ಹಾವೇರಿ: 70 ಸಾವಿರ ರೂಪಾಯಿ ಸಾಲ ಪಡೆದಿದ್ದಕ್ಕೆ ವಾರದ ಬಡ್ಡಿ ನೀಡಿಲ್ಲ ಎಂದು ಮೀಟರ್ ಬಡ್ಡಿ ದಂಧೆಕೋರರು ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ಕೈಕಾಲು ಕಟ್ಟಿಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಬಂಖಾಪುರದಲ್ಲಿ ಮೀಟರ್ ಬಡ್ಡಿ ದಂಧೆಕೋರರು ಮಣಿಕಂಠ ಎಂಬಾತನ್ನು ಅಪಹರಿಸಿದ್ದಾರೆ. ಬೇಕರಿ ನಡೆಸುತ್ತಿದ್ದ ಮಣಿಕಂಠ 70 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದರಂತೆ. ಇದಕ್ಕೆ ವಾರದ ಬಡ್ಡಿ 1500 ರೂಪಾಯಿ ಕಟ್ಟಬೇಕಿತ್ತಂತೆ. ಕೆಲ ವಾರಗಳಿಂದ ವಾರದ ಬಡ್ಡಿ ಕಟ್ಟಲಾಗಿಲ್ಲ. ಇದರಿಂದ ಬೇಕರಿ ಬಳಿ ಬಂದ ಮೀಟರ್ ಬಡ್ಡಿ ದಂಧೆ ಕೋರರು ಆತನನ್ನು ಕಿಡ್ನ್ಯಾಪ್ ಮಾಡಿದ್ದಾರೆ.
ಕೈ-ಕಾಲು ಕಟ್ಟಿಹಾಕಿ ಒಂದು ರೂಮಿನಲ್ಲಿ ಕೂಡಿ ಹಾಕಿದ್ದಾರೆ. ಅಷ್ಟೇ ಅಲ್ಲ ಬಾಯಿಗೆ ಮೂತ್ರ ಸುರಿದು, ಸಿಗರೇಟ್ ನಿಂದ ಸುಟ್ಟು, ಮನಬಂದಂತೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದಾರೆ. ನಾಲ್ಕು ದಿನಗಳ ಕಾಲ ನಿರಂತರವಾಗಿ ಕಟ್ಟಿಗೆ, ಪೈಪ್ ನಿಂದ ಹೊಡೆದು ಹಿಂಸೆ ನೀಡಿದ್ದಾರೆ. ಅಕ್ಟೋಬರ್ 20ರಂದು ಮಣಿಕಂಠ ಆರೋಪಿಗಳಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದಾರೆ.
ಬಳಿಕ ಸ್ಥಳೀಯರ ನೆರವಿನಿಂದ ಮನೆಗೆ ಕರೆ ಮಾಡಿ ಮಾಹಿತಿ ನೀಡಿದಾರೆ. ಗಂಭೀರವಾಗಿ ಹಲ್ಲೆಗೊಳಗಾಗಿರುವ ಮಣಿಕಂಠ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದೇ ವೇಳೆ ಬಂಖಾಪುರ ಠಾಣೆಯಲ್ಲಿ ಮಣಿಕಂಠ ದೂರು ದಾಖಲಿಸಿದ್ದಾರೆ. ಮಂಜುನಾಥ್ ಕತ್ತಿ, ನವೀನ್ ಹಾನಗಲ್, ಗಣೇಶ್ ಸ್ವಾಮಿ, ಸುನೀಲ್ ಹಾನಗಲ್ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮೀಟರ್ ಬಡ್ಡಿ ದಂಧೆ ಕೋರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಹೇಳಿದ್ದರೂ ಹಲವು ಜಿಲ್ಲೆಗಳಲ್ಲಿ ಬಡ್ಡಿ ದಂಧೆಕೋರರ ಕಿರುಕುಳ ಮಾತ್ರ ನಿಂತಿಲ್ಲ. ಸಾಲ ಪಡೆದವರು ಕಿರುಕುಳಕ್ಕೆ ಬೇಸತ್ತು ದೂದುಕಿನ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.

