ದೇಹದ ತೂಕ ಹೆಚ್ಚಾಗುವುದು ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ತೂಕ ಇಳಿಸಿಕೊಳ್ಳಲು ಗಂಟೆಗಟ್ಟಲೆ ಜಿಮ್ನಲ್ಲಿ ಕಷ್ಟಪಡುವುದು, ಶಿಸ್ತಿನ ಆಹಾರ ಪದ್ಧತಿ ಪಾಲಿಸುವುದು ಸೇರಿದಂತೆ ಏನೆಲ್ಲಾ ಪ್ರಯತ್ನಗಳನ್ನು ಮಾಡಿದರೂ ಕೆಲವರಿಗೆ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಅಸಮತೋಲಿತ ಆಹಾರ, ವ್ಯಾಯಾಮದ ಕೊರತೆ ಮತ್ತು ಜೀವನಶೈಲಿಯ ಲೋಪಗಳು ತೂಕ ಹೆಚ್ಚಳಕ್ಕೆ ಕಾರಣ ಎಂಬುದು ನಿಜವಾದರೂ, ಇದರ ಹಿಂದೆ ಮತ್ತೊಂದು ಪ್ರಮುಖ ಕಾರಣವಿರಬಹುದು. ಅದೇ ದೇಹದಲ್ಲಿ ಹೆಚ್ಚಾಗುವ ಕಾರ್ಟಿಸಾಲ್ ಹಾರ್ಮೋನ್ ಮಟ್ಟ.
ಏನಿದು ಕಾರ್ಟಿಸಾಲ್ ಹಾರ್ಮೋನ್? ಕಾರ್ಟಿಸಾಲ್ ಅನ್ನು ಸಾಮಾನ್ಯವಾಗಿ ಒತ್ತಡದ ಹಾರ್ಮೋನ್ ಎಂದು ಕರೆಯಲಾಗುತ್ತದೆ. ವ್ಯಕ್ತಿ ಅತಿಯಾದ ಸವಾಲು ಅಥವಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ಕಿಡ್ನಿಗಳ ಮೇಲ್ಭಾಗದಲ್ಲಿರುವ ಅಡ್ರಿನಲ್ ಗ್ರಂಥಿಗಳು ಈ ಹಾರ್ಮೋನ್ ಅನ್ನು ಸ್ರವಿಸುತ್ತವೆ. ಇದು ದೇಹದ ಶಕ್ತಿಯ ಮಟ್ಟವನ್ನು ನಿಯಂತ್ರಿಸಲು ಮತ್ತು ಒತ್ತಡದ ಸಂದರ್ಭಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಆದರೆ, ಈ ಹಾರ್ಮೋನ್ ಸತತವಾಗಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾದರೆ ತೂಕ ನಿರ್ವಹಣೆ ಕಷ್ಟವಾಗುತ್ತದೆ. ಕಾರ್ಟಿಸಾಲ್ ಮಟ್ಟ ಹೆಚ್ಚಾದಾಗ ಸಿಹಿ, ಉಪ್ಪು ಮತ್ತು ಹೆಚ್ಚು ಕ್ಯಾಲೋರಿ ಇರುವ ಆಹಾರಗಳ ಮೇಲೆ ಆಸೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ, ಇದು ವಿಶೇಷವಾಗಿ ಹೊಟ್ಟೆಯ ಭಾಗದಲ್ಲಿ ಕೊಬ್ಬು ಶೇಖರಣೆಯಾಗಲು ಕಾರಣವಾಗುತ್ತದೆ.
ದೇಹದಲ್ಲಿ ಕಾರ್ಟಿಸಾಲ್ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಣದಲ್ಲಿಡಲು ಪ್ರಸಿದ್ಧ ಆಹಾರ ತಜ್ಞೆ ರಿಚಾ ಗಂಗಾನಿ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸರಳ ಪಾನೀಯವೊಂದನ್ನು ಪರಿಚಯಿಸಿದ್ದಾರೆ. ಸೂಕ್ತ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯೊಂದಿಗೆ ಈ ಪಾನೀಯವನ್ನು ಸೇವಿಸಿದರೆ ತೂಕ ಇಳಿಕೆಗೆ ಉತ್ತಮ ಬೆಂಬಲ ಸಿಗುತ್ತದೆ ಎಂದು ಅವರು ತಿಳಿಸಿದ್ದಾರೆ.
ತಯಾರಿಸುವ ವಿಧಾನ ಮತ್ತು ಬಳಸುವ ಪದಾರ್ಥಗಳು ಈ ಮನೆಮದ್ದು ತಯಾರಿಸಲು ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ ಒಂದು ಬಿರಿಯಾನಿ ಎಲೆ, ಅಲ್ಪ ಪ್ರಮಾಣದ ಸೋಂಪು ಕಾಳು, ಒಂದು ಚಕ್ರಮೊಗ್ಗು ಹಾಗೂ ಕೆಲವು ನಿಂಬೆಹಣ್ಣಿನ ಚೂರುಗಳನ್ನು ಸೇರಿಸಿ. ಈ ಮಿಶ್ರಣವನ್ನು ಐದರಿಂದ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ನೀರನ್ನು ಸೋಸಿಕೊಂಡು ಕಾಯಿಸಿ ಆರಿದ ಉಗುರುಬೆಚ್ಚಗಿನ ಹಂತಕ್ಕೆ ಬಂದಾಗ ರಾತ್ರಿ ಮಲಗುವ ಮುನ್ನ ಕುಡಿಯಬೇಕು.
ಈ ವಿಶೇಷ ಪಾನೀಯವು ಕೇವಲ ಕಾರ್ಟಿಸಾಲ್ ಹಾರ್ಮೋನ್ ಸಮತೋಲನಕ್ಕೆ ಮಾತ್ರವಲ್ಲದೆ, ಹೊಟ್ಟೆ ಉಬ್ಬರ ಶಮನಗೊಳಿಸಲು ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ ಎಂದು ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

