HomeIndiaಅವರು ತುಂಬಾ ಸುಂದರವಾಗಿದ್ದರು: ರಾಜೀವ್ ಗಾಂಧಿ ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡ ಸೋನಿಯಾ...

ಅವರು ತುಂಬಾ ಸುಂದರವಾಗಿದ್ದರು: ರಾಜೀವ್ ಗಾಂಧಿ ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡ ಸೋನಿಯಾ ಗಾಂಧಿ

ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ತಮ್ಮ ಪ್ರೇಮಕಥೆಯು 1965ರಲ್ಲಿ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿರುವ ‘ದಿ ವರ್ಸಿಟಿ’ (The Varsity) ಎಂಬ ಸಣ್ಣ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ಹೇಗೆ ಪ್ರಾರಂಭವಾಯಿತು ಎಂಬುದನ್ನು ನೆನಪಿಸಿಕೊಂಡಿದ್ದಾರೆ.

ಗುರುವಾರ, ಸೋನಿಯಾ ಗಾಂಧಿ ಅವರು ಇನ್‌ಸ್ಟಾಗ್ರಾಮ್‌ ಗೆ ಇದೇ ಮೊದಲ ಬಾರಿಗೆ ಎಂಟ್ರಿಕೊಟ್ಟಿದ್ದಾರೆ. ಅಲ್ಲಿ ಅವರು ತಮ್ಮ ಮುಂಬರುವ ಆತ್ಮಚರಿತ್ರೆಯ ಬಗ್ಗೆ ಪರಿಚಯ ನೀಡುತ್ತಾ, ಅದರ ಮೊದಲ ನೋಟವನ್ನು ಓದುಗರ ಮುಂದೆ ಹಂಚಿಕೊಳ್ಳಲು ಸಾಧ್ಯವಾಗಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ‘ಎಕ್ಸ್’ (X) ನಲ್ಲಿನ ತಮ್ಮ ಮೊದಲ ಪೋಸ್ಟ್‌ನಲ್ಲಿ, ಸೋನಿಯಾ ಗಾಂಧಿ ಅವರು ನವೆಂಬರ್ 10 ರಂದು ಬಿಡುಗಡೆಯಾಗಲಿರುವ ತಮ್ಮ ಆತ್ಮಚರಿತ್ರೆ ‘ಬಿಲಾಂಜಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಬಗ್ಗೆ ಮಾತನಾಡಿದ್ದಾರೆ. ಜೊತೆಗೆ, ರಾಜೀವ್ ಗಾಂಧಿ ಅವರೊಂದಿಗಿನ ತಮ್ಮ ಜೀವನದ ವೈಯಕ್ತಿಕ ನೆನಪುಗಳನ್ನು ಹಂಚಿಕೊಂಡಿದ್ದು, ಹಳೆಯ ಫೋಟೋಗಳು ಮತ್ತು ನೆನಪುಗಳ ಮೂಲಕ ತಮ್ಮ ಸಂಬಂಧದ ಆರಂಭಿಕ ದಿನಗಳ ಝಲಕ್ ಅನ್ನು ನೀಡಿದ್ದಾರೆ.

“ಕೇಂಬ್ರಿಡ್ಜ್‌ನ ಒಂದು ಸಣ್ಣ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ನನ್ನ ಪ್ರೇಮಯಾನ ಆರಂಭವಾಯಿತು. ರಾಜೀವ್ ಮತ್ತು ನಾನು ಪ್ರೀತಿ, ನಗು ಮತ್ತು ನೆನಪುಗಳಿಂದ ತುಂಬಿದ ಒಂದು ಜಗತ್ತನ್ನು ಸೃಷ್ಟಿಸಿದೆವು. ನವೆಂಬರ್ 10 ರಂದು, ಆ ಜಗತ್ತನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ,” ಎಂದು ಅವರು ಹೇಳಿದ್ದಾರೆ.

1965ರಲ್ಲಿ ಕೇಂಬ್ರಿಡ್ಜ್‌ನ ಆ ಗ್ರೀಕ್ ರೆಸ್ಟೋರೆಂಟ್‌ನಲ್ಲಿ ನಡೆದ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಳ್ಳುತ್ತಾ, ಸೋನಿಯಾ ಅವರು ರಾಜೀವ್ ಗಾಂಧಿ ಅವರ ಬಗ್ಗೆ ಮತ್ತು ಅವರನ್ನು ಆಕರ್ಷಿಸಿದ ಅವರ ಗುಣಗಳ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ.

ನಿಜಕ್ಕೂ ಅವರು ತುಂಬಾ ಸುಂದರವಾಗಿದ್ದರು:

ಆ ದಿನಗಳಲ್ಲಿ ಇಂಗ್ಲೆಂಡ್‌ನಲ್ಲಿ ಒಳ್ಳೆಯ ಆಹಾರವನ್ನು ಹುಡುಕುವುದು ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ನೆನಪಿಸಿಕೊಂಡ ಸೋನಿಯಾ ಗಾಂಧಿ ಅವರು, ಆಗ ರೆಸ್ಟೋರೆಂಟ್‌ಗಳು ತುಂಬಾ ಕಡಿಮೆ ಇದ್ದವು ಮತ್ತು ಅಂತಿಮವಾಗಿ ಭಾರತೀಯ ಹಾಗೂ ಇಟಾಲಿಯನ್ ವಿದ್ಯಾರ್ಥಿಗಳು ಹೆಚ್ಚಾಗಿ ಭೇಟಿ ನೀಡುತ್ತಿದ್ದ ಒಂದು ಗ್ರೀಕ್ ರೆಸ್ಟೋರೆಂಟ್ ತಮಗೆ ಸಿಕ್ಕಿತು ಎಂದು ವಿವರಿಸಿದರು. ತಮ್ಮ ಸಂಬಂಧದ ಆರಂಭಕ್ಕೆ ಆ ರೆಸ್ಟೋರೆಂಟ್ ಹೇಗೆ ವೇದಿಕೆಯಾಯಿತು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.

“ಅದೇ ರೆಸ್ಟೋರೆಂಟ್‌ನಲ್ಲಿ ನಾನು ರಾಜೀವ್ ಅವರನ್ನು ಭೇಟಿಯಾದೆ. ಅವರನ್ನು ಮೊದಲ ಬಾರಿ ನೋಡಿದಾಗ, ಇವರೊಂದಿಗೆ ಇರಲು ನನಗೆ ತುಂಬಾ ಇಷ್ಟವಾಗುತ್ತದೆ ಎಂದು ತಕ್ಷಣವೇ ಅನ್ನಿಸಿತು. ಮತ್ತು ಅವರಿಗೂ ಹಾಗೆಯೇ ಅನಿಸಿತ್ತು ಎಂಬುದು ನನಗೆ ತಿಳಿಯಿತು. ನಮ್ಮಿಬ್ಬರಿಗೂ ಪರಿಚಯವಿದ್ದ ಸ್ನೇಹಿತರೊಬ್ಬರು ನಮ್ಮನ್ನು ಪರಿಚಯಿಸಿದರು, ನಂತರ ನಾವು ಸ್ನೇಹಿತರಾದೆವು. ನಾವು ಸ್ನೇಹಿತರೊಂದಿಗೆ ಪಾರ್ಟಿಗಳಿಗೆ ಹೋಗುತ್ತಿದ್ದೆವು,” ಎಂದು ಸೋನಿಯಾ ಸ್ಮರಿಸಿದ್ದಾರೆ.

ರಾಜೀವ್ ಗಾಂಧಿ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಾ, ಅವರ ಸೌಮ್ಯ ಸ್ವಭಾವವು ಮೊದಲಿನಿಂದಲೂ ತನ್ನ ಮೇಲೆ ಗಾಢವಾದ ಪ್ರಭಾವ ಬೀರಿತ್ತು ಎಂದು ಸೋನಿಯಾ ಹೇಳಿದ್ದಾರೆ. “ಅವರು ನೋಡಲು ಬಹಳ ಸೌಮ್ಯ ವ್ಯಕ್ತಿಯಾಗಿದ್ದರು. ಸಹಜವಾಗಿಯೇ ಅವರು ತುಂಬಾ ಸುಂದರವಾಗಿದ್ದರು, ಆದರೆ ಅವರ ಆ ಸೌಮ್ಯತೆ ಎದ್ದು ಕಾಣುತ್ತಿತ್ತು. ಇದು ನನ್ನ ಮನಸ್ಸನ್ನು ಆಳವಾಗಿ ಸ್ಪರ್ಶಿಸಿತು ಮತ್ತು ನನ್ನ ಗಮನ ಸೆಳೆಯಿತು. ಅವರನ್ನು ಮೊದಲ ಬಾರಿಗೆ ಭೇಟಿಯಾದ ಕ್ಷಣವನ್ನು ನಾನು ಎಂದಿಗೂ ಮರೆಯಲಾರೆ,” ಎಂದು ಅವರು ಹೇಳಿದ್ದಾರೆ.

‘ಎಕ್ಸ್’ (X) ಸಾಮಾಜಿಕ ಜಾಲತಾಣದಲ್ಲಿ ಸೋನಿಯಾ ಗಾಂಧಿ ಮಾಡಿರುವ ಪೋಸ್ಟ್, ಆ ವೇದಿಕೆಯಲ್ಲಿ ಅವರ ಮೊದಲ ಉಪಸ್ಥಿತಿಯಾಗಿದೆ.

ಇದಕ್ಕೂ ಮುನ್ನ ಗುರುವಾರ, ಅವರು ಇನ್‌ಸ್ಟಾಗ್ರಾಮ್‌ಗೂ ಸೇರ್ಪಡೆಗೊಂಡರು. ಅಲ್ಲಿ ಅವರು ತಮ್ಮ ಮುಂಬರುವ ಆತ್ಮಚರಿತ್ರೆಯ ಬಗ್ಗೆ ಪರಿಚಯ ನೀಡುತ್ತಾ, ಅದರ ಫಸ್ಟ್ ಲುಕ್ ಓದುಗರ ಮುಂದೆ ಹಂಚಿಕೊಳ್ಳಲು ಸಾಧ್ಯವಾಗಿದ್ದಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು.

“ಎಲ್ಲರಿಗೂ ನಮಸ್ಕಾರ, ಈ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಸಂತೋಷ ಮತ್ತು ಕೃತಜ್ಞತೆ ಇದೆ. ಇದೋ, ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಕೃತಿಯ ಮೊದಲ ನೋಟ. ಇದು ಪ್ರೀತಿ, ಕರ್ತವ್ಯ, ನಷ್ಟ ಮತ್ತು ತಮಗೆ ಸೇರಿದ್ದೊಂದು ನೆಲೆ ಅಥವಾ ಸ್ಥಾನವನ್ನು ಕಂಡುಕೊಳ್ಳುವ ಕಥೆಯಾಗಿದೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ,” ಎಂದು ಸೋನಿಯಾ ಗಾಂಧಿ ತಮ್ಮ ಮೊದಲ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಸೋನಿಯಾ ಗಾಂಧಿ ತಮ್ಮ ಪುಸ್ತಕದ ಮೊದಲ ಪ್ರತಿಗಳನ್ನು ಸ್ವೀಕರಿಸುತ್ತಿರುವುದನ್ನು ಮತ್ತು ತಮ್ಮ ಮಗಳು ಹಾಗೂ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸಿಹಿತಿಂಡಿಗಳನ್ನು ಹಂಚಿಕೊಳ್ಳುತ್ತಿರುವುದನ್ನು ಕಾಣಬಹುದು.

ಈ ಪುಸ್ತಕವು ನವೆಂಬರ್ 10 ರಂದು ಬಿಡುಗಡೆಯಾಗಲಿದ್ದು, ಇದಕ್ಕಾಗಿ ಮುಂಗಡ ಬುಕಿಂಗ್ (pre-orders) ಈಗಾಗಲೇ ಪ್ರಾರಂಭವಾಗಿದೆ. ಈ ಆತ್ಮಚರಿತ್ರೆಯನ್ನು ‘ಆಲ್ಫ್ರೆಡ್ ಎ. ನಾಫ್’ (Alfred A. Knopf) ಜಾಗತಿಕವಾಗಿ ಪ್ರಕಟಿಸುತ್ತಿದ್ದು, ಭಾರತದಲ್ಲಿ ‘ಹಾರ್ಪರ್ ಕಾಲಿನ್ಸ್ ಇಂಡಿಯಾ’ (HarperCollins India) ಇದರ ಬಿಡುಗಡೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

544 ಪುಟಗಳನ್ನು ಹೊಂದಿರುವ ಈ ಪುಸ್ತಕವು, ಯುದ್ಧೋತ್ತರ ಇಟಲಿಯಲ್ಲಿ ಸೋನಿಯಾ ಗಾಂಧಿಯವರ ಬಾಲ್ಯದಿಂದ ಹಿಡಿದು, ರಾಜೀವ್ ಗಾಂಧಿಯವರೊಂದಿಗಿನ ಭೇಟಿ ಮತ್ತು ನಂತರದ ಅವರ ಬಾಂಧವ್ಯದವರೆಗಿನ ಪಯಣವನ್ನು ವಿವರಿಸುತ್ತದೆ. ಅಲ್ಲದೆ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಹತ್ಯೆ ಸೇರಿದಂತೆ, ಅವರ ಜೀವನವನ್ನು ರೂಪಿಸಿದ ವೈಯಕ್ತಿಕ ದುರಂತಗಳ ಬಗ್ಗೆಯೂ ಇದರಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ಭಾರತೀಯ ರಾಜಕೀಯದಲ್ಲಿ ಅವರು ವಹಿಸಿದ ಪಾತ್ರದ ಬಗ್ಗೆಯೂ ಈ ಕೃತಿ ಬೆಳಕು ಚೆಲ್ಲುತ್ತದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular