ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಮುಂಬರುವ ‘ಕಿಂಗ್’ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದು, ಈ ಸುದ್ದಿ ಈಗ ಸಿನಿರಂಗದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೀಪಿಕಾ ಅವರು ತಮ್ಮ ಎರಡನೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೇವಲ 37 ದಿನಗಳಲ್ಲಿ ಮತ್ತೆ ಶೂಟಿಂಗ್ ಸೆಟ್‌ಗೆ ಮರಳುತ್ತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ಬೆನ್ನಲ್ಲೇ ಹೆರಿಗೆಯ ನಂತರ ಕೆಲಸಕ್ಕೆ ಮರಳುವ ಮಹಿಳೆಯರ ಕಾಲಮಿತಿ ಹಾಗೂ ಅವರ ಮೇಲಿರುವ ಮಾನಸಿಕ ಮತ್ತು ಸಾಮಾಜಿಕ ಒತ್ತಡಗಳ ಕುರಿತು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆ ಆರಂಭವಾಗಿದೆ.
ಹೊಸ ಮಗುವಿನ ಆಗಮನದ ನಂತರ ಇಷ್ಟು ಬೇಗ ಕೆಲಸಕ್ಕೆ ಹಾಜರಾಗುವುದು ಪ್ರತಿಯೊಬ್ಬ ಮಹಿಳೆಯ ವೈಯಕ್ತಿಕ ನಿರ್ಧಾರವಾಗಿರುತ್ತದೆ. ಗ್ಲಾಮರ್ ಜಗತ್ತಿನಲ್ಲಿ ಕೆಲಸ ಮಾಡುವ ಪ್ರಸಿದ್ಧ ನಟಿಯರು ಮತ್ತು ಮಾಡೆಲ್‌ಗಳಿಗೆ ಕುಟುಂಬದ ಬೆಂಬಲ, ಹೈಟೆಕ್ ಶಿಶು ಪಾಲನೆ ಸೌಲಭ್ಯಗಳು ಹಾಗೂ ಅನುಕೂಲಕರ ವಾತಾವರಣ ಸಿಗುತ್ತದೆ. ಸೂಪರ್ ಮಾಡೆಲ್ ಬಾರ್ಬರಾ ಪಲ್ವಿನ್ ಹೆರಿಗೆಯ ಆರು ವಾರಗಳ ನಂತರ ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಶನ್ ಶೋನಲ್ಲಿ ಭಾಗವಹಿಸಿ, ತನಗೆ ಸಿಕ್ಕ ಆಯ್ಕೆಯ ಅವಕಾಶ ಹಾಗೂ ಬೆಂಬಲದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.
ಅದೇ ರೀತಿ ಭಾರತೀಯ ಚಿತ್ರರಂಗದ ನೇಹಾ ಧೂಪಿಯಾ ತಮ್ಮ ಮಗುವಿಗೆ 45 ದಿನಗಳಿದ್ದಾಗ ‘ರೋಡೀಸ್’ ಶೂಟಿಂಗ್‌ಗೆ ಹಾಜರಾಗಿದ್ದರೆ, ನಟಿ ಆಲಿಯಾ ಭಟ್ ತಮ್ಮ ಮಗು ರಹಾ ಹುಟ್ಟಿದ ಕೆಲವೇ ತಿಂಗಳಲ್ಲಿ ಹಿಮಾವೃತ ಕಾಶ್ಮೀರದಲ್ಲಿ ‘ಟುಮ್ ಕ್ಯಾ ಮಿಲೇ’ ಹಾಡಿನ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಇನ್ನು ಖ್ಯಾತ ಹಾಲಲಿವುಡ್ ನಟಿ ಲಿಸಾ ಕುಡ್ರೋ ಹೆರಿಗೆಯಾದ ಕೇವಲ 10 ದಿನಗಳಲ್ಲಿ ಶೂಟಿಂಗ್ ಸೆಟ್‌ಗೆ ಮರಳಿದ್ದ ಉದಾಹರಣೆಯೂ ಇದೆ. ಕೆಲಸದ ವಾತಾವರಣ, ಸಹೋದ್ಯೋಗಿಗಳ ಸಹಕಾರ ಹಾಗೂ ತಾಯಂದಿರಿಗೆ ನೀಡುವ ವಿರಾಮದ ಸಮಯಗಳು ಪ್ರತಿಯೊಬ್ಬರ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತವೆ.
ಆದರೆ ಈ ಉದಾಹರಣೆಗಳನ್ನು ಪ್ರತಿಯೊಬ್ಬ ಮಹಿಳೆಯ ಮೇಲೆಯೂ ಹೇರುವುದು ಸೂಕ್ತವಲ್ಲ. ಗ್ಲಾಮರ್ ಜಗತ್ತಿನ ಹಿನ್ನೆಲೆಯಲ್ಲಿ ಕಾಣುವ ಯಶಸ್ಸಿನ ಹಿಂದೆ ದೈಹಿಕ ಆಯಾಸ, ಮಾನಸಿಕ ತಂಟೆಗಳು ಹಾಗೂ ಮಗುವಿನ ಅಮ್ಮನಾಗಿ ಪಡಬೇಕಾದ ಶ್ರಮ ಅಡಗಿರುತ್ತದೆ. ಹೆರಿಗೆಯ ನಂತರ ಕೆಲಸಕ್ಕೆ ಮರಳುವುದು ಸ್ಪರ್ಧೆಯಲ್ಲ. ಪ್ರತಿಯೊಬ್ಬ ಮಹಿಳೆಗೂ ತನ್ನ ದೇಹದ ಚೇತರಿಕೆಗೆ ತಕ್ಕಂತೆ ಹಾಗೂ ಅನುಕೂಲಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಮತ್ತು ಹಕ್ಕು ಇರಬೇಕು ಎನ್ನುವುದೇ ಈ ಎಲ್ಲಾ ಅನುಭವಗಳು ಸಾರುವ ಮುಖ್ಯ ಸಂದೇಶವಾಗಿದೆ.

