ನವದೆಹಲಿ: ಅರುಣಾಚಲ ಪ್ರದೇಶದ ಗಡಿ ಪ್ರದೇಶಗಳನ್ನು ಚೀನಾ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ವೀಡಿಯೊ ಸಂಪೂರ್ಣ ನಕಲಿ ಮತ್ತು ಡೀಪ್‌ಫೇಕ್ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಭಾರತೀಯ ಸೇನೆಯ ಅಧಿಕೃತ ಸತ್ಯಶೋಧನಾ ವಿಭಾಗವಾದ ‘ಇಂಡಿಯನ್ ಆರ್ಮಿ ಫ್ಯಾಕ್ಟ್ ಚೆಕ್’ ಈ ಕುರಿತು ಸಾರ್ವಜನಿಕ ಎಚ್ಚರಿಕೆ ನೀಡಿದ್ದು, ದೇಶದ ಭದ್ರತೆ ಮತ್ತು ಸೈನಿಕರ ಸನ್ನದ್ಧತೆಯ ಬಗ್ಗೆ ಸಾರ್ವಜನಿಕರಲ್ಲಿ ವಿನಾಕಾರಣ ಭೀತಿ ಮೂಡಿಸಲು ಈ ದುರುದ್ದೇಶಪೂರಿತ ವೀಡಿಯೊವನ್ನು ಹರಡಲಾಗುತ್ತಿದೆ ಎಂದು ತಿಳಿಸಿದೆ.
ವೈರಲ್ ವೀಡಿಯೊದಲ್ಲಿ ಚೀನಾ ದೇಶವು ಅರುಣಾಚಲ ಪ್ರದೇಶದ ಅಸಾಫಿಲಾ, ಲಾಂಗ್‌ಜೌ ಮತ್ತು ಟೇಕ್ಸಿಂಗ್ ಸರ್ಕಲ್ ಪ್ರದೇಶಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಹಾಗೂ ಅಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೈನಿಕರಿಗೆ ಅಗತ್ಯ ಸಾಮಗ್ರಿಗಳನ್ನು ನಿರಾಕರಿಸಲಾಗಿದೆ ಎಂದು ಸುಳ್ಳು ಆರೋಪ ಮಾಡಲಾಗಿತ್ತು.
ಸ್ಪಿಯರ್ ಕಾರ್ಪ್ಸ್ (3 ಕಾರ್ಪ್ಸ್) ನ ಲೆಫ್ಟಿನೆಂಟ್ ಜನರಲ್ ಗಿರೀಶ್ ಕಾಲಿಯಾ ಅವರ ಹಳೆಯ ಅಧಿಕೃತ ವೀಡಿಯೊವನ್ನು ಬಳಸಿಕೊಂಡು, ಅದಕ್ಕೆ ಕೃತಕ ಬುದ್ಧಿಮತ್ತೆ (AI) ಲಿಪ್-ಸಿಂಕಿಂಗ್ ಮತ್ತು ವಾಯ್ಸ್ ಕ್ಲೋನಿಂಗ್ (Synthetic Generated Information) ತಂತ್ರಜ್ಞಾನದ ಮೂಲಕ ಸುಳ್ಳು ಆಡಿಯೊವನ್ನು ಜೋಡಿಸಲಾಗಿದೆ. ಹಿರಿಯ ಸೇನಾ ಅಧಿಕಾರಿಯೇ ಈ ವಿಷಯವನ್ನು ಸೋರಿಕೆ ಮಾಡಿದ್ದಾರೆ ಎಂಬಂತೆ ಬಿಂಬಿಸಲು ಪ್ರಯತ್ನಿಸಲಾಗಿತ್ತು.
ಅಕ್ಟೋಬರ್ 27, 2023 ರಂದು ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ, ಆಗಿನ 28ನೇ ಪದಾತಿದಳ ವಿಭಾಗದ (28 Infantry Division) ಜನರಲ್ ಆಫೀಸರ್ ಕಮಾಂಡಿಂಗ್ (GOC) ಮೇಜರ್ ಜನರಲ್ ಗಿರೀಶ್ ಕಾಲಿಯಾ ಅವರು ನಡೆಸಿದ ಪತ್ರಿಕಾ ಗೋಷ್ಠಿಯ ದೃಶ್ಯಾವಳಿ ಇದಾಗಿದೆ ಎಂದು ಅದು ತಿಳಿಸಿದೆ.
“ಲೆಫ್ಟಿನೆಂಟ್ ಜನರಲ್ ಗಿರೀಶ್ ಕಾಲಿಯಾ ಅವರು ಹೇಳದ ಮಾತುಗಳನ್ನು ಹೇಳಿದ್ದಾರೆ ಎಂದು ಬಿಂಬಿಸಲು ಈ ವೀಡಿಯೊದಲ್ಲಿ #SyntheticGeneratedInformation (ಕೃತಕವಾಗಿ ಸೃಷ್ಟಿಸಲಾದ ಮಾಹಿತಿ) ಬಳಸಲಾಗಿದೆ. ಈ ಮೂಲ ದೃಶ್ಯಾವಳಿಯು, ಅಕ್ಟೋಬರ್ 27, 2023 ರಂದು ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ, ಆಗಿನ 28ನೇ ಪದಾತಿದಳ ವಿಭಾಗದ GOC ಮೇಜರ್ ಜನರಲ್ ಗಿರೀಶ್ ಕಾಲಿಯಾ ಅವರು ನಡೆಸಿದ ಪತ್ರಿಕಾ ಗೋಷ್ಠಿಗೆ ಸಂಬಂಧಿಸಿದ್ದಾಗಿದೆ. ಆ ಸಂದರ್ಭದಲ್ಲಿ ಅವರು ನಿಯಂತ್ರಣ ರೇಖೆಯ (Line of Control) ಮೂಲಕ ನಡೆದ ಒಳನುಸುಳುವಿಕೆ ಪ್ರಯತ್ನಗಳ ಬಗ್ಗೆ ಮಾತನಾಡುತ್ತಾ, ಅಂತಹ 10 ಪ್ರಯತ್ನಗಳನ್ನು ವಿಫಲಗೊಳಿಸಿರುವುದಾಗಿ, 27 ಭಯೋತ್ಪಾದಕರನ್ನು ಹತ್ಯೆ ಮಾಡಿರುವುದಾಗಿ ಹಾಗೂ ಯುದ್ಧ ಸಾಮಗ್ರಿಗಳು ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದರು. ಅರುಣಾಚಲ ಪ್ರದೇಶದ ಮೇಲೆ ಚೀನಾದ ನಿಯಂತ್ರಣದ ಬಗ್ಗೆ ಅಥವಾ ಭಾರತೀಯ ಸೇನೆಗೆ ಪೂರೈಕೆಗಳನ್ನು ನಿರಾಕರಿಸುವ ಬಗ್ಗೆ ಅವರು ಯಾವುದೇ ಹೇಳಿಕೆ ನೀಡಿಲ್ಲ,” ಎಂದು ಸ್ಪಷ್ಟಪಡಿಸಿದೆ.

