HomeKarnatakaಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ

ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ

‘ಗೋಲ್ಡನ್ ಚಾರಿಯಟ್’ 2026–27ರ ಐಷಾರಾಮಿ ಯಾತ್ರೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ; ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿ ಮತ್ತು ಕರ್ನಾಟಕದ ಹೊಸ ತಾಣಗಳ ಪರಿಚಯಕ್ಕೆ ಒತ್ತು

ಬೆಂಗಳೂರು- ಕರ್ನಾಟಕದ ಪ್ರತಿಷ್ಠಿತ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ನ 2026–27ರ ಪ್ರವಾಸಿ ಋತುವಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು.

ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್, ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಡಾ. ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಪ್ರವಾಸೋದ್ಯಮ, KSTDC, IRCTC ಮತ್ತು ರೈಲ್ವೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕದ ಪರಂಪರೆ ಮತ್ತು ಪ್ರವಾಸಿ ವೈವಿಧ್ಯತೆಯನ್ನು ದೇಶ–ವಿದೇಶದ ಪ್ರವಾಸಿಗರಿಗೆ ಸಮಗ್ರವಾಗಿ ಪರಿಚಯಿಸುವ ಉದ್ದೇಶದಿಂದ ಗೋಲ್ಡನ್ ಚಾರಿಯಟ್‌ಗೆ ಹೊಸ ರೂಪ ಮತ್ತು ಹೊಸ ಪ್ರವಾಸಿ ಮಾರ್ಗಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

“ಕರ್ನಾಟಕ ದರ್ಶನದ ಪರಿಕಲ್ಪನೆಯನ್ನು ಮತ್ತಷ್ಟು ಸಮಗ್ರವಾಗಿ ಮುಂದುವರಿಸುವ ನಿಟ್ಟಿನಲ್ಲಿ ಗೋಲ್ಡನ್ ಚಾರಿಯಟ್‌ಗೆ ಹೊಸ ರೂಪ ನೀಡಲಾಗಿದೆ. ಸಚಿವ ಕೆ.ಜೆ. ಜಾರ್ಜ್ ಅವರು ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ‘Pride of Karnataka’ ಸೇರಿದಂತೆ ಹೊಸ ಯಾತ್ರಾ ಮಾರ್ಗಗಳನ್ನು ರೂಪಿಸಿ, ಐಷಾರಾಮಿ ಪ್ರವಾಸಿಗರಿಗೆ ಉತ್ತಮ ಸೇವೆ ಒದಗಿಸುವತ್ತ ವಿಶೇಷ ಗಮನ ಹರಿಸಿದ್ದಾರೆ,” ಎಂದು ಮುಖ್ಯಮಂತ್ರಿ ಹೇಳಿದರು.

ಐಷಾರಾಮಿ ರೈಲಿನಲ್ಲೇ ಕರ್ನಾಟಕದ ವೈಶಿಷ್ಟ್ಯಗಳ ಅನಾವರಣ

ಐಷಾರಾಮಿ ರೈಲಿನಲ್ಲೇ ಕರ್ನಾಟಕದ ವೈಶಿಷ್ಟ್ಯಗಳ ಅನಾವರಣ

ಐದು ರಾತ್ರಿ–ಆರು ದಿನಗಳ ‘Pride of Karnataka’ ಯಾತ್ರೆಯಲ್ಲಿ ಬಂಡೀಪುರ, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ ಮತ್ತು ಗೋವಾ ಸೇರಿದಂತೆ ಪ್ರಮುಖ ತಾಣಗಳು ಸೇರಿವೆ. ಮೊದಲ ಯಾತ್ರೆಯಲ್ಲಿ 75 ಅತಿಥಿಗಳು ಭಾಗವಹಿಸಿದ್ದು, ಸುಮಾರು 60 ಸಿಬ್ಬಂದಿ ರೈಲಿನಲ್ಲಿ ಆತಿಥ್ಯ ಮತ್ತು ಇತರೆ ಸೇವೆಗಳನ್ನು ಒದಗಿಸಲಿದ್ದಾರೆ.

“ವಿಶ್ರಾಂತಿ, ಉತ್ತಮ ದೃಶ್ಯಾನುಭವ ಮತ್ತು ಮನಸ್ಸಿಗೆ ನೆಮ್ಮದಿ ನೀಡುವ ರೀತಿಯಲ್ಲಿ ಈ ಯಾತ್ರೆಯನ್ನು ರೂಪಿಸಲಾಗಿದೆ. ಕರ್ನಾಟಕವನ್ನು ಸಂಪೂರ್ಣವಾಗಿ ನೋಡದ ರಾಜ್ಯದ ಜನರೂ, ದೇಶೀಯ ಮತ್ತು ವಿದೇಶಿ ಪ್ರವಾಸಿಗರೂ ನಮ್ಮ ರಾಜ್ಯದ ವೈವಿಧ್ಯತೆಯನ್ನು ಒಂದೇ ಯಾತ್ರೆಯಲ್ಲಿ ಅನುಭವಿಸುವ ಅವಕಾಶ ಪಡೆಯಬೇಕು,” ಎಂದು ಮುಖ್ಯಮಂತ್ರಿ ಹೇಳಿದರು.

ಗೋಲ್ಡನ್ ಚಾರಿಯಟ್‌ನಲ್ಲಿ ಪ್ರತ್ಯೇಕ ಅತಿಥಿ ಕೊಠಡಿಗಳು, ಊಟದ ಬೋಗಿಗಳು, ಸ್ಪಾ ಮತ್ತು ಇತರೆ ಐಷಾರಾಮಿ ಸೌಲಭ್ಯಗಳಿದ್ದು, ರೈಲಿನೊಳಗಿನ ಆರಾಮದ ಜೊತೆಗೆ ಪ್ರತಿಯೊಂದು ನಿಲ್ದಾಣದಲ್ಲೂ ಸ್ಥಳೀಯ ಅನುಭವಗಳಿಗೆ ಆದ್ಯತೆ ನೀಡಲಾಗಿದೆ.

ಪ್ರತಿ ನಿಲ್ದಾಣದಲ್ಲೂ ಸ್ಥಳೀಯ ಅನುಭವ

ಪ್ರತಿ ನಿಲ್ದಾಣದಲ್ಲೂ ಸ್ಥಳೀಯ ಅನುಭವ

ಬಂಡೀಪುರ: ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿ ಸಫಾರಿ ಮೂಲಕ ಕರ್ನಾಟಕದ ಜೀವವೈವಿಧ್ಯ ಮತ್ತು ನೈಸರ್ಗಿಕ ಸಂಪತ್ತಿನ ಅನುಭವ.

ಮೈಸೂರು: ಮೈಸೂರು ಅರಮನೆಯ ರಾಜವೈಭವದ ವೀಕ್ಷಣೆ ಹಾಗೂ ಐತಿಹಾಸಿಕ ಶ್ರೀರಂಗಪಟ್ಟಣಕ್ಕೆ ಭೇಟಿ.

ಬೇಲೂರು–ಹಳೇಬೀಡು: ಹೊಯ್ಸಳ ಕಾಲದ ದೇವಾಲಯಗಳು, ಶಿಲ್ಪಕಲೆ ಮತ್ತು ವಾಸ್ತುಶಿಲ್ಪ ಪರಂಪರೆಯ ಪರಿಚಯ.

ಚಿಕ್ಕಮಗಳೂರು: ಆಯ್ದ ಕಾಫಿ ತೋಟಕ್ಕೆ ಭೇಟಿ ನೀಡಿ, ಸ್ಥಳೀಯ ಕಾಫಿ ಸಂಸ್ಕೃತಿ ಮತ್ತು ಮಲೆನಾಡಿನ ಜೀವನಶೈಲಿಯನ್ನು ಹತ್ತಿರದಿಂದ ಅನುಭವಿಸುವ ಅವಕಾಶ.

ಹಂಪಿ: ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಹಂಪಿಯ ಸ್ಮಾರಕಗಳು, ವಿಜಯನಗರ ಸಾಮ್ರಾಜ್ಯದ ಇತಿಹಾಸ ಮತ್ತು ವಾಸ್ತುಶಿಲ್ಪ ವೈಭವದ ಮಾರ್ಗದರ್ಶಿತ ವೀಕ್ಷಣೆ.

ಗೋವಾ: ಉತ್ತರ ಗೋವಾದ ಐತಿಹಾಸಿಕ ಚರ್ಚುಗಳು, ಇಂಡೋ–ಪೋರ್ಚುಗೀಸ್ ಪರಂಪರೆ ಮತ್ತು ಕರಾವಳಿ ಅನುಭವ.

ಮೂರು ವಿಶೇಷ ಐಷಾರಾಮಿ ಯಾತ್ರೆಗಳು

ಮೂರು ವಿಶೇಷ ಐಷಾರಾಮಿ ಯಾತ್ರೆಗಳು

2026–27ರ ಋತುವಿನಲ್ಲಿ ಗೋಲ್ಡನ್ ಚಾರಿಯಟ್ ಮೂರು ವಿಭಿನ್ನ ಪ್ರವಾಸಿ ಕಾರ್ಯಕ್ರಮಗಳನ್ನು ಒದಗಿಸಲಿದೆ.

Pride of Karnataka — 5 ರಾತ್ರಿ / 6 ದಿನಗಳು:

ಬೆಂಗಳೂರು–ಬಂಡೀಪುರ–ಮೈಸೂರು–ಹಳೇಬೀಡು–ಚಿಕ್ಕಮಗಳೂರು–ಹಂಪಿ–ಗೋವಾ–ಬೆಂಗಳೂರು.

Jewels of South — 5 ರಾತ್ರಿ / 6 ದಿನಗಳು:

ಬೆಂಗಳೂರು–ಮೈಸೂರು–ಹಂಪಿ–ಮಹಾಬಲಿಪುರಂ–ತಂಜಾವೂರು–ಚೆಟ್ಟಿನಾಡು–ಕೊಚ್ಚಿ–ಕುಮಾರಕೋಂ–ಬೆಂಗಳೂರು.

Glimpses of Karnataka — 3 ರಾತ್ರಿ / 4 ದಿನಗಳು:

ಬೆಂಗಳೂರು–ಬಂಡೀಪುರ–ಮೈಸೂರು–ಹಂಪಿ–ಬೆಂಗಳೂರು.

‘Jewels of South’ ಮೂಲಕ ಕರ್ನಾಟಕದ ಜೊತೆಗೆ ದಕ್ಷಿಣ ಭಾರತದ ಇತರೆ ಪ್ರಮುಖ ಪ್ರವಾಸಿ ತಾಣಗಳನ್ನು ಜೋಡಿಸಲಾಗುತ್ತಿದ್ದು, ‘Glimpses of Karnataka’ ಮೂಲಕ ಕಡಿಮೆ ಅವಧಿಯಲ್ಲಿ ಕರ್ನಾಟಕದ ವನ್ಯಜೀವಿ, ರಾಜವೈಭವ ಮತ್ತು ಪರಂಪರೆಯನ್ನು ಅನುಭವಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿಗೆ ಒತ್ತು

ಪ್ರವಾಸೋದ್ಯಮದಿಂದ ಉದ್ಯೋಗ ಸೃಷ್ಟಿಗೆ ಒತ್ತು

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪ್ರವಾಸೋದ್ಯಮವನ್ನು ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

“ಕರ್ನಾಟಕದಲ್ಲಿ ವನ್ಯಜೀವಿ ಸಂಪತ್ತು, ವಿಶ್ವಮಟ್ಟದ ಪರಂಪರೆ ತಾಣಗಳು, ಮಲೆನಾಡು, ಕರಾವಳಿ, ಮೈಸೂರು, ಕೊಡಗು ಸೇರಿದಂತೆ ಅಪಾರ ಪ್ರವಾಸೋದ್ಯಮ ಸಾಮರ್ಥ್ಯವಿದೆ. ಈಗಿರುವ ಪ್ರಸಿದ್ಧ ತಾಣಗಳ ಜೊತೆಗೆ ಹೊಸ ಪ್ರದೇಶಗಳನ್ನೂ ಮ್ಯಾಪ್ ಮಾಡಿ ಪ್ರವಾಸಿಗರಿಗೆ ಪರಿಚಯಿಸುವ ಮೂಲಕ ಪ್ರವಾಸೋದ್ಯಮವನ್ನು ವಿಸ್ತರಿಸಬೇಕು. ಇದರಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಮತ್ತು ಆರ್ಥಿಕ ಅವಕಾಶಗಳೂ ಹೆಚ್ಚಲಿವೆ,” ಎಂದು ಮುಖ್ಯಮಂತ್ರಿ ಹೇಳಿದರು.

ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, “ಗೋಲ್ಡನ್ ಚಾರಿಯಟ್ ಅನ್ನು ಕೇವಲ ಐಷಾರಾಮಿ ರೈಲು ಯಾತ್ರೆಯಾಗಿ ನೋಡುತ್ತಿಲ್ಲ. ಕರ್ನಾಟಕದ ವನ್ಯಜೀವಿ, ರಾಜವೈಭವ, ವಿಶ್ವ ಪರಂಪರೆ, ಕಾಫಿ ನಾಡು, ಸಂಸ್ಕೃತಿ ಮತ್ತು ಆತಿಥ್ಯವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಪ್ರೀಮಿಯಂ ಪ್ರವಾಸೋದ್ಯಮ ಉತ್ಪನ್ನವಾಗಿ ರೂಪಿಸಲಾಗಿದೆ. ಮಾನ್ಯ ಮುಖ್ಯಮಂತ್ರಿಗಳ ಮಾರ್ಗದರ್ಶನದಂತೆ ಹೊಸ ಪ್ರವಾಸಿ ಅನುಭವಗಳು ಮತ್ತು ತಾಣಗಳನ್ನು ಜೋಡಿಸಿ, ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕರ್ನಾಟಕದ ಪ್ರವಾಸೋದ್ಯಮದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಾಗುವುದು,” ಎಂದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ರೈಲಿನಲ್ಲಿನ ಐಷಾರಾಮಿ ಆತಿಥ್ಯ ಮತ್ತು ಪ್ರತಿ ನಿಲ್ದಾಣದಲ್ಲಿನ ಸ್ಥಳೀಯ ಅನುಭವ — ಈ ಎರಡನ್ನೂ ಸಮಗ್ರವಾಗಿ ಜೋಡಿಸುವುದು ಗೋಲ್ಡನ್ ಚಾರಿಯಟ್‌ನ ಪ್ರಮುಖ ವಿಶೇಷತೆ. ಮುಂದಿನ ಹಂತದಲ್ಲಿ ತಾಣಾಧಾರಿತ ಅನುಭವ, ಮಾರುಕಟ್ಟೆ, ಬುಕ್ಕಿಂಗ್ ಮತ್ತು ಪ್ರವಾಸಿ ಸೇವೆಗಳನ್ನು ಇನ್ನಷ್ಟು ಬಲಪಡಿಸಿ, ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರೀಮಿಯಂ ಪ್ರವಾಸ ಮಾರುಕಟ್ಟೆಯಲ್ಲಿ ಇದರ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು,” ಎಂದರು.

2026–27ರ ಪ್ರವಾಸಿ ಋತುವಿನಲ್ಲಿ Pride of Karnataka, Glimpses of Karnataka ಮತ್ತು Jewels of South ಮಾರ್ಗಗಳಲ್ಲಿ ಒಟ್ಟು 13 ಐಷಾರಾಮಿ ಯಾತ್ರೆಗಳು ನಿಗದಿಯಾಗಿವೆ.

ಕಾಯ್ದಿರಿಸುವಿಕೆ ಮತ್ತು ಹೆಚ್ಚಿನ ಮಾಹಿತಿಗಾಗಿ:

www.goldenchariot.org

[email protected] | [email protected]

+91 89706 50010

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular