ಬೆಂಗಳೂರು: ನಟ ಧನ್ವೀರ್ ಹಾಗೂ ವಿಜಯಲಕ್ಷ್ಮೀ ದರ್ಶನ್ ನಡುವಿನ ಸಂಘರ್ಷ ದಿನದಿಣ್ದ ದಿನಕ್ಕೆ ತೀವ್ರಗೊಂಡಿದ್ದು. ಇದರ ಬೆನ್ನಲ್ಲೇ ಧನ್ವೀರ್ ಗೆ ಕಾನೂನು ಸಂಕಷ್ಟ ಹೆಚ್ಚಾಗಿದೆ.
ಜೀವ ಬೆದರಿಕೆ, ನಿಂದನೆ ಮತ್ತು ಶಾಂತಿಭಂಗದ ಆರೋಪಗಳಡಿ ನಟ ಧನ್ವೀರ್ ವಿರುದ್ಧ ರಾಜರಾಜೇಶ್ವರಿನಗರ ಹಾಗೂ ಬಸವೇಶ್ವರನಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎರಡು ಎಫ್ಐಆರ್ ದಾಖಲಾಗಿವೆ.
ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ನೀಡಿದ ದೂರಿನನ್ವಯ ಒಂದು ಪ್ರಕರಣ ದಾಖಲಾಗಿದೆ. ನಿರ್ಮಾಪಕ ಭೋಜರಾಜ ರೈ ಎಂಬುವವರು ನೀಡಿದ ದೂರಿನ ಮೇರೆಗೆ ಬಸವೇಶ್ವರನಗರ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಕಳೆದ ತಿಂಗಳ 20ರಂದು ಭೋಜರಾಜ್ ಅವರು ನಟ ಧನ್ವೀರ್ ಮನೆಗೆ ತೆರಳಿ ಅಲ್ಲಿಂದ ನಾಗರಾಜ್ ಅವರನ್ನು ಕರೆತಂದಿದ್ದರು ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ನಟ ಧನ್ವೀರ್, ಭೋಜರಾಜ ಅವರಿಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಆರಂಭದಲ್ಲಿ ಎರಡು ಕಡೆ ಪೊಲೀಸರು ಎನ್ಸಿಆರ್ ದಾಖಲು ಮಾಡಿಕೊಂಡಿದ್ದರು. ಈಗ ಕೋರ್ಟ್ ಸೂಚನೆಯಂತೆ ಎರಡು ಕಡೆ ಬೆದರಿಕೆ ಆರೋಪದಡಿಯಲ್ಲಿ ಎಫ್ ಐಆರ್ ದಾಖಲಾಗಿದೆ.
ಕೊಲೆ ಕೆಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಕಾನೂನು ಹೋರಾಟಕ್ಕಾಗಿ ಪತ್ನಿ ವಿಜಯಲಕ್ಷ್ಮಿ ಅವರು ನಟ ಧನ್ವೀರ್ಗೆ 10 ಕೋಟಿ ರೂಪಾಯಿ ಹಣ ನೀಡಿದ್ದರು ಎಂದು ಆರೋಪಿಸಲಾಗಿದೆ.
ಲೆಕ್ಕಪತ್ರ ನೀಡುವ ವಿಚಾರವಾಗಿ ಹಾಗೂ ಉಳಿದ ಹಣವನ್ನು ವಾಪಸ್ ಕೇಳುವ ವಿಷಯದಲ್ಲಿ ಇವರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಇದೀಗ ತೀವ್ರ ಸ್ವರೂಪ ಪಡೆದಿದೆ. ಈ ಅಕ್ರಮ ನಗದು ವಹಿವಾಟಿನ ಕುರಿತು ವಕೀಲ ಪ್ರಶಾಂತ್ ಮೆಥಲ್ ಅವರು ಜಾರಿ ನಿರ್ದೇಶನಾಲಯ (ED) ಹಾಗೂ ಆದಾಯ ತೆರಿಗೆ (IT) ಇಲಾಖೆಗೆ ಸಮಗ್ರ ತನಿಖೆ ಕೋರಿ ದೂರು ದಾಖಲಿಸಿದ್ದಾರೆ.
ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರು ನಟ ಧನ್ವೀರ್ ವಿರುದ್ಧ ರಾಜರಾಜೇಶ್ವರಿ ನಗರ (RR ನಗರ) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಧನ್ವೀರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಧನ್ವೀರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮತ್ತೊಂದೆಡೆ, ಧನ್ವೀರ್ ಮನೆಯವರ ಕಡೆಯಿಂದಲೂ ವಿಜಯಲಕ್ಷ್ಮಿ ಮತ್ತು ಅವರ ಆಪ್ತರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು (ಎನ್ಸಿಆರ್) ದಾಖಲಾಗಿದೆ.
ಈ ನಡುವೆ ಧನ್ವೀರ್ ಹಾಗೂ ಝೈದ್ ಖಾನ್ ನಡುವೆ ನಡೆದಿದೆ ಎನ್ನಲಾದ ಆಡಿಯೋ ವೈರಲ್ ಆಗಿ ವಿವಾದ ಸೃಷ್ಟಿಸಿತ್ತು. ನಂತರ ವಿಜಯಲಕ್ಷ್ಮಿ ಅವರು ಝೈದ್ ಖಾನ್ ಜೊತೆಗೂಡಿ ಜೈಲಿಗೆ ಭೇಟಿ ನೀಡಿ ದರ್ಶನ್ ಜೊತೆ ಚರ್ಚೆ ನಡೆಸಿದ್ದರು. ದರ್ಶನ್, ಧನ್ವೀರ್ ವಿರುದ್ಧ ಕಾನೂನು ಹೋರಾಟ ನಡೆಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

