ಟೀಮ್ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರು ತಮ್ಮ ಹುದ್ದೆಯಲ್ಲಿದ್ದಾಗ ಎದುರಿಸಿದ ಸವಾಲುಗಳು ಹಾಗೂ ಅನುಭವಿಸಿದ ಮಾನಸಿಕ ಒತ್ತಡದ ಬಗ್ಗೆ ಅತ್ಯಂತ ಮುಕ್ತವಾಗಿ ಮಾತನಾಡಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿ ಹಾಗೂ 2026ರ ಟಿ20 ವಿಶ್ವಕಪ್ ಗೆಲುವಿನ ಸಿಹಿ ಅನುಭವಿಸಿದ್ದರೂ, ಟೆಸ್ಟ್ ಕ್ರಿಕೆಟ್ನಲ್ಲಿ ಎದುರಾದ ಕೆಲವು ಸೋಲುಗಳು ಮತ್ತು ನಿರಂತರ ಪ್ರವಾಸಗಳು ತಮಗೆ ಮಾನಸಿಕವಾಗಿ ಆಯಾಸ ತಂದಿವೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.
ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ರೋಚಕ ಟಿ20 ಸರಣಿ ಮುಕ್ತಾಯದ ನಂತರ ಮಾತನಾಡಿದ ಗಂಭೀರ್, “ಹೌದು, ನಾನು ಮಾನಸಿಕವಾಗಿ ದಣಿದಿದ್ದೇನೆ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲೇಬೇಕು. ಆದರೆ ನಾನು ಈ ಒತ್ತಡಗಳನ್ನು ಎದುರಿಸುವಷ್ಟು ಶಕ್ತಿಶಾಲಿಯಾಗಿದ್ದೇನೆ. ನಾನು ಒಬ್ಬ ಮನುಷ್ಯ, ಹೀಗಾಗಿ ನನಗೂ ಆಯಾಸವಾಗುವುದು ಸಹಜ. ಆದರೆ ಮಂಡಳಿಯ ನಿರ್ಧಾರಗಳು ಮತ್ತು ಕ್ರಿಕೆಟ್ನ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯ ನನ್ನಲ್ಲಿದೆ” ಎಂದು ಹೇಳಿದ್ದಾರೆ.
ತಂಡದ ಆಯ್ಕೆ ಮತ್ತು ಪ್ರಮುಖ ಆಟಗಾರರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಡುವ ಸವಾಲಿನ ಬಗ್ಗೆ ಮಾತನಾಡಿದ ಅವರು, “ಜನರಿಗೆ ಇಷ್ಟವಾಗುವ ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಿಂತ ತಂಡಕ್ಕೆ ಅಗತ್ಯವಿರುವ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ನನ್ನ ಕರ್ತವ್ಯ. ಡ್ರೆಸ್ಸಿಂಗ್ ರೂಮ್ನಲ್ಲಿ ಆಟಗಾರರಿಗೆ ಅಭಯ ಮತ್ತು ಸ್ಪಷ್ಟತೆ ನೀಡುವುದು ಮುಖ್ಯ. ಪ್ರತಿಯೊಬ್ಬ ಆಟಗಾರನೊಂದಿಗೂ ನೇರ ಹಾಗೂ ಪಾರದರ್ಶಕವಾಗಿ ಮಾತನಾಡುವುದರಿಂದ ನಾನು ಯಾರ ಕಣ್ಣಲ್ಲೂ ಕಣ್ಣಿಟ್ಟು ಮಾತನಾಡಬಲ್ಲೆ” ಎಂದು ತಮ್ಮ ಕೋಚಿಂಗ್ ಶೈಲಿಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿವಿಧ ಮಾದರಿಯ ಕ್ರಿಕೆಟ್, ವಿಭಿನ್ನ ಹವಾಮಾನ ಹಾಗೂ ಆಟಗಾರರ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಕಷ್ಟಕರವಾದರೂ, ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿರುವುದಾಗಿ ಗೌತಮ್ ಗಂಭೀರ್ ತಿಳಿಸಿದ್ದಾರೆ.

