ಬೆಳಗಾವಿ: ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಕಿತ್ತೂರು ರಾಣಿ ಚೆನ್ನಮ್ಮ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಿತ್ತೂರಿನ ಐತಿಹಾಸಿಕ ಕೋಟೆ ಆವರಣದಲ್ಲಿ ಆಯೋಜಿಸಲಾಗಿದ್ದ ಚೆನ್ನಮ್ಮನ ಕಿತ್ತೂರು ಉತ್ಸವ–2026ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚೆನ್ನಮ್ಮ ಫ್ರೀಡಂ ಪಾರ್ಕ್ ನಿರ್ಮಾಣಕ್ಕೆ ತಕ್ಷಣವೇ ಆದೇಶ ನೀಡಲಾಗುವುದು. ಶಾಸಕರ ಬೇಡಿಕೆ ಮೇರೆಗೆ ಮುಂದಿನ ಬಜೆಟ್ನಲ್ಲಿ ₹40 ಕೋಟಿ ಅನುದಾನ ನೀಡಲಾಗುವುದು ಎಂದರು.
ನಾನು ನೀರಾವರಿ ಸಚಿವನಾಗಿದ್ದಾಗ ಈ ಭಾಗದ ರೈತರ ಬದುಕಿಗೆ ಶ್ರೀ ಚನ್ನವೃಷಭೇಂದ್ರ ಅವರ ಹೆಸರಲ್ಲಿ ಏತ ನೀರಾವರಿ ಯೋಜನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. 520 ಕೋಟಿ ರೂ. ಮೊತ್ತದ ಯೋಜನೆಗೆ ಸರ್ಕಾರ ಚಿಂತನೆ ನಡೆಸಿದೆ. ಈ ಕ್ಷೇತ್ರದಲ್ಲಿ 100 ಹಾಸಿಗೆಗಳ ಆಸ್ಪತ್ರೆ, 300 ಕೋಟಿ ರೂಪಾಯಿ ಮೊತ್ತದ ಲೋಕೋಪಯೋಗಿ ಇಲಾಖೆ ಕಾಮಗಾರಿ ಸೇರಿದಂತೆ ಸುಮಾರು 1000 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಿತ್ತೂರಿಗೆ ತನ್ನದೇ ಆದ ಇತಿಹಾಸವಿದೆ. ಚೆನ್ನಮ್ಮ ಕನ್ನಡದ ಮಣ್ಣಿಗಾಗಿ ಮಡಿದ ದಿಟ್ಟ ಹೋರಾಟಗಾರ್ತಿ. ಕಿತ್ತೂರಿನ ಕಥೆ ಚೆನ್ನಮ್ಮ ಅವರ ಇತಿಹಾಸ ಸಾರುತ್ತದೆ, ಸ್ವಾಭಿಮಾನದ ಮಹಿಮೆ. ರಾಣಿ ಚೆನ್ನಮ್ಮನ ಧೈರ್ಯ ಪ್ರತಿ ಪೀಳಿಗೆಗೆ ಸ್ವಾಭಿಮಾನದ ಪಾಠ. ಕಿತ್ತೂರು ಎಂದರೆ ವೀರರ ಸಂಕೇತ. ಕಿತ್ತೂರು ಉತ್ಸವ ನಾಡಿನ ಹೆಮ್ಮೆಯ ಸಂಕೇತ. ಚೆನ್ನಮ್ಮನ ಸಾಹಸ ನಮ್ಮೆಲ್ಲರ ಸ್ಫೂರ್ತಿ, ಅವರ ತ್ಯಾಗದ ನೆನಪು ಅಜರಾಮರ. ಚೆನ್ನಮ್ಮ ಎಂಬುದು ಕೇವಲ ಹೆಸರಲ್ಲ ಸ್ವಾಭಿಮಾನ, ಶೌರ್ಯ, ಸ್ವಾತಂತ್ರ್ಯದ ಸಂಕೇತ ಎಂದರು.
ರಾಜ್ಯದಲ್ಲಿ ಶಾಂತಿಯುತ ಉತ್ತಮ ಆಡಳಿತ ನೀಡುತ್ತಿದ್ದೇವೆ. ಈ ಕ್ಷೇತ್ರದ ಶಾಸಕರ ಜೊತೆ ಇಡೀ ಸರ್ಕಾರ ಇದೆ. ಇಲ್ಲಿನ ಸುವರ್ಣ ಸೌಧದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ ಮಾಡಿದೆವು. ಸಮಾನತೆಯಿಂದ ಬೆಳೆಯಲು, ಪ್ರಜಾಪ್ರಭುತ್ವ ಮೌಲ್ಯ ಎತ್ತಿ ಹಿಡಿಯಲು ಕಾರ್ಯಕ್ರಮ ರೂಪಿಸಿದ್ದೇವೆ. ಕರ್ನಾಟಕದ ನೆಲ ಬಸವಣ್ಣನವರ ಕಾಯಕ, ದಾಸೋಹ ಹಾಗೂ ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರಿದೆ ಎಂದರು.
ಚೆನ್ನಮ್ಮನ ಶೌರ್ಯ ಕನ್ನಡ ನಾಡಿನ ಸ್ವಾಭಿಮಾನದ ಪ್ರತೀಕ. ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿ, ನಾಡಿನ ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಕೆಚ್ಚನ್ನು ಜಗತ್ತಿಗೆ ಸಾರಿದ ವೀರರಾಣಿ ಕಿತ್ತೂರು ಚೆನ್ನಮ್ಮನ ಧೈರ್ಯ, ದೃಢಸಂಕಲ್ಪ ಮತ್ತು ಅಪ್ರತಿಮ ಹೋರಾಟದ ಸ್ಮರಣೆ ನಮ್ಮೆಲ್ಲರಿಗೂ ಸದಾ ಸ್ಫೂರ್ತಿ. ಚೆನ್ನಮ್ಮನ ಕಿತ್ತೂರು ಉತ್ಸವವು ನಮ್ಮ ನಾಡಿನ ಇತಿಹಾಸ, ಪರಂಪರೆ ಮತ್ತು ಜನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ವೇದಿಕೆಯಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ಶ್ರೀಗುರು ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು, ಕಾದರವಳ್ಳಿ ಸೀಮಿ ಮಠದ ಪಾಲಾಕ್ಷ ಶಿವಯೋಗೀಶ್ವರ ಸ್ವಾಮೀಜಿಗಳು, ಬೈಲೂರು ನಿಷ್ಕಲಮಂಟಪ ಮಠದ ನಿಜಗುಣಾನಂದ ಸ್ವಾಮೀಜಿಗಳು, ಸಚಿವರಾದ ರುದ್ರಪ್ಪ ಲಮಾಣಿ, ಎಸ್.ಎಸ್.ಮಲ್ಲಿಕಾರ್ಜುನ, ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಶಾಸಕರಾದ ಬಾಬಾಸಾಹೇಬ್ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಆಸೀಫ್ ರಾಜು ಸೇಠ್, ಎನ್.ಎಚ್. ಕೋನರಡ್ಡಿ, ಮಹಾಂತೇಶ್ ಕೌಜಲಗಿ, ವಿಶ್ವಾಸ್ ವೈದ್ಯ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

