ಬಾಲಿವುಡ್‌ನ ಖ್ಯಾತ ನಟ ಗೋವಿಂದ ಹಾಗೂ ಅವರ ಪತ್ನಿ ಸುನಿತಾ ಅಹುಜಾ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಮತ್ತು ಇಬ್ಬರೂ ದೂರಾಗಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದವು. ಇದೀಗ ಈ ಎಲ್ಲಾ ವದಂತಿಗಳಿಗೆ ಸ್ವತಃ ನಟ ಗೋವಿಂದ ಅವರೇ ಪೂರ್ಣವಿರಾಮ ಇಟ್ಟಿದ್ದಾರೆ. ಸುಮಾರು ಏಳು ವರ್ಷಗಳ ಸುದೀರ್ಘ ವಿರಾಮದ ನಂತರ ‘ರೂಪಾ’ ಚಿತ್ರದ ಮೂಲಕ ಬೆಳ್ಳಿಪರದೆಗೆ ಮರಳಲು ಸಜ್ಜಾಗುತ್ತಿರುವ ಅವರು, ಸಂದರ್ಶನವೊಂದರಲ್ಲಿ ತಮ್ಮ ಕೌಟುಂಬಿಕ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಸುನಿತಾ ತಮಗೆ ಮೊದಲ ಪ್ರೀತಿ ಎಂದಿರುವ ಗೋವಿಂದ, ತಾವು ಹಿಂದೂ ಸಂಪ್ರದಾಯದಂತೆ ಬಾಳುತ್ತಿರುವವರು. ಹೀಗಾಗಿ ತಮ್ಮ ನಿಘಂಟಿನಲ್ಲಿ ಅಥವಾ ಸಂಸ್ಕೃತಿಯಲ್ಲಿ ‘ಡಿವೋರ್ಸ್’ ಅಂದರೆ ವಿಚ್ಛೇದನ ಎಂಬ ಪದಕ್ಕೇ ಜಾಗವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಸುನಿತಾ ಅವರು ನ್ಯಾಯಾಲಯದಲ್ಲಿದ್ದ ತಮ್ಮ ವಿಚ್ಛೇದನದ ಅರ್ಜಿಯನ್ನು ಹಿಂಪಡೆದಿದ್ದರು. ಒಂದು ವೇಳೆ ತಾವು ಪ್ರಕರಣವನ್ನು ವಾಪಸ್ ಪಡೆಯದಿದ್ದರೆ ಗೋವಿಂದ ಮತ್ತೊಂದು ಮದುವೆಯಾಗುತ್ತಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಸ್ಪಷ್ಟನೆ ನೀಡಿದ ನಟ, ಸುನಿತಾ ಏನೇ ನಿರ್ಧಾರ ತೆಗೆದುಕೊಂಡರೂ ಅದು ಮಕ್ಕಳ ಒಳಿತಿಗಾಗಿಯೇ ಇರುತ್ತದೆ. ತಾಯಿಯ ಅಗಲಿಕೆಯ ನಂತರ ಸುನಿತಾ ಬಯಸಿದ ಸ್ವಾತಂತ್ರ್ಯವನ್ನು ತಾವು ಗೌರವಿಸಿ ನೀಡಿದ್ದಾಗಿ ತಿಳಿಸಿದರು.
ಸುನಿತಾ ಪ್ರಸ್ತುತ ತಮ್ಮಿಷ್ಟದಂತೆ ಜೀವನ ನಡೆಸುತ್ತಿದ್ದು, ತಮಗೆ ಅವರು ಕೊನೆಯವರೆಗೂ ಆಸರೆಯಾಗಿರುತ್ತಾರೆ. ತಮ್ಮ ಮನೆಯ ಬಾಗಿಲು ಸುನಿತಾಗೆ ಯಾವಾಗಲೂ ತೆರೆದಿರುತ್ತದೆ ಮತ್ತು ಅವರನ್ನು ತಮ್ಮದೇ ಒಂದು ಭಾಗವಾಗಿ ಕಾಣುವುದಾಗಿ ಗೋವಿಂದ ಭಾವುಕರಾಗಿ ನುಡಿದಿದ್ದಾರೆ.
ಸುಮಾರು ೩೯ ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿರುವ ಈ ಜೋಡಿಗೆ ಯಶ್ ಎಂಬ ಮಗ ಹಾಗೂ ಟೀನಾ ಎಂಬ ಮಗಳಿದ್ದಾರೆ. ಬಾಲಿವುಡ್‌ನ ಅತ್ಯಂತ ಯಶಸ್ವಿ ಹಾಗೂ ಮಾದರಿ ದಂಪತಿ ಎಂದು ಗುರುತಿಸಿಕೊಂಡಿದ್ದ ಇವರ ನಡುವಿನ ಭಿನ್ನಾಭಿಪ್ರಾಯದ ಸುದ್ದಿ ಅಭಿಮಾನಿಗಳಲ್ಲಿ ತೀವ್ರ ಅಚ್ಚರಿ ಮೂಡಿಸಿತ್ತು. ಆದರೆ ಗೋವಿಂದ ಅವರ ಈ ಮಾತಿನಿಂದ ದಾಂಪತ್ಯದ ಸುತ್ತಲಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ.

