ಶಿವಮೊಗ್ಗ: ದಸರಾ ಮಹೋತ್ಸವದ ಅಂತಿಮ ದಿನವಾದ ಅಕ್ಟೋಬರ್ 21 ರಂದು ಮಧ್ಯಾಹ್ನ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯ ಅಂಬಾರಿ ಮೆರವಣಿಗೆಯಲ್ಲಿ ಆಕಸ್ಮಿಕವಾಗಿ ನಡೆದ ಅವಘಡದ ಕುರಿತು, ಸರ್ಕಾರವು ಸಂಪೂರ್ಣ ವರದಿ ಪಡೆದು ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ತಿಳಿಸಿದರು.
ಮಹಾ ನಗರ ಪಾಲಿಕೆ ಪರಿಷತಗ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ದಸರಾ ಉತ್ಸವವು ಅತ್ಯಂತ ಸಂಭ್ರಮ ಹಾಗೂ ಅದ್ದೂರಿಯಾಗೇ ನಡೆದಿದೆ. ಆದರೆ ಅಂತಿಮ ದಿನವಾದ ಅಕ್ಟೋಬರ್ 21ರಂದು ಅಂಬಾರಿ ಹೊತ್ತ ‘ಸೋಮಣ್ಣ’ ಆನೆಯು ಗಾಬರಿಗೊಂಡು ಓಡಿದ ಕಾರಣ ಅಂಬಾರಿ ಬಿದ್ದು ಅವಘಡ ಸಂಭವಿಸಿದೆ ಎಂದು ವಿವರಿಸಿದರು.
ಯಾವುದೇ ಪ್ರಾಣಹಾನಿಯಿಲ್ಲ – ಎಚ್ಚೆತ್ತುಕೊಳ್ಳುವ ಸಂದರ್ಭ:
ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಮಾನವ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಇದು ನಮಗೆ ಗಂಭೀರವಾಗಿ ಎಚ್ಚೆತ್ತುಕೊಳ್ಳುವ ಸಂದರ್ಭವನ್ನು ಸೃಷ್ಟಿಸಿದೆ ಎಂದು ಸಚಿವರು ತಿಳಿಸಿದರು.
ಕಳೆದ ಕೆಲವು ವರ್ಷಗಳಿಂದ ಅರಣ್ಯದಿಂದ ಆನೆಗಳನ್ನು ಕರೆತಂದು ತರಬೇತಿ ನೀಡಿ ಅಂಬಾರಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಬಾರಿಯೂ ಯಶಸ್ವಿಯಾಗಿ ತರಬೇತಿ ನೀಡಲಾಗಿತ್ತು. ಸರ್ಕಾರದ ಅಧಿಕೃತ ಅನುಮತಿ ಪಡೆದು, ಅರಣ್ಯ ಇಲಾಖೆಯ ನಿಯಮಾನುಸಾರ ಆನೆಗಳ ಆಯ್ಕೆ ಮತ್ತು ತರಬೇತಿ ನೀಡಲಾಗಿದೆ ಎಂದರು.
ಒಮ್ಮತದ ನಿರ್ಧಾರ:
ಅಧಿಕಾರಿಗಳ ಸಂಪೂರ್ಣ ಒಮ್ಮತ, ಮಾಹಿತಿ ಹಾಗೂ ಆತ್ಮವಿಶ್ವಾಸದಿಂದಲೇ ‘ಸೋಮಣ್ಣ’ ಆನೆಯೇ ಅಂಬಾರಿ ಹೊರಬೇಕು ಎಂದು ಮೊದಲೇ ನಿರ್ಧರಿಸಲಾಗಿತ್ತೇ ಹೊರತು ಕೊನೆಯ ಕ್ಷಣದ ನಿರ್ಧಾರವಲ್ಲ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ತರಬೇತಿ ನೀಡಲಾಗಿತ್ತು. ಸೋಮಣ್ಣ ಆನೆಗೆ ಅಂಬಾರಿ ಹೊರುವ ಸಾಮರ್ಥ್ಯವಿದೆ ಎಂಬ ಕಾರಣಕ್ಕೇ ಈ ತೀರ್ಮಾನ ಕೈಗೊಳ್ಳಲಾಗಿತ್ತು ಎಂದರು.
ಅಂಬಾರಿ ಸಾಗಿಸುವ ಪ್ರಕ್ರಿಯೆಯಲ್ಲಿ ಡಿಸಿಎಫ್, ಡಿಸಿ, ಎಸ್ಪಿ, ಸಿಇಓ, ಎಡಿಸಿ, ಶಾಸಕರು ಹಾಗೂ ಪಾಲಿಕೆ ಆಯುಕ್ತರು ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ಮತ್ತು ಸಮಿತಿಯವರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉತ್ತಮ ತಂಡದ ಕೆಲಸ ಇಲ್ಲಿ ನಡೆದಿದೆ. ಮುಖ್ಯಮಂತ್ರಿಗಳು ಸಹ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅವಘಡದ ವೇಳೆ ದೇವಿಯ ವಿಗ್ರಹ ಹಾಗೂ ಆಭರಣಗಳಿಗೆ ಯಾವುದೇ ನಷ್ಟ ಸಂಭವಿಸಿಲ್ಲ. ಇತರೆ ಸಣ್ಣಪುಟ್ಟ ನಷ್ಟಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.
ಮುಂದಿನ ಎಚ್ಚರಿಕೆ:
ಲಭ್ಯವಿರುವ ಎಲ್ಲ ಸಾಕ್ಷ್ಯಾಧಾರಗಳಿಂದ ಆನೆ ಗಾಬರಿಯಾಗಿ ಈ ಅವಘಡ ಸಂಭವಿಸಿದೆ ಎಂಬುದು ತಿಳಿದುಬಂದಿದೆ. ಇನ್ನು ಮುಂದೆ ಅಂಬಾರಿ ಹೊರುವ ವಿಚಾರದಲ್ಲಿ ಮತ್ತಷ್ಟು ವೈಜ್ಞಾನಿಕವಾಗಿ ತೀರ್ಮಾನ ಕೈಗೊಳ್ಳಬೇಕು ಹಾಗೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂಬ ಸಂದೇಶವನ್ನು ಈ ಘಟನೆ ನಮಗೆ ನೀಡಿದೆ. ಸರ್ಕಾರಕ್ಕೆ ಈ ಕುರಿತು ನೆನ್ನೆ ವರದಿಯನ್ನು ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್, ಸೂಡಾ ಅಧ್ಯಕ್ಷ ಸಿ.ಜಿ. ಮಧುಸೂದನ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಮಟ್ಟದ ಅಧ್ಯಕ್ಷ ಚಂದ್ರಭೂಪಾಲ್, ಎಸ್ಪಿ ನಿಖಿಲ್ ಬಿ., ಜಿ.ಪಂ. ಸಿಇಓ ರಿಷಿ ಆನಂದ್, ಸಿಸಿಎಫ್ ಹನುಮಂತಪ್ಪ, ಎಡಿಸಿ ಅಭಿಷೇಕ್ ವಿ., ಪಾಲಿಕೆ ಆಯುಕ್ತ ಮಾಯಣ್ಣಗೌಡ ಹಾಗೂ ಇತರೆ ಮುಖಂಡರು ಮತ್ತು ಹಿರಿಯ ಅಧಿಕಾರಿಗಳು ಹಾಜರಿದ್ದರು.

