HomeKarnatakaಸ್ಟಿಂಗ್ ಆಪರೇಷನ್ ಕೇಸ್: ಬಂಧಿತ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು

ಸ್ಟಿಂಗ್ ಆಪರೇಷನ್ ಕೇಸ್: ಬಂಧಿತ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ್ದ ಸಿಸಿಬಿ ಪೊಲೀಸರು ದೆಹಲಿ ಮೂಲದ ರಿತ್ರ‍ೇಶ್ ಪಾಂಡೆ ಎಂಬ ಆರೋಪಿಯನ್ನು ಬಂಧಿಸಿದ್ದರು. ಬಂಧನಕ್ಕೀದದ ಕೆಲವೇ ಗಂಟೆಗಳಲ್ಲಿ ಆರೋಪಿಗೆ ಜಾಮೀನು ಮಂಜೂರಾಗಿದೆ.

ದೆಹಲಿ ಮೂಲದ ಆರೋಪಿ ರಿತೇಶ್ ಪಾಂಡೆಯನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್​ ಆತನಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿಯ ಬಂಧನದ ಬಳಿಕ ಸಿಸಿಬಿ – 2 ಡಿಸಿಪಿ ರಾಜ ಇಮಾಮ್ ಖಾಸಿಂ ಅವರು ಪ್ರಾಥಮಿಕ ವಿಚಾರಣೆ ನಡೆಸಿದರು. ಬಳಿಕ 66ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಲಾಯಿತು. ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡದೆ, ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ತನಿಖೆಗೆ ಸಹಕರಿಸುವಂತೆ ಆರೋಪಿಗೆ ಸೂಚನೆ ನೀಡಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಸ್ಟಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸಿದ್ದರಾಮಯ್ಯ ಅವರು ದೂರು ನೀಡಿದ್ದರು. ತನಿಖೆ ವೇಳೆ ಸ್ಟಿಂಗ್ ಮಾಡಿರುವ ವಿಡಿಯೋವನ್ನು ದೆಹಲಿ ಮೂಲದ ರಿತೇಶ್ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿರುವುದಾಗಿ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು.

ದೆಹಲಿಯ ಗಾಜಿಯಾಬಾದ್ ನಿವಾಸಿಯಾಗಿರುವ ರಿತೇಶ್, ಸಾಮಾಜಿಕ ಜಾಲತಾಣದಲ್ಲಿ ಕೆಲ ಅಕೌಂಟ್​ಗಳನ್ನು ನಿರ್ವಹಣೆ ಮಾಡುತ್ತಿದ್ದ. ಈತನನ್ನು ಸಂಪರ್ಕಿಸಿ ಅಪ್​ಲೋಡ್ ಮಾಡಬೇಕಿದ್ದ ವಿಡಿಯೋವನ್ನು ಪೆನ್​ಡ್ರೈವ್​ನಲ್ಲಿ ನೀಡಲಾಗಿತ್ತು. ಆತ ದೆಹಲಿ ಕರೋಲ್ ಬಾಗ್ ಮಾರ್ಕೆಟ್​ನಲ್ಲಿ 15 ಸಾವಿರ ರೂ. ಬೆಲೆಯ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದ. ವಿಡಿಯೋ ಅಪ್​ಲೋಡ್ ಮಾಡಿರುವ ಸ್ಥಳ ಗೊತ್ತಾಗದಿರಲು ಸಿಮ್ ಕಾರ್ಡ್ ವರ್ಕ್ ಆಗದಿರುವ ಮೊಬೈಲ್ ಖರೀದಿಸಿದ್ದ. ಒಟಿಜಿ ಕೇಬಲ್ ಬಳಸಿ ಪೆನ್​ಡ್ರೈವ್ ಮೂಲಕ ವಿಡಿಯೋವನ್ನು ಮೊಬೈಲ್​ಗೆ ಹಾಕಿಕೊಂಡಿದ್ದ. ಬಳಿಕ ವೈ-ಪೈ ಬಳಿಸಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದ ಎಂದು ಪೊಲೀಸ್​ ಮೂಲಗಳು ​ತಿಳಿಸಿವೆ.

ರಿತೇಶ್ ಬಂಧನ ಬೆನ್ನಲ್ಲೇ ಮತ್ತೊಂದೆಡೆ ಜೆಡಿಎಸ್ ಕಾರ್ಯಕರ್ತ ಮೋಹನ್‌ ಗೌಡ ಅವರ ಬ್ಯಾಡರಹಳ್ಳಿಯಲ್ಲಿನ ಮನೆ ಮೇಲೆ ಶುಕ್ರವಾರ ಸಂಜೆ ಸಿಸಿಬಿ ಪೊಲೀಸರು ದಾಳಿ ಮಾಡಿ, ಮನೆಯಲ್ಲಿದ್ದ ಕೆಲ ಪೆನ್​ಡ್ರೈವ್​​​ಗಳನ್ನು ಸೀಜ್ ಮಾಡಿರುವುದು ಗೊತ್ತಾಗಿದೆ. ನಾಪತ್ತೆಯಾಗಿದ್ದ ಮೋಹನ್ ಗೌಡ ಇಂದು ವಿಚಾರಣೆಗೆ ಬರುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದರೆ, ಇಂದು ಕೂಡ ವಿಚಾರಣೆ ಗೈರಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಪ್ರಕರಣದಲ್ಲಿ ಸುದ್ದಿ ವಾಹಿನಿಯೊಂದರ ಮುಖ್ಯಸ್ಥ ಹಾಗೂ ಕೃಪಾ ಆಳ್ವಾ ಎಂಬವರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಸ್ಟಿಂಗ್ ವಿಡಿಯೋದಲ್ಲಿರುವ ಕೇರಳ ಮೂಲದ ಮಹಿಳೆಯ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಟಿಂಗ್ ಆಪರೇಷನ್ ಆಪರೇಷನ್ ಸತ್ಯ ಹೊರಬರಬೇಕು: ಇದರ ಹಿಂದೆ ಆ ಲೇಡಿ ಸೇರಿ ಇಬ್ಬರ ಕೈವಾಡವಿದೆ ಎಂದ ಸಿದ್ದರಾಮಯ್ಯ

ಮೈಸೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲವೆಬ್ಬಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಅಬ್ಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಸುದೀರ್ಘ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಕೆಲ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ನನ್ನ ಗಮನಕ್ಕೆ ಬಂತು. ಒಬ್ಬ ಪತ್ರಕರ್ತ ಮತ್ತು ಮಂಗಳೂರಿನ ಕೃಪಾ ಆಳ್ವಾ ಸೇರಿಕೊಂಡು ಈ ಕೆಲಸ ಮಾಡಿದ್ದಾರೆ ಎಂದರು.

ಸ್ಟಿಂಗ್ ಆಪರೇಶನ್ ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು. ಜನರಿಗೆ ಸತ್ಯಾಂಶ ತಿಳಿಯಬೇಕು ಎನ್ನುವ ಉದ್ದೇಶದಿಂದ ನಾನೇ ಸ್ವಯಂಪ್ರೇರಿತವಾಗಿ ಪೊಲೀಸರಿಗೆ ದೂರು ನೀಡಿದ್ದೇನೆ. ಸ್ಟಿಂಗ್ ಆಪರೇಷನ್ ನಲ್ಲಿ ಯಾವುದೇ ಹುರುಳಿಲ್ಲ, ಸಂಪೂರ್ಣ ಸತ್ಯಕ್ಕೆ ದೂರವಾದ ಆರೋಪವಿದು ಎಂದು ತಿಳಿಸಿದರು.

ನಾನು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇಂತಹ ಯಾವುದೇ ಕೃತ್ಯಗಳು ನಡೆದಿರಲಿಲ್ಲ. ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಇಂತಹ ಕೀಳು ಆರೋಪ ಬಂದೇ ಇರಲಿಲ್ಲ. ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಬ್ಲಾಕ್‌ಮೇಲ್ ತಂತ್ರಗಳನ್ನು ಮಾಡುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡದ ಮೇಲೆ ನನಗೆ ಯಾರ ನೈತಿಕ ಬೆಂಬಲವೂ ಬೇಕಾಗಿಲ್ಲ, ಯಾರೂ ನನ್ನ ಪರವಾಗಿ ನಿಲ್ಲಬೇಕಾದ ಅಗತ್ಯವೂ ಇಲ್ಲ ಎಂದು ಹೇಳಿದರು.

ರಾಜಕೀಯ ಲಾಭಕ್ಕಾಗಿ ಕೆಲವರು ಮಾತನಾಡುತ್ತಿದ್ದಾರೆ, ಮಾತನಾಡಿಕೊಳ್ಳಲಿ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕು. ಇದರ ಹಿಂದೆ ಸ್ವಪಕ್ಷದವರಿದ್ದಾರೋ ಅಥವಾ ವಿರೋಧ ಪಕ್ಷದವರಿದ್ದಾರೋ ಎಂಬುದು ತನಿಖೆಯ ನಂತರವೇ ತಿಳಿಯಲಿದೆ ಎಂದರು.

ನನಗೆ ಸರ್ಕಾರದ ತನಿಖೆ ಮೇಲೆ ಪೂರ್ಣ ನಂಬಿಕೆಯಿದೆ. ಇದಕ್ಕಾಗಿ ಎಸ್‌ಐಟಿ ಅಥವಾ ಬೇರೆ ಯಾವುದೇ ಉನ್ನತ ಮಟ್ಟದ ತನಿಖೆಯ ಅಗತ್ಯವಿಲ್ಲ. ಇಂತಹ ಷಡ್ಯಂತ್ರ ರೂಪಿಸಿದವರ ಉದ್ದೇಶ ಎಂದಿಗೂ ಸಫಲವಾಗುವುದಿಲ್ಲ ಎಂದು ಹೇಳಿದರು.

ಪ್ರಕರಣದ ಬಗ್ಗೆ ಪಾರದರ್ಶಕವಾಗಿ ತನಿಖೆ ಆಗಬೇಕು. ಸತ್ಯವೇನೆಂದು ಹೊರಬರಬೇಕು. ಇದರಲ್ಲಿ ಹುರುಳಿಲ್ಲ ಎಂಬುದು ಜನತೆಗೆ ತಿಳಿಯಬೇಕು ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular