ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಕೆ. ಎಂ. ಸುರೇಶ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಅಕ್ಟೋಬರ್ 23, 2026 ರಂದು ನಡೆದಿದ್ದ ಮತದಾನದ ಎಣಿಕೆಯು ಅಕ್ಟೋಬರ್ 27ರಂದು ನಡೆದು ಅಧಿಕೃತ ಫಲಿತಾಂಶ ಹೊರಬಿದ್ದಿದೆ.
• ವಿಜೇತ ಅಭ್ಯರ್ಥಿ: ಕೆ. ಎಂ. ಸುರೇಶ್ (ಬಿಜೆಪಿ-ಜೆಡಿಎಸ್ ಮೈತ್ರಿಕೂಟ)
• ಸಮೀಪದ ಸ್ಪರ್ಧಿ: ಶಶಿ ಹುಲಿಕುಂಟೆಮಠ (ಕಾಂಗ್ರೆಸ್)
• ಮತದಾನದ ಶೇಕಡಾವಾರು: ಈ ಕ್ಷೇತ್ರದಲ್ಲಿ ಶೇಕಡಾ 73.58% ರಷ್ಟು ಮತದಾನ ದಾಖಲಾಗಿತ್ತು.
ಈ ಕ್ಷೇತ್ರವನ್ನು ಈ ಹಿಂದೆ ಪ್ರತಿನಿಧಿಸುತ್ತಿದ್ದ ಬಿಜೆಪಿಯ ಚಿದಾನಂದ್ ಎಂ. ಗೌಡ ಅವರು ಈ ಬಾರಿ ಚುನಾವಣಾ ಕಣದಿಂದ ಹೊರಗುಳಿದಿದ್ದ ಕಾರಣ, ಮೈತ್ರಿಕೂಟದ ವತಿಯಿಂದ ಹೊಸ ಮುಖವಾಗಿ ಕೆ. ಎಂ. ಸುರೇಶ್ ಅವರನ್ನು ಕಣಕ್ಕಿಳಿಸಲಾಗಿತ್ತು. ಅವರು ಕಾಂಗ್ರೆಸ್‌ನ ಶಶಿ ಹುಲಿಕುಂಟೆಮಠ ವಿರುದ್ಧ ಆರಂಭದಿಂದಲೂ ಭಾರೀ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ ಜಯದ ಮಾಲೆ ಧರಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎಗೆ ಮತ್ತೊಂದು ಸ್ಥಾನ
ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ ವಿರುದ್ಧ ಅವರು ಜಯಗಳಿಸಿದ್ದು, ಈ ಮೂಲಕ ಬಿಜೆಪಿ–ಜೆಡಿಎಸ್ ಮೈತ್ರಿಕೂಟಕ್ಕೆ ಮತ್ತೊಂದು ಗೆಲುವು ಲಭಿಸಿದೆ.
ಅಕ್ಟೋಬರ್ 23ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಅಕ್ಟೋಬರ್ 27ರಂದು ಆರಂಭವಾಗಿತ್ತು. ಆರಂಭಿಕ ಸುತ್ತುಗಳಲ್ಲಿ ಕೆ.ಎಂ. ಸುರೇಶ್ ಮುನ್ನಡೆ ಸಾಧಿಸಿದ್ದರು. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶೇ. 73.58ರಷ್ಟು ಮತದಾನ ದಾಖಲಾಗಿತ್ತು.
ಕಾಂಗ್ರೆಸ್‌ಗೆ ಹಿನ್ನಡೆ
ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಸುರೇಶ್ ಅವರ ಗೆಲುವಿನೊಂದಿಗೆ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.
ಆರ್. ಅಶೋಕ್ ಅಭಿನಂದನೆ
ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕೆ.ಎಂ. ಸುರೇಶ್ ಅವರಿಗೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಐತಿಹಾಸಿಕ ಗೆಲುವು ಎನ್‌ಡಿಎ ಮೈತ್ರಿಕೂಟದ ಒಗ್ಗಟ್ಟು, ಸಂಘಟನಾ ಶಕ್ತಿ ಹಾಗೂ ಪದವೀಧರ ಮತದಾರರು ನಮ್ಮ ಮೈತ್ರಿಕೂಟದ ಮೇಲೆ ಇಟ್ಟಿರುವ ಅಚಲ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ನಾಲ್ಕು ಕ್ಷೇತ್ರಗಳಲ್ಲಿ ಎನ್‌ಡಿಎ ಸಾಧಿಸಿರುವ ಈ ವಿಜಯ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳಿಗೆ ಜನರು ನೀಡಿರುವ ಸ್ಪಷ್ಟ ಉತ್ತರವಾಗಿದೆ. ಮುಂಬರುವ ಚುನಾವಣೆಗಳಲ್ಲಿ ರಾಜ್ಯದಲ್ಲಿ ಎನ್‌ಡಿಎ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದೆ ಎಂಬುದಕ್ಕೆ ಈ ಫಲಿತಾಂಶ ಮುನ್ನುಡಿಯಾಗಿದೆ ಎಂದು ತಿಳಿಸಿದ್ದಾರೆ.
ಪದವೀಧರರ ಆಶಯಗಳಿಗೆ ಧ್ವನಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕ್ಷೇತ್ರದ ಅಭಿವೃದ್ಧಿ ಹಾಗೂ ಜನಹಿತದ ಕಾರ್ಯಗಳಲ್ಲಿ ಕೆ.ಎಂ. ಸುರೇಶ್ ಅವರು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಈ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಎನ್‌ಡಿಎ ಮೈತ್ರಿಕೂಟದ ಎಲ್ಲಾ ನಾಯಕರು, ಪದಾಧಿಕಾರಿಗಳು ಹಾಗೂ ಸಮರ್ಪಿತ ಕಾರ್ಯಕರ್ತರ ಪರಿಶ್ರಮ ಶ್ಲಾಘನೀಯ. ಕಾರ್ಯಕರ್ತರ ಸಂಘಟಿತ ಶ್ರಮ ಹಾಗೂ ಮತದಾರರ ಬೆಂಬಲದಿಂದ ಈ ವಿಜಯ ಸಾಧ್ಯವಾಗಿದೆ. ಸರ್ವರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಅಶೋಕ್ ತಿಳಿಸಿದ್ದಾರೆ.

