HomeKarnatakaತಪ್ಪಾಗಿದ್ದರೆ ತಿದ್ದುಕೊಳ್ಳುತ್ತೇವೆ: ಮೈಸೂರು ರಾಜಮನೆತನದ ಬಗ್ಗೆ ಗೌರವವಿದೆ: ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದ ಸಿಎಂ ಡಿ.ಕೆ.ಶಿವಕುಮಾರ್

ತಪ್ಪಾಗಿದ್ದರೆ ತಿದ್ದುಕೊಳ್ಳುತ್ತೇವೆ: ಮೈಸೂರು ರಾಜಮನೆತನದ ಬಗ್ಗೆ ಗೌರವವಿದೆ: ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದ ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ಸಂಬಂಧಿಸಿದಂತೆ ರಾಜಮಾತೆ ಪ್ರಮೋದಾದೇವಿಯವರ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಡಿ.ಕೆ.ಶಿವಕುಮಾರ್, ಈ ವಿಚಾರ ಪತ್ರಿಕೆಗಳಿಂದ ತಿಳಿದುಬಂದಿದ್ದು, ಮೈಸೂರು ರಾಜ ಮನೆತನಕ್ಕೆ ನಾವು ಖಂಡಿತ ಗೌರವ ಕೊಡುತ್ತೇವೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಸಂಸದ ಪೋಟೋ ಪತ್ರಿಕೆಯಲ್ಲಿ ಹಾಕಿಸಲಾಗಿದೆ. ಬೇಕಾದಷ್ಟು ಟೀಕೆಗಳು ಬಂದಿವೆ. ಮೊದಲಿನಿಂದ ಬಂದಿರುವ ಪದ್ಧತಿಯಂತೆಯೇ ನಡೆದುಕೊಳ್ಳಬೇಕು. ನಾವು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರು ಹೇಳಿರುವ ಕಾನೂನು ಬಗ್ಗೆ ಪರಿಶೀಲಿಸಿ, ಚರ್ಚೆ ಮಾಡುತ್ತೇವೆ. ಇದು ಯಾರ ವೈಯಕ್ತಿಕ ವಿಚಾರವೂ ಅಲ್ಲ. ಇದು ರಾಜ್ಯದ ವಿಚಾರ. ಮೊದಲಿನಿಂದ ರಾಜ ಮನೆತನ ರಾಜ್ಯಕ್ಕೆ ಸೇವೆ ಸಲ್ಲಿಸಿದೆ. ಅದಕ್ಕೆ ಗೌರವ ಸಲ್ಲಿಸಿ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಏಕಾಏಕಿ, ಅಧಿಕಾರಿಗಳು ಗೌರವ ಕೊಡಲಿಲ್ಲ, ಆನೆ ಮಾತು ಕೇಳಲಿಲ್ಲ ಎಂದರೆ ಕಷ್ಟ ಎಂದರು.

ಮೈಸೂರು ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಮಂತ್ರಿಗಳು ಹಾಗೂ ಶಾಸಕರಿಗೆ ವಿವಿಧ ದಿನಗಳ ಜವಾಬ್ದಾರಿಗಳನ್ನು ವಹಿಸಲಾಗಿತ್ತು. ಹೊಸ ಆನೆಗೆ ತರಬೇತಿ ನೀಡಲಾಗಿತ್ತು. ಪ್ರಶಾಂತ ಎಂಬ ಆನೆಯನ್ನು ತರಲಾಯಿತು. ಎಲ್ಲಕ್ಕೂ ಅರಮನೆಯನ್ನು ಕೇಳಲು ಸಾಧ್ಯವಿಲ್ಲ. ಪದ್ಧತಿ ಏನಿದೆ ಎಂದು ಪರಿಶೀಲಿಸುತ್ತೇನೆ. ಶಿವಮೊಗ್ಗದಲ್ಲಿ ಅಚಾತುರ್ಯ ನಡೆದಿದೆ. ಅದಕ್ಕೆ ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಸಚಿವರಿಗೆ ಸೂಚಿಸಲಾಗಿತ್ತು. ವಿದೇಶಿ ಗಣ್ಯರು ಮತ್ತು ಗಣ್ಯರನ್ನು ಸ್ವಾಗತಿಸುವ ಹಾಗೂ ದಸರಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಲ್ಲಿ ಎಲ್ಲರ ಸಹಕಾರ ಪಡೆಯಲಾಗಿದೆ ಎಂದು ವಿವರಿಸಿದರು

ದಸರಾ ನಾಡ ಹಬ್ಬ. ನಾಡಿನ ದೇವತೆಯನ್ನು ಗೌರವಿಸಬೇಕು. ದಸರಾ ಬಹಳ ದೊಡ್ಡ ಕಾರ್ಯಕ್ರಮವಾಗಿದ್ದು ಸುಲಭದ್ದಲ್ಲ. ಇದಕ್ಕೆ ಹೊಸ ಹೊಸ ಆಯಾಮಗಳಿವೆ. ಚಿತ್ರರಂಗದವರು, ಕ್ರೀಡಾಪಟುಗಳು ಸಹ ಭಾಗವಹಿಸಿದ್ದರು. ನನಗೂ ಇದು ಮುಖ್ಯಮಂತ್ರಿಯಾದ ನಂತರ ಮೊದಲ ದಸರಾ ಆಗಿದ್ದರಿಂದ ಅನುಭವವಿಲ್ಲ. ಎಲ್ಲರೂ ಅವರವರ ಕರ್ತವ್ಯ ಮಾಡಿದ್ದಾರೆ. ಇದು ಯಾರೊಬ್ಬರ ಕಾರ್ಯಕ್ರಮವಲ್ಲ. ಸರ್ಕಾರದ ಕಾರ್ಯಕ್ರಮ. ನಾವು ಕೂಡ ತರಬೇತಿ ಪಡೆಯುತ್ತಿದ್ದೇವೆ. ಏನಾದರೂ ತಪ್ಪಿದ್ದರೆ ತಿದ್ದುಕೊಳ್ಳುತ್ತೇವೆ ಎಂದು ತಿಳಿಸಿದರು.

ದಸರಾ ಏಳು ದಿನಗಳ ಕಾಲ ಆಗಬೇಕು ಎಂಬ ರಾಜಮಾತೆಯ ಹೇಳಿಕೆಗೆ, ಅದರ ಬಗ್ಗೆ ನನಗೆ ತಿಳಿದಿಲ್ಲ. ಇತಿಹಾಸದ ಪುಟಗಳನ್ನು ತೆರೆಯಬೇಕು. ಪರಂಪರೆಯ ಪ್ರಕಾರ, ನೂರಾರು ವರ್ಷಗಳ ಕಾಲ ನಡೆದುಕೊಂಡು ಬಂದಂತೆ ನಡೆಯುತ್ತಿದ್ದೇವೆ. ರಾಜ್ಯದ ಹಿತ, ಗೌರವಕ್ಕೆ ಧಕ್ಕೆಯಾಗಬಾರದು ಎಂದರು.

ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಅದಿಲ್ಲದಿದ್ದರೆ ಅವರು ಹೇಳಿದಂತೆಲ್ಲ ಕೇಳಬಹುದಿತ್ತು. ಪ್ರಜಾಪ್ರಭುತ್ವದ ಮತ್ತು ಕಾನೂನಿನ ಚೌಕಟ್ಟಿನೊಳಗೆ, ಸಂಪ್ರದಾಯಗಳನ್ನು ಗಮನದಲ್ಲಿಟ್ಟುಕೊಂಡು ದಸರಾ ವ್ಯವಸ್ಥೆ ಮಾಡಲಾಗಿದೆ ಎಂದರು.

ಇದೇ ವೇಳೆ ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಇಂದು ಬೆಂಗಳೂರು ಶಾಸಕರೊಂದಿಗೆ ಸಭೆ ಕರೆಯಲಾಗಿದೆ. ಕೆಲವು ವಿಚಾರಗಳನ್ನು ಚರ್ಚಿಸಲೆಂದು ಸಭೆ ಕರೆಯಲಾಗಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರದ ಕುರಿತು ಎಸ್‌ಸಿ/ಎಸ್‌ಟಿ ಶಾಸಕರ ಸಭೆ ಕರೆಯಲಾಗಿದೆ. ನಂತರದಲ್ಲಿ ಹಿಂದುಳಿದ ವರ್ಗಗಳ ಶಾಸಕರು, ಮುಖಂಡರು, ಲಿಂಗಾಯತ ಮತ್ತು ಒಕ್ಕಲಿಗ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಜೊತೆ ಸಭೆ ನಡೆಸಿ ಚರ್ಚಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು

ಇನ್ನು ನವೆಂಬರ್ ಒಂದರಂದು ರಾಜ್ಯೋತ್ಸವ ಆಚರಣೆ ಇರುವುದರಿಂದ ದೆಹಲಿಗೆ ತೆರಳುತ್ತಿಲ್ಲ ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular