ಬೆಂಗಳೂರು-ಕರ್ನಾಟಕದಲ್ಲಿ ನಡೆದಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಇದೀಗ ಹೊಸ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.
ಮತದಾರರ ಪಟ್ಟಿಯಿಂದ ಸುಮಾರು ಒಂದು ಕೋಟಿ ಹೆಸರುಗಳು ಕಡಿತಗೊಂಡಿರುವ ಬೆನ್ನಲ್ಲೇ, ಈ ಪ್ರಕ್ರಿಯೆಯಲ್ಲಿ ಮಹಿಳೆಯರು, ಯುವ ಮತದಾರರು ಮತ್ತು ಬೆಂಗಳೂರಿನ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಬಾಧಿತರಾಗಿರುವ ಅಂಶವನ್ನು ಸಬರ್ ಇನ್ಸ್ಟಿಟ್ಯೂಟ್ನ ಪ್ರಾಥಮಿಕ ಅಧ್ಯಯನ ಬಹಿರಂಗಪಡಿಸಿದೆ.
ವಿಶೇಷವಾಗಿ, ಮರಣ ಹೊಂದಿದವರನ್ನು ಹೊರತುಪಡಿಸಿ ಜೀವಂತ ಮತದಾರರ ಹೆಸರುಗಳ ಕಡಿತವನ್ನು ಪರಿಶೀಲಿಸಿದಾಗ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಬೆಳವಣಿಗೆ ಮತದಾರರ ಪಟ್ಟಿ ಪರಿಷ್ಕರಣೆಯ ಪಾರದರ್ಶಕತೆ, ನಿಖರತೆ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲ ಅರ್ಹ ನಾಗರಿಕರ ಪಾಲ್ಗೊಳ್ಳುವಿಕೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಒಂದು ಕೋಟಿಗೂ ಅಧಿಕ ಹೆಸರುಗಳ ಕಡಿತ
ಕರ್ನಾಟಕದಲ್ಲಿ ಜೂನ್ 20ರಂದು ಆರಂಭವಾದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗಿದೆ. ಹಿಂದಿನ ಪಟ್ಟಿಯಲ್ಲಿ 5,54,32,314 ಮತದಾರರಿದ್ದರೆ, ಅಂತಿಮ ಪಟ್ಟಿಯಲ್ಲಿ 4,55,00,011 ಮತದಾರರು ಮಾತ್ರ ಉಳಿದಿದ್ದಾರೆ.
ಅಂದರೆ ಒಟ್ಟು 99,32,303 ಮತದಾರರ ಸಂಖ್ಯೆ ಕಡಿಮೆಯಾಗಿದೆ. ಸಬರ್ ಇನ್ಸ್ಟಿಟ್ಯೂಟ್ನ ವಿಶ್ಲೇಷಣೆಯಲ್ಲಿ ಒಟ್ಟು ಕೈಬಿಡಲಾದ ಹೆಸರುಗಳ ಸಂಖ್ಯೆ ಮತ್ತು ವರ್ಗೀಕರಣದ ಅಂಕಿಅಂಶಗಳ ನಡುವೆ ವ್ಯತ್ಯಾಸವಿರುವುದರಿಂದ, ಕರಡು ಮತ್ತು ಅಂತಿಮ ಪಟ್ಟಿಗಳ ಅಂಕಿಅಂಶಗಳನ್ನು ಪ್ರತ್ಯೇಕವಾಗಿ ಪರಿಗಣಿಸುವ ಅಗತ್ಯವಿದೆ.
ಕೈಬಿಡಲಾದವರಲ್ಲಿ ಸುಮಾರು ಶೇ.85ರಷ್ಟು ಪ್ರಕರಣಗಳು ಶಾಶ್ವತ ಸ್ಥಳಾಂತರ, ಪತ್ತೆಯಾಗದಿರುವುದು, ಈಗಾಗಲೇ ಬೇರೆಡೆ ನೋಂದಣಿಯಾಗಿರುವುದು ಅಥವಾ ಗಣತಿ ನಮೂನೆಗಳನ್ನು ಸಲ್ಲಿಸದಿರುವುದಕ್ಕೆ ಸಂಬಂಧಿಸಿವೆ ಎಂದು ಅಧ್ಯಯನ ತಿಳಿಸಿದೆ. ಗಮನಾರ್ಹವಾಗಿ, ಕೈಬಿಡಲಾದವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.
ಪುರುಷರಿಗಿಂತ ಮಹಿಳೆಯರೇ ಹೆಚ್ಚು ಬಾಧಿತರು
ಈ ಅಧ್ಯಯನದ ಅತ್ಯಂತ ಪ್ರಮುಖ ಅಂಶವೆಂದರೆ ಮಹಿಳಾ ಮತದಾರರ ಹೆಸರುಗಳ ಕಡಿತ. ಒಟ್ಟು ಹೆಸರುಗಳ ಕಡಿತದಲ್ಲಿ ಲಿಂಗವಾರು ದೊಡ್ಡ ವ್ಯತ್ಯಾಸ ಕಾಣಿಸದಿದ್ದರೂ, ಮರಣ ಹೊಂದಿದವರನ್ನು ಹೊರತುಪಡಿಸಿ ಜೀವಂತ ಮತದಾರರ ಹೆಸರುಗಳನ್ನು ಪರಿಶೀಲಿಸಿದಾಗ ಮಹಿಳೆಯರ ಪಾಲು ಹೆಚ್ಚಾಗಿದೆ.
18ರಿಂದ 29 ವರ್ಷ ವಯೋಮಾನದ ಪುರುಷ ಮತದಾರರೊಬ್ಬರ ಹೆಸರು ಕೈಬಿದ್ದಿದ್ದರೆ, ಅದೇ ವಯೋಮಾನದ ಇಬ್ಬರು ಮಹಿಳಾ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿವೆ .
ಬೆಂಗಳೂರು ಹೊರಗಿನ ಜಿಲ್ಲೆಗಳಲ್ಲಿ ಈ ವ್ಯತ್ಯಾಸ ಇನ್ನಷ್ಟು ಸ್ಪಷ್ಟವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜೀವಂತ ಮತದಾರರ ಪಟ್ಟಿಯಿಂದ ಕೈಬಿಡಲಾದವರಲ್ಲಿ ಮಹಿಳೆಯರ ಪ್ರಮಾಣ ಶೇ.70ರಷ್ಟಿದೆ. ವಿಜಯನಗರದಲ್ಲಿ ಶೇ.65, ದಕ್ಷಿಣ ಕನ್ನಡ, ಕೊಡಗು ಮತ್ತು ಉಡುಪಿಯಲ್ಲಿ ತಲಾ ಶೇ.63ರಷ್ಟಿದೆ.ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ಪ್ರಮಾಣ ಶೇ.51ರಷ್ಟಿದ್ದು, ತುಲನಾತ್ಮಕವಾಗಿ ಕಡಿಮೆಯಾಗಿದೆ.
ಮಹಿಳೆಯರು ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಎದುರಿಸುತ್ತಿರುವ ಸಮಸ್ಯೆಗಳು, ಮದುವೆಯ ನಂತರದ ವಿಳಾಸ ಬದಲಾವಣೆ, ವಲಸೆ, ದಾಖಲೆಗಳ ವ್ಯತ್ಯಾಸ ಮತ್ತು ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ಹೆಚ್ಚಿನ ಪರಿಶೀಲನೆ ನಡೆಸಬೇಕಾದ ಅಗತ್ಯವನ್ನು ಈ ಅಂಕಿಅಂಶಗಳು ಸೂಚಿಸುತ್ತವೆ.
ಬಿಜೆಪಿ-ಕಾಂಗ್ರೆಸ್ ಕ್ಷೇತ್ರಗಳ ನಡುವಿನ ವ್ಯತ್ಯಾಸ
ಮತದಾರರ ಹೆಸರುಗಳ ಕಡಿತದ ವಿಚಾರದಲ್ಲಿ ರಾಜಕೀಯ ಪಕ್ಷಗಳ ಪ್ರಾಬಲ್ಯವಿರುವ ಕ್ಷೇತ್ರಗಳ ನಡುವೆಯೂ ವ್ಯತ್ಯಾಸ ಕಂಡುಬಂದಿದೆ.ಬಿಜೆಪಿ ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಜೀವಂತ ಮತದಾರರ ಪೈಕಿ ಶೇ.23ರಷ್ಟು ಹೆಸರುಗಳು ಕೈಬಿದ್ದಿದ್ದರೆ, ಕಾಂಗ್ರೆಸ್ ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಈ ಪ್ರಮಾಣ ಶೇ.15ರಷ್ಟಿದೆ.
ಆದರೆ ಈ ವ್ಯತ್ಯಾಸವನ್ನು ರಾಜ್ಯಾದ್ಯಂತದ ರಾಜಕೀಯ ಪಕ್ಷಗಳ ನಡುವಿನ ನೇರ ಹೋಲಿಕೆಯಾಗಿ ಪರಿಗಣಿಸುವುದು ಸರಿಯಲ್ಲ ಎಂದು ಸಬರ್ ಇನ್ಸ್ಟಿಟ್ಯೂಟ್ನ ಅಧ್ಯಯನ ಸ್ಪಷ್ಟಪಡಿಸುತ್ತದೆ. ಏಕೆಂದರೆ ಈ ಅಂತರ ಬಹುತೇಕ ಬೆಂಗಳೂರಿನ ಕ್ಷೇತ್ರಗಳಿಂದ ಉಂಟಾಗಿದೆ.
ಬೆಂಗಳೂರಿನ ಹೊರಗಿನ ಕ್ಷೇತ್ರಗಳನ್ನು ಮಾತ್ರ ಪರಿಗಣಿಸಿದರೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಕ್ಷೇತ್ರಗಳಲ್ಲಿ ಜೀವಂತ ಮತದಾರರ ಹೆಸರುಗಳ ಕಡಿತದ ಪ್ರಮಾಣ ಸುಮಾರು ಶೇ.11ರಷ್ಟಿದೆ.
145 ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚು ಹೆಸರುಗಳ ಕಡಿತ!
ಈ ವರದಿಯ ಮತ್ತೊಂದು ರಾಜಕೀಯವಾಗಿ ಮಹತ್ವದ ಅಂಶವೆಂದರೆ, ಕರ್ನಾಟಕದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 145 ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾದ ಜೀವಂತ ಮತದಾರರ ಸಂಖ್ಯೆಯು 2023ರ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಗೆಲುವಿನ ಅಂತರಕ್ಕಿಂತ ಹೆಚ್ಚಾಗಿದೆ.
ಇದು ಸಾಮಾನ್ಯ ಆಡಳಿತಾತ್ಮಕ ಪರಿಷ್ಕರಣೆಯ ಅಂಕಿಅಂಶವಷ್ಟೇ ಅಲ್ಲದೆ, ಚುನಾವಣಾ ಪ್ರಜಾಪ್ರಭುತ್ವದ ದೃಷ್ಟಿಯಿಂದಲೂ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿಯಾಗಿದೆ.
ಒಂದು ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯ ಗೆಲುವಿನ ಅಂತರಕ್ಕಿಂತ ಹೆಚ್ಚಿನ ಸಂಖ್ಯೆಯ ಅರ್ಹ ಜೀವಂತ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದರೆ, ಮುಂದಿನ ಚುನಾವಣೆಯಲ್ಲಿ ಆ ಕ್ಷೇತ್ರದ ರಾಜಕೀಯ ಸ್ಪರ್ಧೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ನಿರಾಕರಿಸಲಾಗದು.

