ಚರ್ಮದ ಮೇಲಿನ ಮೊಡವೆ ಹಾಗೂ ಕಪ್ಪು ಕಲೆಗಳನ್ನು (ಬ್ಲ್ಯಾಕ್ಹೆಡ್ಸ್) ನಿವಾರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಇಂದು ಹೊಸದೊಂದು ಸಂಚಲನ ಸೃಷ್ಟಿಸುತ್ತಿವೆ. ಕಾಗದದ ಸದ್ದು ಅಥವಾ ಸೌಮ್ಯವಾದ ಗುಣಗುಣಿಸುವಿಕೆಯಂತಹ ಶಬ್ದಗಳ ಮೂಲಕ ಮನಸ್ಸಿಗೆ ಮುದ ನೀಡುವ ಎಎಸ್ಎಂಆರ್ (ASMR) ಅನುಭವದಂತೆ, ಈ ಬಗೆಯ ವಿಡಿಯೋಗಳು ಕೂಡ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುತ್ತಿವೆ. ಇನ್ಸ್ಟಾಗ್ರಾಮ್ ರೀಲ್ಸ್ ಹಾಗೂ ಯೂಟ್ಯೂಬ್ ಶಾರ್ಟ್ಸ್ ಮೂಲಕ ಈ ವಿಡಿಯೋಗಳು ಅತ್ಯಂತ ಸುಲಭವಾಗಿ ಎಲ್ಲರಿಗೂ ತಲುಪುತ್ತಿದ್ದು, ಅನೇಕರಿಗೆ ಇದು ವಿಚಿತ್ರ ಎನಿಸಿದರೂ ಕುತೂಹಲಕಾರಿ ಮತ್ತು ವಿಶ್ರಾಂತಿ ನೀಡುವ ಮನರಂಜನೆಯಾಗಿದೆ.
ಬೆಳಕಿನ ಹತ್ತಿರದಿಂದ ಚರ್ಮದ ಸೂಕ್ಷ್ಮ ಭಾಗವನ್ನು ತೋರಿಸುತ್ತಾ, ವೈದ್ಯರು ಅಥವಾ ಚರ್ಮ ತಜ್ಞರು stubborn ಆಗಿರುವ ಬ್ಲ್ಯಾಕ್ಹೆಡ್ಸ್ ಅಥವಾ ಮೊಡವೆಗಳನ್ನು ನಿವಾರಿಸುವ ದೃಶ್ಯಗಳು ವೀಕ್ಷಕರಲ್ಲಿ ತೀವ್ರ ನಿರೀಕ್ಷೆಯನ್ನು ಹುಟ್ಟಿಸುತ್ತವೆ. ಡಾ. ಸ್ಯಾಂಡ್ರಾ ಲೀ ಅಂದರೆ ಡಾ. ಪಿಂಪಲ್ ಪಾಪರ್ ಎಂಬುವವರು ಈ ಶೈಲಿಯನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ಈ ಶೈಲಿಯು ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ವೈರಲ್ ಆಗುತ್ತಲೇ ಇದೆ.
ಅಸಹ್ಯವೆನಿಸುವ ವಿಷಯವಿದ್ದರೂ ಕೆಲವರು ಇದನ್ನು ಇಷ್ಟಪಟ್ಟು ನೋಡಲು ಪ್ರಮುಖ ಕಾರಣ ಮಾನಸಿಕ ನೆಮ್ಮದಿ ಹಾಗೂ ಕುತೂಹಲ. ಗುರುಗ್ರಾಮ್ನ ಆರ್ಟಿಸ್ ಆಸ್ಪತ್ರೆಯ ಮನೋವೈದ್ಯೆ ಡಾ. ದೀಕ್ಷಾ ಕಲ್ರಾ ಅವರ ಪ್ರಕಾರ, ಮೊಡವೆ ಒಡೆಯುವುದರಿಂದ ಅಥವಾ ಸಮಸ್ಯೆಯೊಂದು ಪರಿಹಾರವಾಗುವುದನ್ನು ನೋಡುವುದರಿಂದ ಮೆದುಳಿಗೆ ತಾತ್ಕಾಲಿಕ ರಿಲ್ಯಾಕ್ಸೇಷನ್ ಹಾಗೂ ಸಣ್ಣದಾದ ರಿವಾರ್ಡ್ ಸಿಕ್ಕ ಅನುಭವವಾಗುತ್ತದೆ. ಚೆನ್ನೈನ ಗ್ಲೆನೆಗಲ್ಸ್ ಆಸ್ಪತ್ರೆಯ ಮನೋವೈದ್ಯೆ ಡಾ. ನಿಕಿತಾ ರಾವ್ತಾನಿ ಕೂಡ ಇದು ವೀಕ್ಷಕರ ಕುತೂಹಲವನ್ನು ತಣಿಸಿ ತೃಪ್ತಿ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ದೈನಂದಿನ ಒತ್ತಡದಿಂದ ಹೊರಬರಲು ಕೆಲವರು ಇಂತಹ ಪುನರಾವರ್ತಿತ ಪ್ರಕ್ರಿಯೆಯುಳ್ಳ ವಿಡಿಯೋಗಳನ್ನು ನೋಡುತ್ತಾರೆ.
ಆದರೆ, ಕೆಲವರು ಇದನ್ನು ನಿಜವಾದ ಎಎಸ್ಎಂಆರ್ ಅನುಭವವೆಂದು ಕರೆದರೆ, ಇನ್ನು ಕೆಲವರಿಗೆ ಇದು ಕೇವಲ ಕುತೂಹಲ ಹಾಗೂ ಮುಕ್ತಾಯದ ತೃಪ್ತಿಯನ್ನು ನೀಡುವ ದೃಶ್ಯಗಳಷ್ಟೇ ಆಗಿರುತ್ತದೆ. ಸಾಮಾಜಿಕ ಜಾಲತಾಣಗಳು ಇಂತಹ ವಿಡಿಯೋಗಳ ವ್ಯಾಪ್ತಿಯನ್ನು ಹೆಚ್ಚಿಸುತ್ತಿದ್ದರೂ, ಚರ್ಮದ ಸಮಸ್ಯೆಗಳಿರುವ ವ್ಯಕ್ತಿಗಳು ಇದನ್ನು ನೋಡಿ ತಾವಾಗೇ ಮೊಡವೆಗಳನ್ನು ಕೀಳಲು ಮುಂದಾಗುವುದು ಹಾನಿಕಾರಕ ಎಂದು ವೈದ್ಯರು ಎಚ್ಚರಿಸಿದ್ದಾರೆ. ಕನ್ನಡಿ ಮುಂದೆ ನಿಂತು ಮೊಡವೆಗಳನ್ನು ಒತ್ತಿ ತೆಗೆಯುವುದರಿಂದ ಸೋಂಕು ಹರಡುವುದು, ಕಲೆಗಳು ಹಾಗೂ ಶಾಶ್ವತ ಗಾಯಗಳಾಗುವ ಅಪಾಯವಿರುತ್ತದೆ. ಆದ್ದರಿಂದ ಇಂತಹ ದೃಶ್ಯಗಳನ್ನು ಕೇವಲ ಮನರಂಜನೆಯಾಗಿ ನೋಡಿ ಆನಂದಿಸುವುದೇ ಒಳ್ಳೆಯದು.

