ಕಲಬುರಗಿ: ರಾಜ್ಯಾದ್ಯಂತ 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ-ಸಡಗರ ಮನೆ ಮಾಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಕನ್ನಡ ರಾಜ್ಯೋತ್ಸವದ ಸಂಭ್ರಮ ಕಳೆಕಟ್ಟಿದೆ. ಎಲ್ಲೆಲ್ಲೂ ಕನ್ನಡದ ಕಹಳೆ ಮೊಳಗುತ್ತಿದೆ. ಈ ನಡುವೆ ಕಲಬುರಗಿ ಜಿಲ್ಲೆಯಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿಬಂದಿದೆ.
ಹೌದು.ನಾಡಿನಲ್ಲೆಡೆ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ನಡುವೆಅತ್ತ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಆರಂಭವಾಗಿದೆ. ಈ ನಿಟ್ಟಿನಲ್ಲಿ ಹೋರಾಟಗಾರರು ಹೈಡ್ರಾಮಾ ಸೃಷ್ಟಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಇಂದು ಕಲಬುರಗಿಯ ಎಸ್ ವಿಪಿ ವೃತ್ತದಲ್ಲಿ ಧ್ವಜಾರೋಹಣಕ್ಕೆ ಮುಂದಾಗಿರುವ ಘಟನೆ ನಡೆದಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮತ್ತು 371(ಜೆ) ಕಲಂ ಸಮರ್ಪಕ ಜಾರಿಗೆ ಒತ್ತಾಯಿಸಿ ಸರ್ಧಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ಧ್ವಜಾರೋಹಣಕ್ಕೆ ತೆರಳುತ್ತಿದ್ದರು.
ಈ ವೇಳೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಮ್ ಎಸ್ ಪಾಟೀಲ್ ಸೇರಿದಂತೆ 20 ಕ್ಕೂ ಅಧಿಕ ಹೋರಾಟಗಾರರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

