ಕಲಬುರಗಿ: ಕೆಬಿಎಸ್ ಬ್ಯಾಂಕಿನಲ್ಲಿ ಭಾರಿ ಗೋಲ್ ಮಾಲ್ ನಡೆದಿದ್ದು, ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಬರೋಬ್ಬರಿ 76 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕಲಬುರಗಿಯ ಕೃಷ್ಣಾ ಸಮೃದ್ಧಿ (ಕೆಬಿಎಸ್) ಬ್ಯಾಂಕ್ ನಲ್ಲಿ 700 ಗ್ರಾಂ ಗೂ ಅಧಿಕ ನಕಲಿ ಚಿನ್ನಾಭರಣ ಅಡವಿಟ್ಟು 76 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಲಾಗಿದೆ. ಬ್ಯಾಂಕಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನಕಲಿ ಚಿನ್ನ ಪತ್ತೆಯಾಗಿರುವುದು ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ಈ ಗೋಲ್ ಮಾಲ್ ನಲ್ಲಿ ಬ್ಯಾಂಕ್ ಅಧಿಕಾರಿಗಳೇ ನೇರ ಶಾಮೀಲಾಗಿರುವ ಶಮ್ಕೆ ವ್ಯಕ್ತವಾಗಿದೆ. ಅಸಲಿ ಚಿನ್ನವಿಟ್ಟು ಸಾಲ ಪಡೆದ ಪ್ರಾಮಾಣಿಕ ಗ್ರಾಹಕರು ಸಹ ತಮ್ಮ ಒಡವೆಗಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಬ್ಯಾಂಕಿನಲ್ಲಿ ನಡೆದ ವಾರ್ಷಿಕ ಆಡಿಟ್ ವೇಳೆ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ನಕಲಿ ಚಿನ್ನದ ಮೇರೆಗೆ ಅಂದಾಜು 76 ಲಕ್ಷ ರೂಪಾಯಿಗಳಿಗೂ ಹೆಚ್ಚು ಸಾಲ ನೀಡಲಾಗಿದೆ ಎಂಬುದು ಗೊತ್ತಾಗಿದೆ. ಈ ಗಂಭೀರ ಅಕ್ರಮದ ಕುರಿತು ಬ್ಯಾಂಕ್ ಮ್ಯಾನೇಜರ್ ಹರ್ಷಾ ಕುಲಕರ್ಣಿ ಅವರು ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬ್ಯಾಂಕಿನ ಹಳೆ ಮ್ಯಾನೇಜರ್ ಹಾಗೂ ಚಿನ್ನಾಭರಣ ಪರಿಶೀಲನೆ ನಡೆಸುತ್ತಿದ್ದ ಅಕ್ಕಸಾಲಿಗನ ವಿರುದ್ಧ ದೂರು ನೀಡಲಾಗಿದ್ದು, ಈ ಗೋಲ್‌ಮಾಲ್ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸಿರುವ ಶಂಕೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಆಯ್ದ ಕೋನಗಳಿಂದಲೂ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸ್ಥಳೀಯರು ಹಾಗೂ ಗ್ರಾಹಕರು ಆಗ್ರಹಿಸುತ್ತಿದ್ದಾರೆ.
ಅಚ್ಚರಿ ಸಂಗತಿಯೆಂದರೆ, ದೂರು ನೀಡಿರುವ ಪ್ರಸ್ತುತ ಮ್ಯಾನೇಜರ್ ಹರ್ಷಾ ಕುಲಕರ್ಣಿ ಅವರ ಮೇಲೆಯೂ ಕೆಲವು ಗಂಭೀರ ಆರೋಪಗಳಿವೆ. ಅವರು ಈ ಹಿಂದೆ ಕಮಲಾಪುರ ಬ್ಯಾಂಕ್ ಮ್ಯಾನೇಜರ್ ಆಗಿದ್ದಾಗ ಬರೋಬ್ಬರಿ 84 ಲಕ್ಷ ರೂಪಾಯಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸದ್ಯ ನಕಲಿ ಚಿನ್ನದ ಈ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದು, ಕಮಲಾಪುರ ಪ್ರಕರಣದ ನಂಟಿನ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಂಕಿನ ಉನ್ನತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪಾತ್ರದ ಬಗ್ಗೆಯೂ ತೀವ್ರ ವಿಚಾರಣೆ ನಡೆಯುತ್ತಿದೆ. ಪೊಲೀಸರ ಸಂಪೂರ್ಣ ಹಾಗೂ ನಿಷ್ಪಕ್ಷಪಾತ ತನಿಖೆಯ ಬಳಿಕವಷ್ಟೇ ಈ ಬ್ಯಾಂಕ್ ಗೋಲ್‌ಮಾಲ್‌ನ ಅಸಲಿ ಸತ್ಯ ಹೊರಬರಬೇಕಿದೆ.
ಶೇಲವ್ವಾ ದೇವಿ ದೇವಸ್ಥಾನದಲ್ಲಿ ಅಚಾತುರ್ಯ: ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ
ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶೇಲವ್ವಾ ದೇವಿ ದೇವಸ್ಥಾನದಲ್ಲಿ ಅವಘಡ ಸಂಭವಿಸಿದೆ. ದೇವಸ್ಥಾನದ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಚಿಕ್ಕೋಡಿ ತಾಲೂಕಿನ ಜೋಡಟ್ಟಿ ಗ್ರಾಮದ ಶೇಲವ್ವಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮದ್ ಬಳಿಕ ಹಂಚಲಾಗಿದ್ದ ಪ್ರಸಾಅದ ಸೇವಿಸಿ ನೂರಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿದ್ದಾರೆ. ಪ್ರಸಾದ ಸೇವಿಸಿದ ಕೆಲ ಸಮಯದಲ್ಲೇ ಭಕ್ತರಿಗೆ ವಾಂತಿ, ಭೇದಿ ಶುರುವಾಗಿದ್ದು, ತೀವ್ರ ಅಸ್ವಸ್ಥರಾಗಿದ್ದಾರೆ.
ತಕ್ಷಣ ಅಸ್ವಸ್ಥ ಭಕ್ತರನ್ನು ಕಬ್ಬೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಡ್ ಪಾಯಿಸನ್ ಆಗಿ ಭಕ್ತರು ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ. ಪ್ರಸಾದ ಸೇವಿಸಿದ ಎಲ್ಲರಲ್ಲಿಯೂ ಆತಂಕ ಎದುರಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಶಾಸಕ ದುರ್ಯೋಧನ ಐಹೊಳೆ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರನ್ನು ವಿಚಾರಿಸಿದರು. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಸ್ಥಳದಲ್ಲಿ ಇಲ್ಲದಿರುವುದನ್ನು ಕಂಡು ಗರಂ ಆದ ದ್ಶಸಾಕರು ತರಾಟೆಗೆ ತೆಗೆದುಕೊಂಡರು.
ಇಷ್ಟೊಂದು ದೊಡ್ಡ ಪ್ರಮಾಣದ ತುರ್ತು ಪರಿಸ್ಥಿತಿ ಇದ್ದರೂ ಆಸ್ಪತ್ರೆಯಲ್ಲಿ ಕರ್ತವ್ಯನಿರತರಾಗಿರಬೇಕಾದ ತಾಲೂಕು ಆರೋಗ್ಯಾಧಿಕಾರಿ ಗೈರಾಗಿರುವುದು ಕಂಡುಬಂದಿದೆ.
ಆರೋಗ್ಯಾಧಿಕಾರಿ ಡಾ. ರಾಜಶೇಖರ ಖಣದಾಳೆ ಅವರಿಗೆ ಫೋನ್ ಮಾಅಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. “ಇಷ್ಟೊಂದು ಜನ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಎಲ್ಲಿದ್ದೀಯಾ? ಸಾರಾಯಿ ಅಂಗಡಿಯಲ್ಲಿದ್ದೀಯಾ? ಕುಡಿದು ಮಲಗಿದ್ದೀಯಾ?” ಎಂದು ಕಟು ಪದಗಳಿಂದ ಬೈದಿದ್ದಾರೆ. ಅಲ್ಲದೆ, “ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡದೆ ತಕ್ಷಣವೇ ಆಸ್ಪತ್ರೆಗೆ ಆಗಮಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಕ್ರಮ ವಹಿಸಬೇಕು” ಎಂದು ಎಚ್ಚರಿಕೆ ನೀಡಿದರು.
ಘಟನಾ ಸ್ಥಳಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಸ್ವಸ್ಥರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

