರ ಗರಿಷ್ಠ 9 ರೂಪಾಯಿ ಏರಿಕೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ಗಳ ಪ್ರಯಾಣ ದರವನ್ನೂ ಹೆಚ್ಚಿಸಲಾಗಿದೆ. KSRTC ಬಸ್‌ಗಳ ಟಿಕೆಟ್ ದರದಲ್ಲಿ ಗರಿಷ್ಠ 9 ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ.ರಾಜಹಂಸ ಸೇರಿದಂತೆ ಐಷಾರಾಮಿ ಹಾಗೂ ಎಸಿ ಬಸ್‌ಗಳ ಪ್ರಯಾಣ ದರವನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ದರಗಳನ್ನು ಆಧರಿಸಿ ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಬಸ್ ದರ ಏರಿಕೆಗೆ ಕಾರಣವೇನು?
ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಡೀಸೆಲ್ ಬೆಲೆ ಏರಿಕೆ ಹಾಗೂ ಸಾರಿಗೆ ನಿಗಮಗಳ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದನ್ನು ಸರ್ಕಾರ ಪ್ರಮುಖ ಕಾರಣಗಳಾಗಿ ಮುಂದಿಟ್ಟಿದೆ.ಈ ಕುರಿತು ಮಾತನಾಡಿದ ಸಾರಿಗೆ ಸಚಿವ ಬೈರತಿ ಸುರೇಶ್, ತಮಿಳುನಾಡು ಮತ್ತು ಮಹಾರಾಷ್ಟ್ರ ಸರ್ಕಾರಗಳೂ ಬಸ್ ಪ್ರಯಾಣ ದರವನ್ನು ಹೆಚ್ಚಿಸಿವೆ. ಇದೇ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ದರ ಏರಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಮುಂದುವರಿಕೆ
ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಳವಾಗಿದ್ದರೂ, ಮಹಿಳೆಯರಿಗೆ ಶಕ್ತಿ ಯೋಜನೆಯಡಿ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣ ಸೌಲಭ್ಯ ಮುಂದುವರಿಯಲಿದೆ.ಈ ಯೋಜನೆಯಡಿ ಕರ್ನಾಟಕದ ಮಹಿಳೆಯರು ರಾಜ್ಯದಾದ್ಯಂತ ಸರ್ಕಾರಿ ಸಾರಿಗೆ ನಿಗಮಗಳ ಸಾಮಾನ್ಯ ಹಾಗೂ ಐಷಾರಾಮಿ ಅಲ್ಲದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

