ರಾತ್ರಿ ಊಟಕ್ಕೆ ಅನ್ನ ತಿನ್ನುವುದಕ್ಕಿಂತ ಚಪಾತಿ ಸೇವಿಸುವುದು ಉತ್ತಮವೇ? ಅನ್ನ ತಿಂದರೆ ತೂಕ ಹೆಚ್ಚಾಗುತ್ತದೆಯೇ? ಮಧುಮೇಹ ಇರುವವರು ರಾತ್ರಿ ಯಾವ ಆಹಾರ ಸೇವಿಸಬೇಕು? ಇಂತಹ ಪ್ರಶ್ನೆಗಳು ಹಲವರನ್ನು ಕಾಡುತ್ತವೆ. ಅನ್ನ ಮತ್ತು ಚಪಾತಿ ಎರಡೂ ಭಾರತೀಯರ ದೈನಂದಿನ ಆಹಾರದ ಪ್ರಮುಖ ಭಾಗಗಳಾಗಿವೆ. ಆದರೆ ಇವೆರಡರಲ್ಲಿರುವ ಪೋಷಕಾಂಶಗಳು, ನಾರಿನಂಶ ಮತ್ತು ಜೀರ್ಣವಾಗುವ ವೇಗದಲ್ಲಿ ವ್ಯತ್ಯಾಸವಿದೆ. ಹೀಗಾಗಿ ರಾತ್ರಿ ಊಟಕ್ಕೆ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸುವಾಗ ಆಹಾರದ ಪ್ರಮಾಣ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನೂ ಗಮನಿಸಬೇಕು.
ಅನ್ನ ಮತ್ತು ಚಪಾತಿಯಲ್ಲಿರುವ ಪೋಷಕಾಂಶಗಳ ವ್ಯತ್ಯಾಸವೇನು?
ಅನ್ನ ಮತ್ತು ಚಪಾತಿ ಎರಡೂ ದೇಹಕ್ಕೆ ಕಾರ್ಬೋಹೈಡ್ರೇಟ್ಗಳ ಮೂಲಕ ಶಕ್ತಿ ಒದಗಿಸುತ್ತವೆ. ಆದರೆ ಅವುಗಳ ಪೋಷಕಾಂಶಗಳ ಪ್ರಮಾಣ ತಯಾರಿಸುವ ವಿಧಾನ ಮತ್ತು ಬಳಸುವ ಧಾನ್ಯವನ್ನು ಅವಲಂಬಿಸಿರುತ್ತದೆ.
ಅನ್ನ: ಬೇಯಿಸಿದ ಬಿಳಿ ಅನ್ನದಲ್ಲಿ ಕಾರ್ಬೋಹೈಡ್ರೇಟ್ಗಳು ಹೆಚ್ಚಾಗಿದ್ದು, ನಾರಿನಂಶ ಕಡಿಮೆ ಇರುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಒಂದು ಕಪ್ ಬೇಯಿಸಿದ ಅನ್ನದಲ್ಲಿ ಸರಿಸುಮಾರು 200 ಕ್ಯಾಲೊರಿಗಳಿರಬಹುದು. ಬಳಸುವ ಅಕ್ಕಿ ಮತ್ತು ಪ್ರಮಾಣಕ್ಕೆ ಅನುಗುಣವಾಗಿ ಈ ಮೌಲ್ಯ ಬದಲಾಗುತ್ತದೆ.
ಚಪಾತಿ: ಗೋಧಿ ಹಿಟ್ಟಿನಿಂದ ತಯಾರಿಸುವ ಚಪಾತಿಯಲ್ಲಿ ಕಾರ್ಬೋಹೈಡ್ರೇಟ್ಗಳ ಜೊತೆಗೆ ಪ್ರೋಟೀನ್ ಮತ್ತು ನಾರಿನಂಶವೂ ಇರುತ್ತದೆ. ವಿಶೇಷವಾಗಿ ಹೊಟ್ಟು ಸಮೇತ ಇರುವ ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿ ಹೆಚ್ಚು ನಾರಿನಂಶ ಒದಗಿಸುತ್ತದೆ. ಇದು ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಕಾಲ ಉಳಿಸಲು ಸಹಾಯ ಮಾಡಬಹುದು.
ಮಧುಮೇಹ ಇರುವವರು ಅನ್ನ ತಿನ್ನಬೇಕಾ, ಚಪಾತಿ ತಿನ್ನಬೇಕಾ?
ಮಧುಮೇಹ ಇರುವವರು ಆಹಾರ ಸೇವಿಸುವಾಗ ಕಾರ್ಬೋಹೈಡ್ರೇಟ್ಗಳ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಬೇಕು. ಬಿಳಿ ಅನ್ನವನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಕೆಲವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ವೇಗವಾಗಿ ಏರಬಹುದು. ಚಪಾತಿಯೂ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುವುದರಿಂದ ಅದನ್ನು ಮಿತವಾಗಿ ಸೇವಿಸುವುದು ಅಗತ್ಯ.
ಗೋಧಿ ಚಪಾತಿಗೆ ಜೋಳ, ಸಜ್ಜೆ ಅಥವಾ ರಾಗಿ ಹಿಟ್ಟನ್ನು ಸೇರಿಸಿ ಮಲ್ಟಿಗ್ರೇನ್ ರೊಟ್ಟಿ ತಯಾರಿಸಬಹುದು. ಇವುಗಳಲ್ಲಿ ನಾರಿನಂಶ ಮತ್ತು ವಿವಿಧ ಪೋಷಕಾಂಶಗಳು ದೊರೆಯುತ್ತವೆ. ಆದರೆ ಸಿರಿಧಾನ್ಯಗಳಿಗೂ ಕಾರ್ಬೋಹೈಡ್ರೇಟ್ಗಳಿರುವುದರಿಂದ ಪ್ರಮಾಣದ ಮೇಲೆ ಗಮನ ಇರಬೇಕು.
ಅನ್ನ ಸೇವಿಸಲು ಬಯಸುವವರು ಕಡಿಮೆ ಪ್ರಮಾಣದಲ್ಲಿ ಅನ್ನದೊಂದಿಗೆ ತರಕಾರಿ, ಬೇಳೆ ಅಥವಾ ಪ್ರೋಟೀನ್ಯುಕ್ತ ಆಹಾರವನ್ನು ಸೇರಿಸಿಕೊಳ್ಳಬಹುದು. ಇದರಿಂದ ಊಟದಲ್ಲಿ ಪೋಷಕಾಂಶಗಳ ಸಮತೋಲನ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ತೂಕ ಇಳಿಸಿಕೊಳ್ಳಲು ಯಾವುದು ಸೂಕ್ತ?
ತೂಕ ಇಳಿಸಿಕೊಳ್ಳಲು ಅನ್ನಕ್ಕಿಂತ ಚಪಾತಿಯೇ ಉತ್ತಮ ಎಂಬುದು ಎಲ್ಲರಿಗೂ ಅನ್ವಯಿಸುವ ನಿಯಮವಲ್ಲ. ತೂಕ ಇಳಿಕೆಯಲ್ಲಿ ದಿನವಿಡೀ ಸೇವಿಸುವ ಒಟ್ಟು ಕ್ಯಾಲೊರಿಗಳು, ದೈಹಿಕ ಚಟುವಟಿಕೆ ಮತ್ತು ಆಹಾರದ ಗುಣಮಟ್ಟ ಪ್ರಮುಖ ಪಾತ್ರ ವಹಿಸುತ್ತವೆ.
ಚಪಾತಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಹೊಟ್ಟೆ ತುಂಬಿದ ಅನುಭವ ಹೆಚ್ಚು ಕಾಲ ಉಳಿಯಬಹುದು. ಇದರಿಂದ ಪದೇಪದೇ ಹಸಿವಾಗುವುದನ್ನು ನಿಯಂತ್ರಿಸಲು ನೆರವಾಗಬಹುದು. ಮತ್ತೊಂದೆಡೆ, ಅನ್ನವನ್ನೂ ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ತೂಕ ಇಳಿಸುವ ಆಹಾರ ಕ್ರಮದ ಭಾಗವಾಗಿಸಬಹುದು.
ರಾತ್ರಿ ಊಟಕ್ಕೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?
ರಾತ್ರಿ ಊಟದಲ್ಲಿ ಆಹಾರದ ಪ್ರಮಾಣದ ಬಗ್ಗೆ ಗಮನ ಕೊಡುವುದು ಮುಖ್ಯ. ಒಂದು ಸಮತೋಲಿತ ಊಟದಲ್ಲಿ ಧಾನ್ಯಗಳ ಜೊತೆಗೆ ತರಕಾರಿ ಮತ್ತು ಪ್ರೋಟೀನ್ಯುಕ್ತ ಆಹಾರವೂ ಇರಬೇಕು.
ಚಪಾತಿ ಸೇವಿಸುವವರು 1–2 ಮಧ್ಯಮ ಗಾತ್ರದ ಚಪಾತಿಗಳೊಂದಿಗೆ ತರಕಾರಿ ಪಲ್ಯ ಮತ್ತು ಬೇಳೆ ಸಾರು ಅಥವಾ ಮೊಸರು ಸೇವಿಸಬಹುದು.
ಅನ್ನ ಇಷ್ಟಪಡುವವರು ಮಿತ ಪ್ರಮಾಣದ ಅನ್ನದೊಂದಿಗೆ ತರಕಾರಿ, ಬೇಳೆ ಅಥವಾ ಇತರ ಪ್ರೋಟೀನ್ಯುಕ್ತ ಆಹಾರ ಸೇರಿಸಿಕೊಳ್ಳಬಹುದು.
ಚಪಾತಿ ಜೊತೆಗೆ ಆಲೂಗಡ್ಡೆ ಪಲ್ಯವನ್ನೇ ಹೆಚ್ಚಾಗಿ ಸೇವಿಸುವ ಬದಲು ಹಸಿರು ಸೊಪ್ಪು ಮತ್ತು ಇತರ ತರಕಾರಿಗಳಿಗೆ ಆದ್ಯತೆ ನೀಡಬಹುದು.
ಊಟದಲ್ಲಿ ಅತಿಯಾದ ಎಣ್ಣೆ, ತುಪ್ಪ ಮತ್ತು ಕರಿದ ಪದಾರ್ಥಗಳನ್ನು ಕಡಿಮೆ ಮಾಡುವುದು ಉತ್ತಮ.
ರಾತ್ರಿ ಊಟದ ಸಮಯವೂ ಮುಖ್ಯ
ತಡರಾತ್ರಿ ಊಟ ಮಾಡುವುದಕ್ಕಿಂತ ಮಲಗುವ ಸಮಯಕ್ಕೆ ಕನಿಷ್ಠ 2–3 ಗಂಟೆಗಳ ಮೊದಲು ಊಟ ಮುಗಿಸುವುದು ಹಲವರಿಗೆ ಅನುಕೂಲಕರ. ಇದರಿಂದ ಮಲಗುವ ಮುನ್ನ ಜೀರ್ಣಕ್ರಿಯೆಗೆ ಸಾಕಷ್ಟು ಸಮಯ ಸಿಗುತ್ತದೆ. ಪ್ರತಿದಿನವೂ ಸಾಧ್ಯವಾದಷ್ಟು ಒಂದೇ ಸಮಯದಲ್ಲಿ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.
ಅನ್ನ ತಿಂದರೆ ತೂಕ ಹೆಚ್ಚಾಗುತ್ತದೆಯೇ?
ಅನ್ನ ತಿಂದರೆ ತೂಕ ಹೆಚ್ಚಾಗುತ್ತದೆ, ಚಪಾತಿ ತಿಂದರೆ ತೂಕ ಕಡಿಮೆಯಾಗುತ್ತದೆ ಎಂಬ ನಂಬಿಕೆ ಸರಿಯಲ್ಲ. ಎರಡೂ ಆಹಾರಗಳನ್ನು ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಸೇವಿಸಬಹುದು. ಮುಖ್ಯವಾಗಿ ಆಹಾರದ ಪ್ರಮಾಣ, ಅದರೊಂದಿಗೆ ಸೇವಿಸುವ ಇತರ ಪದಾರ್ಥಗಳು ಮತ್ತು ದಿನವಿಡೀ ದೇಹಕ್ಕೆ ದೊರೆಯುವ ಕ್ಯಾಲೊರಿಗಳ ಮೇಲೆ ಗಮನ ಹರಿಸಬೇಕು.
ಮಧುಮೇಹ ಇರುವವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ, ಔಷಧೋಪಚಾರ ಮತ್ತು ದೈಹಿಕ ಚಟುವಟಿಕೆಗೆ ಅನುಗುಣವಾಗಿ ಆಹಾರ ಕ್ರಮ ರೂಪಿಸಿಕೊಳ್ಳಬೇಕು. ಅಗತ್ಯವಿದ್ದರೆ ವೈದ್ಯರು ಅಥವಾ ಆಹಾರ ತಜ್ಞರ ಸಲಹೆ ಪಡೆಯಬೇಕು.
ಒಟ್ಟಿನಲ್ಲಿ, ರಾತ್ರಿ ಊಟಕ್ಕೆ ಅನ್ನವೇ ಅಥವಾ ಚಪಾತಿಯೇ ಎಂಬುದಕ್ಕಿಂತ ಸಮತೋಲಿತ ಆಹಾರ ಮತ್ತು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಹೆಚ್ಚು ಮುಖ್ಯ.

