ಭೋಪಾಲ್: ಸದಾಕಾಲ ರಾಜಕೀಯವಾಗಿ ಭಾರಿ ಸುದ್ದಿಯಲ್ಲಿರುವ ಮಧ್ಯಪ್ರದೇಶದ ರೇವಾ ಕ್ಷೇತ್ರದ ಬಿಜೆಪಿ ಸಂಸದ ಜನಾರ್ಧನ ಮಿಶ್ರಾ ಈ ಬಾರಿ ಬರಿಗೈಯಲ್ಲೇ ಟಾಯ್ಲೆಟ್ ಸ್ವಚ್ಛ ಮಾಡಿ ಸುದ್ದಿಯಾಗಿದ್ದಾರೆ.
ತಮ್ಮ ಕೈಯಿಂದಲೇ ಶೌಚಾಲಯದ ಸೀಟ್ ಸ್ವಚ್ಛಗೊಳಿಸುತ್ತಿರುವ ಸಂಸದ ಜನಾರ್ಧನ ಮಿಶ್ರಾ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೋದಲ್ಲಿ ಜನಾರ್ದನ ಮಿಶ್ರಾ ಅವರು ಯಾವುದೇ ಸ್ವಚ್ಛತಾ ಕಾರ್ಮಿಕರ ಸಹಾಯ ಪಡೆಯದೆ, ಬರಿಗೈಯಲ್ಲೇ ಶೌಚಾಲಯದ ಸೀಟ್ ಸ್ವಚ್ಛಗೊಳಿಸುತ್ತಿರುವುದು ಕಂಡುಬಂದಿದೆ.
ರೀಲ್ಸ್ ಗಾಗಿ ಸಂಸದರು ಈ ಕೆಲಸವನ್ನು ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಉದ್ದೇಶಕ್ಕೆ ಹೀಗೆ ಮಾಡಿದ್ದಾರೆ ಎಂಬ ಚರ್ಚೆ ಕೂಡ ನಡೆಯುತ್ತಿದೆ.
ಆದರೆ, ವಿಡಿಯೋ ಯಾವ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಅದರ ಹಿಂದಿನ ನಿಖರ ಉದ್ದೇಶವೇನು ಎಂಬುದು ಇನ್ನೂ ಸ್ವತಂತ್ರವಾಗಿ ದೃಢಪಟ್ಟಿಲ್ಲ. ಹೀಗಾಗಿ, ರೀಲ್ಗಾಗಿ ಈ ಕೆಲಸ ಮಾಡಿದ್ದಾರೆ ಎಂಬುದನ್ನು ಖಚಿತ ಮಾಹಿತಿ ಎಂದು ಪರಿಗಣಿಸಲು ಸಾಧ್ಯವಿಲ್ಲ.
ಜನಾರ್ದನ ಮಿಶ್ರಾ ಅವರು ಈ ರೀತಿ ಸ್ವಚ್ಛತಾ ಚಟುವಟಿಕೆಗಳನ್ನು ಮಾಡುವುದು ಹೊಸದೇನಲ್ಲ. ಈ ಹಿಂದೆಯೂ ಅವರು ಸ್ವಚ್ಛತಾ ಅಭಿಯಾನದ ವೇಳೆ ಸ್ವತಃ ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಸುದ್ದಿಯಾಗಿದ್ದರು. ಆಗ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಗಳಲ್ಲಿ ಭಾಗವಹಿಸುತ್ತಿರುವುದಾಗಿ ಅವರ ನಡೆ ಗಮನ ಸೆಳೆದಿತ್ತು.
ಭಾರತದಲ್ಲಿ 2014ರಲ್ಲಿ ಆರಂಭವಾದ ಸ್ವಚ್ಛ ಭಾರತ ಅಭಿಯಾನವು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಬಯಲು ಶೌಚಮುಕ್ತ ಪರಿಸರ ನಿರ್ಮಿಸುವುದು ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಒತ್ತು ನೀಡಿದೆ. ಇದೀಗ ಜನಾರ್ದನ ಮಿಶ್ರಾ ಅವರ ಈ ವಿಡಿಯೋ ಮತ್ತೊಮ್ಮೆ ಸ್ವಚ್ಛತೆ ಮತ್ತು ರಾಜಕಾರಣಿಗಳ ಸಾರ್ವಜನಿಕ ಪ್ರದರ್ಶನದ ಬಗ್ಗೆ ಹೊಸ ಚರ್ಚೆಗೆ ಗ್ರಾಸವಾಗಿದೆ.

