ಬೆಂಗಳೂರು : ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಪತನ ದುರಂತದಲ್ಲಿ ಮೃತಪಟ್ಟ ಕನ್ನಡಿಗರ ಮೃತದೇಹಗಳು ಬೆಂಗಳೂರಿಗೆ ಆಗಮಿಸಿವೆ. ಮೃತರಾದ ಐವರು ಕನ್ನಡಿಗರ ಪೈಕಿ ನಾಲ್ವರ ಮೃತದೇಹಗಳನ್ನು ಡೆಹ್ರಾಡೂನ್ನಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿದೆ.
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್ಗೆ ಮೃತದೇಹಗಳು ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸ್ನೇಹಿತರು ಸ್ಥಳಕ್ಕೆ ಧಾವಿಸಿದರು. ತಮ್ಮವರ ಅಂತಿಮ ದರ್ಶನ ಪಡೆಯಲು ಕಾಯುತ್ತಿದ್ದ ಕುಟುಂಬ ಸದಸ್ಯರ ದುಃಖ ಮುಗಿಲು ಮುಟ್ಟಿತ್ತು. ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿನಲ್ಲಿ ಕುಟುಂಬಸ್ಥರು ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿತ್ತು.
ಮೃತದೇಹಗಳನ್ನು ಸ್ವೀಕರಿಸಲು ಕುಟುಂಬಸ್ಥರು ಮತ್ತು ಸ್ನೇಹಿತರು ಕಾರ್ಗೋ ಟರ್ಮಿನಲ್ ಬಳಿ ಜಮಾಯಿಸಿದ್ದರು. ಇದೇ ವೇಳೆ ಹೂವಿನ ಹಾರಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ದೇವನಹಳ್ಳಿ ತಹಶೀಲ್ದಾರ್ ಅನಿಲ್ ಅವರು, ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಐವರ ಪೈಕಿ ನಾಲ್ವರ ಮೃತದೇಹ ಬೆಂಗಳೂರಿಗೆ
ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಕರ್ನಾಟಕದ ಐವರು ಮೃತಪಟ್ಟಿದ್ದರು. ಅವರ ಮೃತದೇಹಗಳನ್ನು ಗುರುತಿಸುವ ಪ್ರಕ್ರಿಯೆ ಸೇರಿದಂತೆ ಅಗತ್ಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ರಾಜ್ಯಕ್ಕೆ ತರಲು ಕ್ರಮ ಕೈಗೊಳ್ಳಲಾಗಿತ್ತು. ಇದೀಗ ನಾಲ್ವರ ಮೃತದೇಹಗಳು ಬೆಂಗಳೂರಿಗೆ ತಲುಪಿವೆ.
ಈ ದುರಂತದಲ್ಲಿ ಮೃತಪಟ್ಟವರಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಸಾಲುಂಕೆ, ವಕೀಲ ಶಂಕರೇಗೌಡ, ಪ್ರತಾಪ್ ಬಿ.ಜಿ., ಸುಧೀರ್ ಕೆ. ಹಾಗೂ ಎಚ್.ಎಸ್. ನಟರಾಜ್ ಸೇರಿದ್ದಾರೆ. ಹೆಲಿಕಾಪ್ಟರ್ ಪೈಲಟ್ ಹಿಮಾಂಶು ಕೂಡ ದುರಂತದಲ್ಲಿ ಮೃತಪಟ್ಟಿದ್ದರು.
ಉತ್ತರಾಖಂಡದ ಪರ್ವತ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ದುರ್ಘಟನೆಯಿಂದ ಕರ್ನಾಟಕದ ಕುಟುಂಬಗಳಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು.
ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರ ನೋವು ಹೇಳತೀರದಾಗಿದೆ. ಬೆಂಗಳೂರಿಗೆ ಮೃತದೇಹಗಳು ತಲುಪುತ್ತಿದ್ದಂತೆ ಅಂತಿಮ ದರ್ಶನಕ್ಕಾಗಿ ಕಾಯುತ್ತಿದ್ದ ಬಂಧುಗಳು ಕಣ್ಣೀರಿಟ್ಟಿದ್ದು, ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್ನಲ್ಲಿ ದುಃಖದ ವಾತಾವರಣ ಆವರಿಸಿತ್ತು.
ಅಮೆರಿಕ: ಫ್ಲೋರಿಡಾದಲ್ಲಿ ಭೀಕರ ವಿಮಾನ ದುರಂತ; 9 ಮಂದಿ ಸಾವು, ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಖಾಸಗಿ ಜೆಟ್!
ಅಮೆರಿಕದ ದಕ್ಷಿಣ ಫ್ಲೋರಿಡಾದ ವಸತಿ ಪ್ರದೇಶವೊಂದರಲ್ಲಿ ಭಾನುವಾರ ಒಂಬತ್ತು ಜನರು ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್ ವಿಮಾನವೊಂದು ಕ್ಷಿಪಣಿಯಂತೆ ನೆಲಕ್ಕೆ ಅಪ್ಪಳಿಸಿ ಭೀಕರ ಸ್ಫೋಟಗೊಂಡಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ಅಮೆರಿಕದ ಫ್ಲೋರಿಡಾ ರಾಜ್ಯದ ಪಾಮ್ ಬೀಚ್ ಕೌಂಟಿಯ ಕ್ರೆಸ್ಟ್ಹೇವನ್ ಪ್ರದೇಶದ ಬಳಿ ಈ ಘಟನೆ ಸಂಭವಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಡೆತನದ ಮಾರಾ-ಲಾಗೋ ರೆಸಾರ್ಟ್ನಿಂದ ಸುಮಾರು 9 ಮೈಲು (14 ಕಿ.ಮೀ.) ದೂರದಲ್ಲಿ ವಿಮಾನ ಪತನಗೊಂಡಿದೆ. ವಿಮಾನವು ವಸತಿ ಪ್ರದೇಶದ ಮನೆಗಳಿಗೆ ಅತ್ಯಂತ ಸಮೀಪದಲ್ಲಿ ಪತನಗೊಂಡಿದ್ದು, ಅದೃಷ್ಟವಶಾತ್ ಮನೆಗಳಿಗೆ ಹಾನಿಯಾಗುವುದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಅಲ್ಲದೆ, ಜನನಿಬಿಡ ರಸ್ತೆಯೊಂದರಲ್ಲಿ ಭಾರಿ ಗುಂಡಿ ನಿರ್ಮಾಣವಾಗಿದೆ.
ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಚಲಿಸುತ್ತಿದ್ದ ಕಾರುಗಳಲ್ಲಿದ್ದವರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ವಿಮಾನ ಪತನದ ಭಯಾನಕ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಆಕಾಶದಿಂದ ವೇಗವಾಗಿ ಕೆಳಕ್ಕೆ ಧಾವಿಸಿದ ವಿಮಾನ ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಭಾರಿ ಸ್ಫೋಟ ಸಂಭವಿಸಿ, ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿದೆ.
ಘಟನಾ ಸ್ಥಳದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿದ್ದು, ರಸ್ತೆಯ ಒಡೆದ ಕಾಂಕ್ರೀಟ್ ತುಂಡುಗಳ ನಡುವೆ ಬೆಂಕಿ ಉರಿಯುತ್ತಿರುವ ದೃಶ್ಯಗಳು ಕಂಡುಬಂದಿವೆ. ವಿಮಾನವು ಮನೆಗಳ ಪಕ್ಕದಲ್ಲೇ ಹಾಗೂ ಸಂಚರಿಸುತ್ತಿದ್ದ ವಾಹನಗಳ ಸಮೀಪದಲ್ಲೇ ಪತನಗೊಂಡಿದ್ದರಿಂದ ಸ್ಥಳೀಯರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಆಸ್ಟಿನ್ನಿಂದ ಬಹಾಮಾಸ್ಗೆ ತೆರಳುತ್ತಿದ್ದ ವಿಮಾನ
ಅಮೆರಿಕದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ದುರಂತವನ್ನು ದೃಢಪಡಿಸಿದ್ದಾರೆ. ಭಾನುವಾರ ಮಧ್ಯಾಹ್ನ ಸುಮಾರು 12:50ಕ್ಕೆ (ಅಮೆರಿಕದ ಪೂರ್ವ ಕಾಲಮಾನ) ವಿಮಾನ ಪತನಗೊಂಡಿದೆ ಎಂದು ತಿಳಿಸಿದ್ದಾರೆ.

