HomeIndiaಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ಗೆಲುವು ಕಾಂಗ್ರೆಸ್ ಸರ್ಕಾರದ ಅಹಂಕಾರಕ್ಕೆ ಕಪಾಳಮೋಕ್ಷ ಎಂದ HDK

ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ಗೆಲುವು ಕಾಂಗ್ರೆಸ್ ಸರ್ಕಾರದ ಅಹಂಕಾರಕ್ಕೆ ಕಪಾಳಮೋಕ್ಷ ಎಂದ HDK

ನವದೆಹಲಿ-ವಿಧಾನ ಪರಿಷತ್ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣಾ ಫಲಿತಾಂಶವು ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತ, ರೈತ ವಿರೋಧಿ ಧೋರಣೆ ಹಾಗೂ ಭ್ರಷ್ಟ ನೀತಿಗಳಿಗೆ ಮತದಾರರು ನೀಡಿರುವ ನೇರ ಕಪಾಳಮೋಕ್ಷ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.

ಎನ್‌ಡಿಎ ಮೈತ್ರಿಕೂಟದ ನಾಲ್ಕೂ ಅಭ್ಯರ್ಥಿಗಳ ಜಯವು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಹೋರಾಟಕ್ಕೆ ನಾಡಿನ ಜನತೆಯ ಆಶೀರ್ವಾದವಿದೆ ಎಂಬುದಕ್ಕೆ ಸ್ಪಷ್ಟ ದಿಕ್ಸೂಚಿ ಎಂದು ಅವರು ಬಣ್ಣಿಸಿದರು.

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಾದ ಶಶೀಲ್ ನಮೋಶಿ, ಎಸ್.ವಿ.ಸಂಕನೂರು, ಕೆ.ಎಂ.ಸುರೇಶ್ ಹಾಗೂ ಎ.ಪಿ.ರಂಗನಾಥ್ ಗೆಲುವು ಸಾಧಿಸಿದ್ದಾರೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು. ಜೆಡಿಎಸ್ ಮುಖಂಡರು, ಕಾರ್ಯಕರ್ತರ ಅತ್ಯುತ್ತಮ ಸಮನ್ವಯತೆಯಿಂದ ಇಂಥ ಗೆಲುವು ಸಾಧ್ಯವಾಗಿದೆ. 2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಾರ್ವಜನಿಕವಾಗಿ ಬೀಗುತ್ತಿದ್ದ ಮುಖ್ಯಮಂತ್ರಿಗಳು ಮತ್ತು ಸಚಿವರ ಅಹಂಕಾರವನ್ನು ಪ್ರಜ್ಞಾವಂತ ಮತದಾರರು ಮಣ್ಣುಪಾಲು ಮಾಡಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಿನನಿತ್ಯ ಕೇವಲ ಬಾಯಿಮಾತಿನ ಭರವಸೆಗಳು ಮತ್ತು ಘೋಷಣೆಗಳಿಗೆ ಸೀಮಿತವಾಗಿರುವ ಈ ಸರ್ಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಬಿಡದಿಯ ರೈತ ವಿರೋಧಿ ಭೂಸ್ವಾಧೀನ ನೀತಿ, ನೈಸ್ (BMIC) ಯೋಜನೆಯ ಅಕ್ರಮಗಳು, ಕೆಪಿಎಸ್‌ಸಿ (KPSC) ಪರೀಕ್ಷಾ ಹಗರಣಗಳು ಮತ್ತು ಯುವಜನತೆಗೆ ಮಾಡಿದ ಮೋಸ ಹಾಗೂ ಸ್ವತಃ ಮುಖ್ಯಮಂತ್ರಿಗಳೇ ಹುಟ್ಟುಹಾಕಿದ ಸ್ಟಿಂಗ್ ಆಪರೇಷನ್ ಪ್ರಕರಣಗಳ ವಿರುದ್ಧ ಮತದಾರರು ತಮ್ಮ ಆಕ್ರೋಶವನ್ನು ಮತಗಳ ರೂಪದಲ್ಲಿ ಹೊರಹಾಕಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಧಾನಿ ಮೋದಿ ಹಾಗೂ ದೇವೇಗೌಡರ ಕೊಡುಗೆ

ಪ್ರಧಾನಿ ಮೋದಿ ಹಾಗೂ ದೇವೇಗೌಡರ ಕೊಡುಗೆ ಸ್ಮರಿಸಿದ ಕೇಂದ್ರ ಸಚಿವರು:

ಗೆಲುವು ಸಾಧಿಸಿದ ನಾಲ್ಕೂ ಮೈತ್ರಿ ಅಭ್ಯರ್ಥಿಗಳಿಗೆ ಹಾಗೂ ಹಗಲಿರುಳು ಶ್ರಮಿಸಿದ ಬಿಜೆಪಿ ಮತ್ತು ಜೆಡಿಎಸ್‌ನ ಕಾರ್ಯಕರ್ತರು, ಶಾಸಕರು ಮತ್ತು ಮುಖಂಡರಿಗೆ ಅಭಿನಂದನೆ ಸಲ್ಲಿಸಿದ ಸಚಿವರು; ಉಭಯ ಪಕ್ಷಗಳ ನಡುವೆ ಗಟ್ಟಿಯಾದ ಸಮನ್ವಯತೆ ಮೂಡಿಸಲು ಪ್ರತಿದಿನ ತಮ್ಮೊಂದಿಗೆ ಸಂಪರ್ಕದಲ್ಲಿದ್ದು ದೊಡ್ಡ ಜವಾಬ್ದಾರಿ ನಿಭಾಯಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಶ್ರಮವನ್ನು ವಿಶೇಷವಾಗಿ ಶ್ಲಾಘಿಸಿದರು.

ದೇಶದ ಸಮಗ್ರ ಪ್ರಗತಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ತರ ಕೊಡುಗೆ ಮತ್ತು ಅವರ ಜನಪ್ರಿಯ ವರ್ಚಸ್ಸು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರ ಸುದೀರ್ಘ ಪರಿಶ್ರಮ ಮತ್ತು ಜನರಲ್ಲಿದ್ದ ಅವರ ಮೇಲಿನ ಒಲವು ಈ ಗೆಲುವಿಗೆ ಪ್ರಮುಖ ಅಡಿಪಾಯವಾಗಿದೆ. 2028ರಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಮತ್ತು ಅಭಿವೃದ್ಧಿಪರ ಆಡಳಿತ ಮರಳಿ ತರಬೇಕೆಂಬ ಸ್ಪಷ್ಟ ಸಂದೇಶವನ್ನು ಮತದಾರರು ನೀಡಿದ್ದಾರೆ ಎಂದು ಅವರು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular