ಬೆಂಗಳೂರು: ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಸಿಗುತ್ತಿಲ್ಲ, ಅನ್ಯಾಯವಾಗುತ್ತಿದೆ ಎಂಬ ದೂರುಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ ಬೆನ್ನಲ್ಲೇ, ಉದ್ಯಮಿ ಮೋಹನ್ ದಾಸ್ ಪೈ ಅವರು ಉನ್ನತ ಶಿಕ್ಷಣದ ಗುಣಮಟ್ಟದ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಕೆಲಸ ಸಿಗುತ್ತಿಲ್ಲ. ಮಾತೃಭಾಷೆ ಕನ್ನಡ ಎಂದು ಹೇಳಿದರೆ ನಮಗೆ ಕೆಲಸ ಸಿಗುವುದಿಲ್ಲ ಎಂದು ಯುವತಿಯೊಬ್ಬರು ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿರುವ ಐಟಿ ಕಂಪನಿಗಳು ಕನ್ನಡಿಗರಿಗೆ ಅನ್ಯಾಯಮಾಡಬಾರದು ಎಂದಿದ್ದರು. ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಉದ್ಯಮಿ ಮೋಹನ್ ದಾಅಸ್ ಪೈ ಕನ್ನಡಿಗರಿಗೆ ಉದ್ಯೋಗ ನೀಡಬೇಕು ನಿಜ. ಆದರೆ ಉತ್ತಮ ಶಿಕ್ಷಣ, ಕೌಶಲ ತರಬೇತಿ ಮೊದಲು ಕೊಡಿ ಎಂದಿದ್ದಾರೆ.
ಕನ್ನಡಿಗ ಯುವಕರಿಗೆ ಉತ್ತಮ ಶಿಕ್ಷಣ ಮತ್ತು ಕೌಶಲ ತರಬೇತಿ ನೀಡುವ ಅಗತ್ಯವಿದೆ ಎಂದಿದ್ದಾರೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಯುವಕರ ಉನ್ನತ ಶಿಕ್ಷಣದ ಬಗ್ಗೆ ಗಮನ ಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತ (GER) ಕಡಿಮೆಯಿದೆ. ಅಲ್ಲಿನ ಯುವಕರಲ್ಲಿ ಸಾಫ್ಟ್ ಸ್ಕಿಲ್ಸ್ ಕೂಡ ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುವಕರಿಗೆ ಉತ್ತಮ ತರಬೇತಿ ನೀಡುವ ಮೂಲಕ ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಬೆಳೆಸಬೇಕು ಎಂದು ಸಿಎಂಗೆ ಸಲಹೆ ನೀಡಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿ ಶೇ 60ರಿಂದ 70ಕ್ಕಿಂತ ಹೆಚ್ಚು ಬೋಧಕ ಸಿಬ್ಬಂದಿ ಅತಿಥಿ ಉಪನ್ಯಾಸಕರಾಗಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿರುವ ಪೈ, ಕಾಲೇಜುಗಳಲ್ಲಿ ಕಾಯಂ ಬೋಧಕ ಸಿಬ್ಬಂದಿಯನ್ನು ನೇಮಿಸುವಂತೆ ಆಗ್ರಹಿಸಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಹೆಚ್ಚಿನ ಅನುದಾನ ನೀಡಬೇಕು ಎಂದೂ ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ, ಯುವಕರಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ಸಂಶೋಧನಾ ಅವಕಾಶಗಳು ಮತ್ತು ಉದ್ಯೋಗಕ್ಕೆ ಪೂರಕವಾದ ಕೌಶಲಗಳನ್ನು ಒದಗಿಸುವುದೇ ಹೆಚ್ಚಿನ ಸಂಖ್ಯೆಯಲ್ಲಿ ನುರಿತ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಮಾರ್ಗ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚಬೇಕಾದರೆ, ಯುವಕರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯಮಕ್ಕೆ ಬೇಕಾದ ಕೌಶಲಗಳನ್ನು ಒದಗಿಸುವುದೂ ಮುಖ್ಯ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡುವ ಅಥವಾ ಕನ್ನಡವನ್ನು ಮಾತೃಭಾಷೆಯಾಗಿ ಹೊಂದಿರುವ ಅಭ್ಯರ್ಥಿಗಳ ರೆಸ್ಯೂಮ್‌ಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಚರ್ಚೆ ಆರಂಭವಾಗಿತ್ತು. ಈ ಕುರಿತು ಯುವತಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಆ ಪೋಸ್ಟ್ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ, ಕನ್ನಡಿಗರ ಹಕ್ಕು, ಗೌರವ ಮತ್ತು ಉದ್ಯೋಗಾವಕಾಶಗಳನ್ನು ಕಡೆಗಣಿಸಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಯಾವುದೇ ಖಾಸಗಿ ಸಂಸ್ಥೆ ಉದ್ದೇಶಪೂರ್ವಕವಾಗಿ ಕನ್ನಡಿಗರನ್ನು ಕಡೆಗಣಿಸಿರುವುದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

