ಬೆಂಗಳೂರು-: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚದ ಪಾರದರ್ಶಕತೆ ಹೆಚ್ಚಿಸಿ, ಅತಿಯಾದ ಬಿಲ್ಲಿಂಗ್ಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಪ್ರಮಾಣೀಕೃತ ಚಿಕಿತ್ಸಾ ದರಗಳನ್ನು ಜಾರಿಗೆ ತರುವ ಕುರಿತು ಚಿಂತನೆ ನಡೆಸಿದೆ.
ಆರೋಗ್ಯ ಸಚಿವರ ಸಭೆ
ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಗುರುವಾರ ಆರೋಗ್ಯ ಸೌಧದಲ್ಲಿ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಚಿಕಿತ್ಸಾ ಶುಲ್ಕಗಳ ನಿಯಂತ್ರಣ, ಔಷಧಗಳ ಬೆಲೆ ಪಾರದರ್ಶಕತೆ ಹಾಗೂ ರೋಗಿಗಳ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವ ಕುರಿತು ಚರ್ಚಿಸಿದರು.
ಪ್ರತಿಯೊಂದು ಆಸ್ಪತ್ರೆಯ ಸ್ವಾಗತ ಕೌಂಟರ್ನಲ್ಲಿ ಚಿಕಿತ್ಸಾ ಶುಲ್ಕಗಳ ದರಪಟ್ಟಿ ಪ್ರದರ್ಶಿಸಬೇಕು. ಇದರಿಂದ ರೋಗಿಗಳು ಚಿಕಿತ್ಸೆ ಪಡೆಯುವ ಮುನ್ನವೇ ವೆಚ್ಚದ ಬಗ್ಗೆ ತಿಳಿದುಕೊಂಡು ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ಆದರೆ, ಆಸ್ಪತ್ರೆಗಳ ಮೂಲಸೌಕರ್ಯ, ಸೌಲಭ್ಯ ಮತ್ತು ಸೇವೆಗಳ ಗುಣಮಟ್ಟದಲ್ಲಿ ವ್ಯತ್ಯಾಸಗಳಿರುವುದರಿಂದ ಎಲ್ಲ ಆಸ್ಪತ್ರೆಗಳಿಗೂ ಒಂದೇ ದರ ನಿಗದಿಪಡಿಸುವುದು ಕಷ್ಟ ಎಂದು ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದರು.
ಔಷಧಗಳ ಬೆಲೆ ಪಾರದರ್ಶಕತೆ
ಇದಲ್ಲದೆ, ಆಸ್ಪತ್ರೆಗಳು ಔಷಧಗಳನ್ನು ಖರೀದಿಸುವ ಬೆಲೆ ಮತ್ತು ರೋಗಿಗಳಿಗೆ ಮಾರಾಟ ಮಾಡುವ ಬೆಲೆಯ ವಿವರಗಳನ್ನು ಬಹಿರಂಗಪಡಿಸುವಂತೆಯೂ ಸರ್ಕಾರ ಸೂಚಿಸಿದೆ. ಕ್ಯಾನ್ಸರ್, ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಬಳಸುವ ಜೀವ ರಕ್ಷಕ ಔಷಧಗಳ ಬೆಲೆ ಇಳಿಕೆ ಕುರಿತು ಔಷಧ ತಯಾರಕರು ಮತ್ತು ವಿತರಕರೊಂದಿಗೆ ಮತ್ತಷ್ಟು ಚರ್ಚೆ ನಡೆಸಲು ನಿರ್ಧರಿಸಲಾಗಿದೆ.
ವೈದ್ಯಕೀಯ ಬಿಲ್ ಪಾವತಿಸದ ಕಾರಣ ಮೃತರ ಶವಗಳನ್ನು ಆಸ್ಪತ್ರೆಗಳು ತಡೆಹಿಡಿಯುವುದನ್ನು ತಡೆಯಲು ಸ್ಪಷ್ಟ ನೀತಿ ರೂಪಿಸುವುದಾಗಿಯೂ ಸರ್ಕಾರ ತಿಳಿಸಿದೆ. ಆರೋಗ್ಯ ವಿಮೆ ಹೊಂದಿರುವವರಿಗೆ ಹೆಚ್ಚುವರಿ ಶುಲ್ಕ ವಿಧಿಸುವ ದೂರುಗಳ ಕುರಿತು ವಿಮಾ ಕಂಪನಿಗಳೊಂದಿಗೂ ಸಭೆ ನಡೆಸಲು ಉದ್ದೇಶಿಸಲಾಗಿದೆ.
ಪ್ರಸ್ತಾವಿತ ಕ್ರಮಗಳನ್ನು ಜಾರಿಗೆ ತರಲು ಖಾಸಗಿ ಆಸ್ಪತ್ರೆಗಳು ಆರು ತಿಂಗಳ ಕಾಲಾವಕಾಶ ಕೋರಿದ್ದರೂ, ಅನುಷ್ಠಾನದ ಅವಧಿಯನ್ನು ಸಾಫ್ಟ್ವೇರ್ ನವೀಕರಣಕ್ಕೆ ಹೊಂದಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಏಕರೂಪದ ಚಿಕಿತ್ಸಾ ದರಗಳ ವ್ಯಾಪ್ತಿ, ಅನುಷ್ಠಾನದ ಕಾಲಮಿತಿ ಸೇರಿದಂತೆ ನೀತಿಯ ಅಂತಿಮ ರೂಪುರೇಷೆಗಳನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಈ ಕ್ರಮಗಳು ಜಾರಿಯಾದರೆ ವೈದ್ಯಕೀಯ ವೆಚ್ಚದಲ್ಲಿ ಪಾರದರ್ಶಕತೆ ಹೆಚ್ಚುವ ಜೊತೆಗೆ ರೋಗಿಗಳಿಗೆ ಅನಿರೀಕ್ಷಿತ ಆರ್ಥಿಕ ಹೊರೆಯಾಗುವುದನ್ನು ತಡೆಯಲು ನೆರವಾಗಬಹುದು.
ಸರ್ಕಾರದ ಪ್ರಸ್ತಾವನೆಗಳು
ಸರ್ಕಾರದ ಪ್ರಸ್ತಾವನೆಗಳು:
ಪ್ರಮಾಣೀಕೃತ ದರ ಕಾರ್ಡ್: ಆಸ್ಪತ್ರೆಗಳಲ್ಲಿ ಏಕರೂಪದ ಚಿಕಿತ್ಸಾ ಶುಲ್ಕವಿರಬೇಕು. ಪ್ರತಿಯೊಂದು ಆಸ್ಪತ್ರೆಯ ಸ್ವಾಗತ ಕೋಣೆಯಲ್ಲಿ ಚಿಕಿತ್ಸಾ ಶುಲ್ಕಗಳ ಡೈರೆಕ್ಟರಿ/ದರ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಇದರಿಂದ ರೋಗಿಗಳು ಚಿಕಿತ್ಸೆಗೆ ಒಳಪಡುವ ಮುನ್ನವೇ ವೆಚ್ಚದ ಅಂದಾಜು ಪಡೆಯಬಹುದು.
ಔಷಧ ಬೆಲೆ ಪಾರದರ್ಶಕತೆ: ಖಾಸಗಿ ಆಸ್ಪತ್ರೆಗಳು ತಾವು ಖರೀದಿಸುವ ಔಷಧಿಗಳ ನೈಜ ವೆಚ್ಚ (Landing Cost) ಮತ್ತು ರೋಗಿಗಳಿಗೆ ಮಾರಾಟ ಮಾಡುವ ಬೆಲೆಯನ್ನು ಬಹಿರಂಗಪಡಿಸಬೇಕು.
ಮೃತದೇಹ ತಡೆಹಿಡಿಯುವುದಕ್ಕೆ ತಡೆ: ಬಿಲ್ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಗಳು ಮೃತ ರೋಗಿಗಳ ಶವಗಳನ್ನು ತಡೆಹಿಡಿಯುವುದನ್ನು ತಡೆಯಲು ಸ್ಪಷ್ಟ ನೀತಿ ರೂಪಿಸಲಾಗುವುದು.
ವಿಮಾ ಗ್ರಾಹಕರಿಗೆ ರಕ್ಷಣೆ: ಆರೋಗ್ಯ ವಿಮಾ ಪಾಲಿಸಿದಾರರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದನ್ನು ತಡೆಯಲು ಮತ್ತು ಕ್ಲೈಮ್ ಪ್ರಕ್ರಿಯೆಯನ್ನು ಸರಳಗೊಳಿಸಲು ಸರ್ಕಾರ ಶೀಘ್ರದಲ್ಲೇ ವಿಮಾ ಕಂಪನಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಿದೆ.
ಖಾಸಗಿ ಆಸ್ಪತ್ರೆಗಳ ಆಕ್ಷೇಪಗಳು
ಖಾಸಗಿ ಆಸ್ಪತ್ರೆಗಳ ಆಕ್ಷೇಪ ಮತ್ತು ಕಳವಳ:
ಏಕರೂಪ ದರಕ್ಕೆ ವಿರೋಧ: ಕಾರ್ಪೊರೇಟ್ ಆಸ್ಪತ್ರೆಗಳು ಮತ್ತು ಸಣ್ಣ ಆಸ್ಪತ್ರೆಗಳ ಮೂಲಸೌಕರ್ಯ, ಸೌಲಭ್ಯ ಹಾಗೂ ಸೇವಾ ಗುಣಮಟ್ಟದಲ್ಲಿ ವ್ಯತ್ಯಾಸವಿರುವುದರಿಂದ ಎಲ್ಲರಿಗೂ ಒಂದೇ ರೀತಿಯ ದರ ಅನ್ವಯಿಸುವುದು ಪ್ರಾಯೋಗಿಕವಾಗಿ ಕಷ್ಟ ಎಂದು ಆಸ್ಪತ್ರೆ ಪ್ರತಿನಿಧಿಗಳು ಪ್ರತಿಪಾದಿಸಿದರು.
ಔಷಧ ತಯಾರಕರ ಪಾತ್ರ: ಔಷಧಿಗಳ ಹೆಚ್ಚಿನ MRP ಹಾಗೂ ಮಧ್ಯವರ್ತಿಗಳ ಕಮಿಷನ್ ದರ ಏರಿಕೆಗೆ ಕಾರಣವಾಗಿದೆ. ಆದ್ದರಿಂದ ಔಷಧ ತಯಾರಕರು ಮತ್ತು ವಿತರಕರೊಂದಿಗೂ ಸರ್ಕಾರ ಸಮಾಲೋಚನೆ ನಡೆಸಬೇಕೆಂದು ಕೋರಿದರು.
ಸಮಯಾವಕಾಶ: ನೂತನ ನೀತಿ ಜಾರಿಗೆ ಖಾಸಗಿ ಆಸ್ಪತ್ರೆಗಳು ೬ ತಿಂಗಳ ಕಾಲಾವಕಾಶ ಕೋರಿದವು, ಆದರೆ ಸಚಿವರು ಇದನ್ನು ತರಸ್ಕರಿಸಿದ್ದು ಸಾಫ್ಟ್ವೇರ್ ನವೀಕರಣದ ಆಧಾರದಲ್ಲಿ ಸಮಯಾವಕಾಶ ನಿರ್ಧರಿಸಲಾಗುವುದು ಎಂದಿದ್ದಾರೆ.

