ಮೈಸೂರು: ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಪತಿ, ಮಕ್ಕಳ ಬಗ್ಗೆ ಯೋಚಿಸದೇ ಪರಪುರುಷನ ಪ್ರೇಮಪಾಶಕ್ಕೆ ಸಿಲುಕಿದ ಮಹಿಳೆಯೊಬ್ಬಳು ತನ್ನ ಪತಿಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.
ಪತಿಯನ್ನು ಕೊಲೆ ಮಾಡಲು ಮಹಿಳೆ ಖತರ್ನಾಕ್ ಐಡಿಯಾ ಮಾಡಿದ್ದಾಳೆ. ಗಾರೆ ಕೆಲಸ ಮಾಡುತ್ತಿದ್ದ ರಾಮಪ್ರಸಾದ್ (35) ಕೊಲೆಯಾದ ದುರ್ದೈವಿ. ಪವಿತ್ರ ಪತಿಯನ್ನೇ ಕೊಂದ ಮಹಿಳೆ. ಆಕೆಯ ಪ್ರಿಯಕರ ಸುನೀಲ್ ಈ ಕೊಲೆಗೆ ಸಾಥ್ ನೀಡಿದ್ದಾನೆ.
ಪ್ರಕರಣ ಸಂಬಂಧ ಪವಿತ್ರ, ಆಕೆಯ ಪ್ರಿಯಕರ ಸುನೀಲ್ ನನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪವಿತ್ರ ಪತಿಯ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾಳೆ.
ಹುಣಸೂರು ತಾಲೂಕಿನ ವಿನೋಬ ಕಾಲೋನಿಯಲ್ಲಿ ಪ್ರಿಯಕರನೊಂದಿಗೆ ಜೊತೆ ಸೇರಿ ಪತಿ ರಾಮಪ್ರಸಾದ್ ನನ್ನು ಕೊಲೆ ಮಾಡಿದ್ದಾಳೆ ಪವಿತ್ರ. ಕೆಸರೆ ನಿವಾಸಿಯಾದ ಪವಿತ್ರ ಹಾಗೂ ರಾಮಪ್ರಸಾದ್ ದಂಪತಿಗೆ 11 ವರ್ಷದ ಗಂಡು ಮಗ ಹಾಗೂ 9 ವರ್ಷದ ಹೆಣ್ಣು ಮಕ್ಕಳಿದ್ದಾರೆ. ಆದರೂ ಅದೇ ಗ್ರಾಮದ ಸುನೀಲ್ ಎಂಬಾತನೊಂದಿಗೆ ಪವಿತ್ರ ಅಕ್ರಮ ಸಂಬಂಧ ಹೊಂದಿದ್ದಳು.
ಈ ವಿಚಾರ ಗೊತ್ತಾಗುತ್ತಿದ್ದಂತೆ ದಂಪತಿ ನಡುವೆ ಜಗಳ ವಾಗಿದೆ. ವಿಷಯ ಗೊತ್ತಾಗಿದೆ. ಹೇಗಾದರೂ ಮಾಡಿ ಪತಿಯನ್ನು ಮುಗಿಸಲೇಬೇಕು ಎಂದು ಪವಿತ್ರ ಸಂಚು ರೂಪಿಸಿದ್ದಳು. ಕೊಲೆ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದಾಗ ಯೂಟ್ಯೂಬ್‌ನಲ್ಲಿ ದತ್ತೂರಿ ಬೀಜದ ಕುರಿತು ಮಾಹಿತಿ ಪಡೆದು ಕೊಲೆಗೆ ಸಂಚು ರೂಪಿಸಿದ್ದಾಳೆ.
ತನ್ನ ಪ್ಲಾನ್ನಂತೆ ಪವಿತ್ರ, ಅಕ್ಟೋಬರ್ 16ರಂದು ರಾತ್ರಿ ಕುಡಿದು ಮನೆಗೆ ಬಂದ ರಾಮಪ್ರಸಾದ್‌ಗೆ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದಾಳೆ. ಆದರೂ ಆತ ಸಾಯದಿದ್ದಾಗ, ಪ್ರಿಯಕರನ ಸಹಾಯದಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ.
ನಂತರ ಮೃತನ ಸಹೋದರ ಚಂದ್ರಹಾಸಗೆ ಕರೆ ಮಾಡಿದ ಪವಿತ್ರಾ, ಪತಿ ಮೊಸರು ತಿಂದು ಮಲಗಿದವನು ಎದ್ದೇಳುತ್ತಿಲ್ಲ ಎಂದು ನಾಟಕವಾಡಿದ್ದಾಳೆ. ಆಸ್ಪತ್ರೆಗೆ ಕರೆದೊಯ್ದಾಗ ರಾಮಪ್ರಸಾದ್ ಮೃತಪಟ್ಟಿರುವುದು ತಿಳಿದುಬಂದಿತ್ತು. ಪತ್ನಿ ಪವಿತ್ರಾಳ ಮಾತನ್ನೇ ನಂಬಿದ್ದ ಸಂಬಂಧಿಕರು ಮೃತನ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದರು.
ಅಂತ್ಯಕ್ರಿಯೆ ಬಳಿಕ ಅದೇ ದಿನ ರಾತ್ರಿ ಪವಿತ್ರ ಆರೋಪಿ ಸುನೀಲ್ ಮನೆಗೆ ಹೋಗಿದ್ದಳು. ಇದನ್ನು ಸ್ಥಳೀಯರು ಗಮನಿಸಿದ್ದರಲ್ಲದೇ ಚಂದ್ರಹಾಸಗೆ ಮಾಹಿತಿ ನೀಡಿದ್ದರು. ಅನುಮಾನಗೊಂಡ ಆತ ಸಹೋದರನ ಸಾವು ಕೊಲೆ ಇರಬಹುದು ಎಂದು ಶಂಕಿಸಿದ್ದಾರೆ. ಅಲ್ಲದೇ ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ರಾಮಪ್ರಸಾದ್ ಪತ್ನಿ ಪವಿತ್ರ ಹಾಗೂ ಸುನೀಲ್ ನನ್ನು ಬಂಧಿಸಿ ವಿಚಾರಿಸಿದಾಗ ಕೊಲೆಯ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ.

