ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ ಐಟಿ) ಪ್ರಕರಣದ ಮರು ತನಿಖೆ ಚುರುಕುಗೊಳಿಸಿದೆ. ಈ ನಡುವೆ ಕುಸುಮಾವತಿ ಸೌಜನ್ಯ ತಾಯಿ ಎಂಬ ಬಗ್ಗೆ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸುವಂತೆ ವ್ಯಕ್ತಿಯೊಬ್ಬರು ಎಸ್ ಐಟಿಗೆ ದೂರು ನೀಡಿದ್ದರು. ಇದೀಗ ಈ ದೂರುನ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಕುಸುಮಾವತಿ ಅವರು ಸೌಜನ್ಯಳ ತಾಯಿ ಹೌದೋ ಅಲ್ಲವೋ ಎಂಬ ಬಗ್ಗೆ ನಮಗೆ ಯಾವುದೇ ರೀತಿಯ ಅನುಮಾನಗಳಿಲ್ಲ. ಆವರು ಸೌಜನ್ಯ ತಾಯಿ ಎಂದು ವಿಶೇಷ ತನಿಖಾ ತಂಡ(SIT) ತಂಡದ ಹಿರಿಯ ಅಧಿಕಾರಿ ಹಾಗೂ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳದ ಗ್ರಾಮಸ್ಥ ಕಿಶೋರ್ ಎಂಬುವವರು ಕುಸುಮಾವತಿ ಅವರು ಸೌಜನ್ಯಳ ನಿಜವಾದ ತಾಯಿಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಎಸ್‌ಐಟಿಗೆ ದೂರು ಸಲ್ಲಿಸಿದ್ದರು.
ದೂರು ಹಾಗೂ ಈ ಕುರಿತು ಪ್ರಕಟವಾದ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಸುಧೀರ್ ಕುಮಾರ್ ರೆಡ್ಡಿ, ಸೌಜನ್ಯ ಮತ್ತು ಆಕೆಯ ತಾಯಿ ಕುಸುಮಾವತಿ ಅವರ ಸಂಬಂಧದ ವಿಚಾರದಲ್ಲಿ ತನಿಖಾ ತಂಡಕ್ಕೆ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದ್ದಾರೆ.
ಎಸ್‌ಐಟಿ ತನ್ನ ನಿಯೋಜಿತ ತನಿಖಾ ವ್ಯಾಪ್ತಿಯನ್ನು ಮೀರಿ ಹೋಗುವುದಿಲ್ಲ. ಮೂಲ ಪ್ರಕರಣಕ್ಕೆ ಸಂಬಂಧವಿಲ್ಲದ ಅಥವಾ ಅಪ್ರಸ್ತುತವಾದ ವಿಚಾರಗಳ ತನಿಖೆಗೆ ಕೈಹಾಕುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇಂತಹ ಸ್ಥಳೀಯ ವಿವಾದಗಳು, ಅನುಮಾನಗಳು ಅಥವಾ ದೂರುಗಳೇನಾದರೂ ಇದ್ದರೆ, ಅವುಗಳನ್ನು ಆಯಾ ವ್ಯಾಪ್ತಿಯ ಸ್ಥಳೀಯ ಪೊಲೀಸರೇ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಈವರೆಗೂ ಸೌಜನ್ಯಳ ತಾಯಿ ಎಂದು ಬಿಂಬಿಸಿಕೊಂಡು ನ್ಯಾಯಕ್ಕಾಗಿ ಹೋರಾಡುತ್ತಿದ್ದ ಕುಸುಮಾವತಿ ಅವರು ಸೌಜನ್ಯಳ ಹೆತ್ತ ತಾಯಿಯೇ ಅಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಈ ಸಂಬಂಧ ಸೌಜನ್ಯಳ ಮನೆ ಬಳಿ ನೆಲೆಸಿರುವ ಕಿಶೋರ್ ಎಂಬುವವರು ಮಂಗಳೂರಿನಲ್ಲಿರುವ ವಿಶೇಷ ತನಿಖಾ ತಂಡದ (SIT) ಕಚೇರಿಗೆ ಆಗಮಿಸಿ ಅಧಿಕೃತವಾಗಿ ದೂರು ನೀಡಿದ್ದರು. ಕುಸುಮಾವತಿ ಅವರ ವಿರುದ್ಧ ವ್ಯಕ್ತಿ ಗುರುತಿನ ವಂಚನೆ, ಸುಳ್ಳು ಪ್ರಮಾಣಪತ್ರ ಸಲ್ಲಿಕೆ ಹಾಗೂ ಸರ್ಕಾರಿ ಜಮೀನು ಪಡೆದುಕೊಂಡಿರುವ ಗಂಭೀರ ಆರೋಪಗಳಡಿ ದೂರು ನೀಡಿದ್ದರು.
ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಕುಸುಮಾವತಿ ಅವರು “ಕುಸುಮಾವತಿ ಯಾನೆ ಇಂದಿರಾವತಿ” ಎಂದು ಚಂದಪ್ಪ ಗೌಡ ಅವರ ಪತ್ನಿ ಶ್ರೀಮತಿ ಇಂದಿರಾವತಿ ಅವರ ಹೆಸರು ಹಾಗೂ ಗುರುತನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಅಲ್ಲದೆ ಸುಳ್ಳು ಪ್ರಮಾಣಪತ್ರವನ್ನು ಸಲ್ಲಿಸಿ ವ್ಯಕ್ತಿ ಗುರುತಿನ ವಂಚನೆ ಎಸಗಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು..

