ಬೆಂಗಳೂರು: ರಾಜಧಾನಿ ಬೆಂಗಳೂರಿನ ಅಪಾರ್ಟ್ ಮೆಂಟ್ ಗಳ ನಾಮಫಲಕಗಳಲ್ಲಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಈ ಕುರಿತಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರಿಗೆ ಪತ್ರ ಬರೆದಿರುವ ಅವರು, ನಗರದ ವಸತಿ ಸಮುಚ್ಛಯಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಜೊತೆಗೆ ಅವುಗಳ ವ್ಯವಸ್ಥೆಗಳಲ್ಲಿಯೂ ಕನ್ನಡ ಬಳಕೆ ಕಡ್ಡಾಯಗೊಳಿಸಬೇಕು. ಈ ಮೂಲಕ ರಾಜ್ಯ ಸರ್ಕಾರ 71ನೇ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಅನೇಕ ವಸತಿ ಸಮುಚ್ಚಯಗಳು ಆಂಗ್ಲ ಭಾಷೆಯ ಹೆಸರುಗಳನ್ನು ಹೊಂದಿವೆ. ಅವುಗಳ ನಾಮಫಲಕಗಳು ಆಂಗ್ಲ ಭಾಷೆಯಲ್ಲಿದ್ದು, ಕನ್ನಡ ಬೆಳವಣಿಗೆ ದೃಷ್ಟಿಯಿಂದ ಸೂಕ್ತವಲ್ಲ, ನಿಯಮದಂತೆ ನಾಮಫಲಕಗಳಲ್ಲಿ ಕನ್ನಡಕ್ಕೆ ಶೇಕಡ 60ರಷ್ಟು ಆಂಗ್ಲ ಭಾಷೆಗೆ ಶೇಕಡ 40ರಷ್ಟು ಅವಕಾಶ ನೀಡಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಪಾರ್ಟ್ ಮೆಂಟ್ ಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು(ಆರ್ಡಬ್ಲ್ಯುಎ) ಹೊರಡಿಸುವ ನೋಟಿಸ್, ಸುತ್ತೋಲೆ, ಪ್ರಕಟಣೆ ಹಾಗೂ ಇತರ ಆಡಳಿತಾತ್ಮಕ ವ್ಯವಹಾರಗಳಲ್ಲಿಯೂ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ವಿವಿಧ ಭಾಷೆಗಳನ್ನು ಮಾತನಾಡುವ ಜನರು ವಾಸಿಸುತ್ತಿದ್ದರೂ, ಕನ್ನಡವು ರಾಜ್ಯದ ಆಡಳಿತ ಭಾಷೆ ಮತ್ತು ಸ್ಥಳೀಯ ಭಾಷೆಯಾಗಿರುವುದರಿಂದ ಸಾರ್ವಜನಿಕ ಸಂಪರ್ಕ ಹಾಗೂ ಸಮುದಾಯದ ವ್ಯವಹಾರಗಳಲ್ಲಿ ಅದರ ಬಳಕೆಗೆ ಹೆಚ್ಚಿನ ಮಹತ್ವ ನೀಡಬೇಕೆಂಬುದು ಈ ಸಲಹೆಯ ಉದ್ದೇಶವಾಗಿದೆ.
ನೋಟಿಸ್, ಸುತ್ತೋಲೆಗಳಲ್ಲೂ ಕನ್ನಡಕ್ಕೆ ಆದ್ಯತೆ
ಅಪಾರ್ಟ್ ಮೆಂಟ್ ಗಳಲ್ಲಿ ನಿವಾಸಿಗಳಿಗೆ ನೀಡುವ ಸೂಚನೆಗಳು, ಸಭೆಗಳ ಮಾಹಿತಿ, ನಿರ್ವಹಣಾ ಶುಲ್ಕದ ವಿವರಗಳು, ನೀರು ಮತ್ತು ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಪ್ರಕಟಣೆಗಳು ಹಾಗೂ ಇತರ ಆಡಳಿತಾತ್ಮಕ ಮಾಹಿತಿಯನ್ನು ಕನ್ನಡದಲ್ಲಿ ನೀಡುವುದಕ್ಕೆ ಆದ್ಯತೆ ನೀಡಬೇಕು ಎಂಬುದು ಬಿಳಿಮಲೆ ಅವರ ಸಲಹೆಯಾಗಿದೆ.
ಅಪಾರ್ಟ್ಮೆಂಟ್ಗಳ ಪ್ರವೇಶದ್ವಾರ, ಕಟ್ಟಡದ ಹೆಸರು, ಬ್ಲಾಕ್ಗಳ ಗುರುತು ಹಾಗೂ ದಿಕ್ಕು ಸೂಚಿಸುವ ಫಲಕಗಳಲ್ಲಿ ಕನ್ನಡಕ್ಕೆ ಸೂಕ್ತ ಪ್ರಾಮುಖ್ಯ ನೀಡುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡದ ಬಳಕೆ ಹೆಚ್ಚಲಿದೆ ಎಂಬ ನಿರೀಕ್ಷೆಯಿದೆ.
ಕನ್ನಡ ಬಳಕೆಗೆ ಕಾನೂನು ಚೌಕಟ್ಟು
ಕರ್ನಾಟಕದಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಉತ್ತೇಜಿಸಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ, 2022 ಜಾರಿಯಲ್ಲಿದೆ. ಈ ಕಾಯ್ದೆಯ ಸೆಕ್ಷನ್ 17ರಲ್ಲಿ ವಿವಿಧ ಫಲಕಗಳು, ಪ್ರಕಟಣೆಗಳು ಮತ್ತು ಸಾರ್ವಜನಿಕ ಮಾಹಿತಿಯಲ್ಲಿ ಕನ್ನಡದ ಬಳಕೆಗೆ ಸಂಬಂಧಿಸಿದ ನಿಬಂಧನೆಗಳಿವೆ. ವಾಣಿಜ್ಯ ಮತ್ತು ಇತರ ಕೆಲವು ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯ ನೀಡುವ ಕುರಿತು ಕೂಡ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

