ಚೆನ್ನೈ: ಭಾರತದ ನ್ಯಾವಿಗೇಷನ್ (ದಿಕ್ಸೂಚಿ/ಮಾರ್ಗಸೂಚಿ) ಉಪಗ್ರಹ ಕಾರ್ಯಾಚರಣೆಯು ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ಇತ್ತೀಚೆಗೆ ಉಡಾವಣೆಗೊಂಡ ಉಪಗ್ರಹವನ್ನು ಯಶಸ್ವಿಯಾಗಿ ದೀರ್ಘವೃತ್ತಾಕಾರದ ಕಕ್ಷೆಯಲ್ಲಿ(elliptical orbit) ಇರಿಸಲಾಗಿದ್ದು, ಅದನ್ನು ಇನ್ನೂ ಎತ್ತರದ ಕಕ್ಷೆಗೆ ಕೊಂಡೊಯ್ಯುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.
ಭಾನುವಾರ ಚೆನ್ನೈಗೆ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣನ್, ಅಕ್ಟೋಬರ್ 30 ರಂದು ಉಡಾವಣೆಗೊಂಡ ಉಪಗ್ರಹವನ್ನು ಆರಂಭದಲ್ಲಿ ಸುಮಾರು 38,000 ಕಿ.ಮೀ ಎತ್ತರದಲ್ಲಿರುವ ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಇರಿಸಲಾಗಿತ್ತು ಎಂದು ಹೇಳಿದರು.
ಉಪಗ್ರಹದಲ್ಲಿರುವ ಪ್ರೊಪಲ್ಷನ್ ವ್ಯವಸ್ಥೆಯನ್ನು(ಚಾಲನಾ ವ್ಯವಸ್ಥೆ) ಬಳಸಿಕೊಂಡು, ಶನಿವಾರ ಅದನ್ನು ಇನ್ನೂ 5,500 ಕಿ.ಮೀ ಎತ್ತರಕ್ಕೆ ಏರಿಸಲಾಯಿತು. ಭಾನುವಾರವೂ ಅದನ್ನು ಇನ್ನಷ್ಟು ಎತ್ತರದ ಕಕ್ಷೆಗೆ ಕೊಂಡೊಯ್ಯುವ ಕಾರ್ಯ ಮುಂದುವರಿದಿದೆ.
ಈ ಕಾರ್ಯಾಚರಣೆಯನ್ನು ‘ಭರ್ಜರಿ ಯಶಸ್ಸು’ ಎಂದು ಬಣ್ಣಿಸಿದ ಅವರು, ಸ್ಥಳ, ಸಮಯ ಮತ್ತು ದಿಕ್ಕನ್ನು ನಿರ್ಧರಿಸಲು ಉಪಗ್ರಹ ಆಧಾರಿತ ನ್ಯಾವಿಗೇಷನ್ ತಂತ್ರಜ್ಞಾನ ಅತ್ಯಗತ್ಯ. ಸಮಗ್ರ ನ್ಯಾವಿಗೇಷನ್ ಸೇವೆಗಳನ್ನು ಒದಗಿಸಲು ಕನಿಷ್ಠ ನಾಲ್ಕು ಉಪಗ್ರಹಗಳ ಅಗತ್ಯವಿರುತ್ತದೆ ಎಂದು ಹೇಳಿದರು.
“ಈ ತಂತ್ರಜ್ಞಾನವು ಸಾರ್ವಜನಿಕ ಸುರಕ್ಷತೆ, ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಇಳಿಯುವಿಕೆ ಮತ್ತು ಟೇಕ್-ಆಫ್ ಕಾರ್ಯಾಚರಣೆಗಳು, ಸಮುದ್ರಯಾನ (ನೌಕಾಯಾನ) ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಬಳಕೆಯಾಗಲಿದೆ” ಎಂದು ಅವರು ತಿಳಿಸಿದರು.
ಪ್ರಸ್ತುತ ಭಾರತವು ಕಕ್ಷೆಯಲ್ಲಿ 56 ಉಪಗ್ರಹಗಳನ್ನು ಹೊಂದಿದೆ. ಆದರೆ ಭವಿಷ್ಯದ ಎಲ್ಲಾ ಅಗತ್ಯಗಳನ್ನು ಪೂರೈಸಲು ಮತ್ತು ವಿವಿಧ ಅನ್ವಯಿಕೆಗಳನ್ನು (applications) ಬೆಂಬಲಿಸಲು ಸಾವಿರಾರು ಉಪಗ್ರಹಗಳ ಅಗತ್ಯವಿರುತ್ತದೆ ಎಂದು ನಾರಾಯಣನ್ ಹೇಳಿದರು.
ಮಕ್ಕಳ ಕಳ್ಳಸಾಗಣೆಯನ್ನು ಪತ್ತೆಹಚ್ಚಲು ಮತ್ತು ಅಪಹರಣಕ್ಕೊಳಗಾದ ಮಕ್ಕಳನ್ನು ಗುರುತಿಸಲು ಉಪಗ್ರಹಗಳು ಸಹಾಯ ಮಾಡಬಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ವ್ಯಾಪಕ ನಿಗಾ ವಹಿಸಲು ಸಾವಿರಾರು ಉಪಗ್ರಹಗಳ ಅಗತ್ಯವಿರುತ್ತದೆ ಎಂದು ಹೇಳಿದರು.
ಮಾನವ ಸಹಿತ ಬಾಹ್ಯಾಕಾಶ ಯಾನ ಯೋಜನೆಯಾದ ‘ಗಗನಯಾನ’ದ ಬಗ್ಗೆ ಮಾತನಾಡಿದ ನಾರಾಯಣನ್, ಈ ಯೋಜನೆಯು ಉತ್ತಮವಾಗಿ ಪ್ರಗತಿಯಲ್ಲಿದೆ ಮತ್ತು ಇಲ್ಲಿಯವರೆಗೆ ಸುಮಾರು 8,000 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು. ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲು, ಮಾನವರಹಿತ (uncrewed) ಕಾರ್ಯಾಚರಣೆಗಳನ್ನು ಕೈಗೊಳ್ಳಲು ಇಸ್ರೋ ಯೋಜಿಸಿದೆ. ಮೊದಲ ಹಂತದ ಉಡಾವಣೆಗೆ ಸಿದ್ಧತೆಗಳು ಯಶಸ್ವಿಯಾಗಿ ನಡೆಯುತ್ತಿವೆ.
“ಚಂದ್ರಯಾನ-4 ಮತ್ತು ಚಂದ್ರಯಾನ-5 ಕಾರ್ಯಾಚರಣೆಗಳ ಕೆಲಸವೂ ಪ್ರಗತಿಯಲ್ಲಿದೆ. ಚಂದ್ರಯಾನ-4 ಅನ್ನು 2028 ರಲ್ಲಿ ಕೈಗೊಳ್ಳಲು ನಿಗದಿಪಡಿಸಲಾಗಿದೆ” ಎಂದು ಅವರು ಹೇಳಿದರು.
“ವೈಜ್ಞಾನಿಕ ಸಂಶೋಧನಾ ಕಾರ್ಯಾಚರಣೆಗಳು ಇಲ್ಲಿಯವರೆಗೆ ಸುಮಾರು 37 ಟೆರಾಬೈಟ್ ಗಳಷ್ಟು ಡೇಟಾವನ್ನು(ಮಾಹಿತಿಯನ್ನು) ಸಂಗ್ರಹಿಸಿವೆ. ಇದನ್ನು ಸಾರ್ವಜನಿಕರು ವೀಕ್ಷಿಸಲು ಅನುಕೂಲವಾಗುವಂತೆ ಅಂತರ್ಜಾಲದಲ್ಲಿ (ಇಂಟರ್ನೆಟ್ನಲ್ಲಿ) ಲಭ್ಯವಾಗುವಂತೆ ಮಾಡಲಾಗಿದೆ” ಎಂದು ತಿಳಿಸಿದರು.
ತೂತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿರುವ ಹೊಸ ರಾಕೆಟ್ ಉಡಾವಣಾ ಕೇಂದ್ರದ ಕುರಿತು ಮಾತನಾಡಿದ ನಾರಾಯಣನ್, ಅಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಅಲ್ಲದೆ, ಈ ಕೇಂದ್ರದಿಂದ ಮೊದಲ ರಾಕೆಟ್ ಉಡಾವಣೆಯು 2027ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

