ಹಾಸನ: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಮೇಲೆ ಬಿಡುಗಡೆಯಾಗಿರುವ ನಟಿ ರನ್ಯಾ ರಾವ್ ಪ್ರಸಿದ್ಧ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಹಾಸನಾಂಬೆ ದರ್ಶನ ಪಡೆದಿದ್ದಾರೆ.
ಪ್ರೋಟೋಕಾಲ್ ಮೂಲಕ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿದ ರನ್ಯಾ ರಾಅವ್ ತನ್ನ ತಾಯಿ, ಮಲತಂದೆ ಹಾಗೂ ಕುಟುಂಬದವರ ಜೊತೆ ಹಾಸನಾಂಬೆ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ತಂದೆ ನಿವೃತ್ತ ಡಿಜಿಪಿ ರಾಮಚಂದ್ರರಾವ್ ಹಾಗೂ ಕುಟುಂಬದವರ ಜೊತೆ ಆಗಮಿಸಿ ರನ್ಯಾ ರಾವ್, ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ. ಸದ್ಯ ಜಾಮೀನಿನ ಮೇಲೆ ಹೊರಗಿರುವ ನಟಿ, ಪ್ರೊಟೋಕಾಲ್ ವಾಹನದಲ್ಲಿ ಆಗಮಿಸಿ ದೇವಿ ದರ್ಶನ ಪಡೆದಿದ್ದು, ಚರ್ಚೆಗೆ ಕಾರಣವಾಗಿದೆ.
ಚಿನ್ನದ ಕಳ್ಳ ಸಾಗಣೆ ಆರೋಪ ಹೊತ್ತಿರುವ ರನ್ಯಾ ರಾವ್ ಅವರಿಗೆ ಪ್ರೊಟೋಕಾಲ್ ದರ್ಶನಕ್ಕೆ ಅವಕಾಶ ನೀಡಿರುವುದಕ್ಕೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ರೈಲು, ಬಸ್ ಸೇರಿದಂತೆ ನಾನಾ ವಾಹನಗಳ ಮೂಲಕ ಮಧ್ಯರಾತ್ರಿಯಿಂದಲೇ ಹಾಸನಾಂಬಾ ಸನ್ನಿಧಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದರು. ಪರಿಣಾಮ ಧರ್ಮದರ್ಶನದ ಸಾಲು ಭಕ್ತರಿಂದ ತುಂಬಿ ತುಳುಕುತ್ತಿತ್ತು. ಈ ವೇಳೆ ಪ್ರೊಟೋಕಾಲ್ ಮೂಲಕ ಆಗಮಿಸಿದ ರನ್ಯಾ ರಾವ್ ಹಾಗೂ ಕುಟುಂಬದವರು ನೇರವಾಗಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಅಕ್ರಮವಾಗಿ ದುಬೈನಿಂದ 12.56 ಕೋಟಿ ರು. ಮೌಲ್ಯದ 14.2 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ನಟಿ ರನ್ಯಾ ರಾವ್ ಅವರನ್ನು 2025ರ ಮಾರ್ಚ್ 3ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಬಳಿಕ ಡಿಆರ್ಐ ನಿಗದಿತ ಅವಧಿಯಲ್ಲಿ ಆರೋಪಪಟ್ಟಿ ಸಲ್ಲಿಸಲು ವಿಫಲವಾದ ಕಾರಣ ಅವರಿಗೆ ಡೀಫಾಲ್ಟ್ ಜಾಮೀನು ಸಿಕ್ಕಿತ್ತು.
ಆದರೆ, ”ಕಾಫೀಪೋಸಾ” ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದರಿಂದ ರನ್ಯಾ ರಾವ್ ಬಿಡುಗಡೆಗೊಂಡಿರಲಿಲ್ಲ. ಸುಮಾರು ಒಂದು ವರ್ಷದ ನಿಷೇಧಿತ ಬಂಧನವನ್ನು ಪೂರೈಸಿದ ಬಳಿಕ, 2026ರ ಎಪ್ರಿಲ್ನಲ್ಲಿ ಅವರು ಬಿಡುಗಡೆಯಾಗಿದ್ದಾರೆ. ಇತ್ತೀಚೆಗಷ್ಟೇ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ಗೆ ಭಾರಿ ಮೊತ್ತದ ದಂಡ ವಿಧಿಸಿ, ಕಠಿಣ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿತ್ತು

