ಬಳ್ಳಾರಿ : ನಗರದಲ್ಲಿ ನಿಯಮಬಾಹಿರವಾಗಿ ಹಾಗೂ ಅಶುಚಿತ್ವದಿಂದ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜಂಟಿ ತಂಡವು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ನಿಯಮ ಉಲ್ಲಂಘಿಸಿದ ಎರಡು ಹೋಟೆಲ್‌ಗಳಿಗೆ ಸ್ಥಳದಲ್ಲೇ ಒಟ್ಟು ರೂ.50,000 ದಂಡ ವಿಧಿಸಲಾಗಿದೆ.
ಜಿಲ್ಲಾ ಅಂಕಿತ ಅಧಿಕಾರಿಗಳ ನೇತೃತ್ವದಲ್ಲಿ, ಆಹಾರ ಸುರಕ್ಷತೆ ಅಧಿಕಾರಿಗಳು ಮತ್ತು ಬಳ್ಳಾರಿ ತಹಶೀಲ್ದಾರರ ತಂಡವು ನಗರದ ಪ್ರಮುಖ ಹೋಟೆಲ್‌ಗಳು ಮತ್ತು ಬೇಕರಿಯ ಮೇಲೆ ಈ ಕಾರ್ಯಾಚರಣೆ ನಡೆಸಿದೆ.
ಹೋಟೆಲ್ ಮಯೂರ ಪರಿಶೀಲನೆ (ಹಳೇ ಬಸ್ ನಿಲ್ದಾಣದ ಎದುರು)
ಅಧಿಕಾರಿಗಳು ಹಳೇ ಬಸ್ ನಿಲ್ದಾಣದ ಎದುರಿಗಿರುವ ಹೋಟೆಲ್ ಮಯೂರಕ್ಕೆ ಭೇಟಿ ನೀಡಿದಾಗ ಹಲವು ಗಂಭೀರ ಲೋಪಗಳು ಪತ್ತೆಯಾಗಿದ್ದು, ಆಹಾರ ಸುರಕ್ಷತಾ ಕಾಯ್ದೆಯಡಿ ಯಾವುದೇ ಪರವಾನಿಗೆ ಪಡೆಯದೆ ಹೋಟೆಲ್ ನಡೆಸಲಾಗುತ್ತಿತ್ತು. ಆಹಾರ ತಯಾರಿಸುವ ಜಾಗದಲ್ಲಿ ತೀವ್ರ ಅಶುಚಿತ್ವ, ಗೋಡೆ ಹಾಗೂ ಕಿಟಕಿಗಳಲ್ಲಿ ಧೂಳು ಆವರಿಸಿತ್ತು ಮತ್ತು ಚರಂಡಿ ವ್ಯವಸ್ಥೆ ಸರಿಯಾಗಿರಲಿಲ್ಲ. ಅಡುಗೆ ತಯಾರಕರು ಗ್ಲೌಸ್ ಹಾಗೂ ಮಾಸ್ಕ್ ಧರಿಸಿರಲಿಲ್ಲ. ಕಲಬೆರಕೆ ಶಂಕೆಯ ಮೇಲೆ ಸ್ಥಳದಲ್ಲೇ 8 ಆಹಾರ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಯಿತು.
ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಅಡಿಯಲ್ಲಿ ಹೋಟೆಲ್ ಗೆ ಸ್ಥಳದಲ್ಲೇ ರೂ.25,000 ದಂಡ ವಿಧಿಸಿ, ನ್ಯೂನತೆಗಳನ್ನು ತಕ್ಷಣವೇ ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಲಾಯಿತು.
ಹೋಟೆಲ್ ರೇಣುಕಾ ದರ್ಶಿನಿ ಪರಿಶೀಲನೆ (ದುರ್ಗಮ್ಮ ಗುಡಿ ಸರ್ಕಲ್):
ದುರ್ಗಮ್ಮ ಗುಡಿ ವೃತ್ತದಲ್ಲಿರುವ ಹೋಟೆಲ್ ರೇಣುಕಾ ದರ್ಶಿನಿಯಲ್ಲೂ ಪರವಾನಿಗೆ ಇಲ್ಲದೆ ವ್ಯಾಪಾರ ನಡೆಸುತ್ತಿರುವುದು ಕಂಡುಬಂದಿದೆ. ಆಹಾರ ತಯಾರಿಕಾ ಸ್ಥಳದಲ್ಲಿ ಶುಚಿತ್ವದ ಕೊರತೆ ಮತ್ತು ಧೂಳು ತುಂಬಿತ್ತು. ಕೆಲಸಗಾರರು ಮಾಸ್ಕ್ ಹಾಗೂ ಗ್ಲೌಸ್ ಬಳಸುತ್ತಿರಲಿಲ್ಲ. ಪರಿಶೀಲನೆ ವೇಳೆ ಅಡುಗೆಗೆ ಕೊಳೆತ ತರಕಾರಿ ಬಳಸುತ್ತಿರುವುದು ಹಾಗೂ ಟೀ ಪುಡಿಗೆ ಬಣ್ಣ ಮಿಶ್ರಣ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹೋಟೆಲ್‌ನಿಂದಲೂ ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ನಿಯಮ ಉಲ್ಲಂಘನೆಗಾಗಿ ಸ್ಥಳದಲ್ಲೇ ರೂ.25,000 ದಂಡ ವಿಧಿಸಲಾಯಿತು.
ರೇಣುಕಾ ಬೇಕರಿ ಪರಿಶೀಲನೆ:
ದುರ್ಗಮ್ಮ ಗುಡಿ ಸರ್ಕಲ್ ಬಳಿಯಿರುವ ರೇಣುಕಾ ಬೇಕರಿಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. ಇಲ್ಲಿಂದ 3 ಆಹಾರ ಮಾದರಿಗಳನ್ನು ಸಂಗ್ರಹಿಸಲಾಯಿತಾದರೂ, ಬೇಕರಿ ಆವರಣವು ಸ್ವಚ್ಛವಾಗಿ ನಿರ್ವಹಿಸಲ್ಪಟ್ಟಿರುವುದು ಕಂಡುಬಂದಿದೆ. ಯಾವುದೇ ನ್ಯೂನತೆಗಳು ಇಲ್ಲದ ಕಾರಣ, ಮುಂದೆಯೂ ಇದೇ ರೀತಿ ಸ್ವಚ್ಛತೆ ಕಾಪಾಡಿಕೊಂಡು ಹೋಗುವಂತೆ ಮಾಲೀಕರಿಗೆ ಸಲಹೆ ನೀಡಲಾಯಿತು.
ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಹಾಗೂ ಅಶುಚಿತ್ವ ಕಂಡುಬಂದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

