ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶೇಲವ್ವಾ ದೇವಿ ದೇವಸ್ಥಾನದಲ್ಲಿ ಅವಘಡ ಸಂಭವಿಸಿದೆ. ದೇವಸ್ಥಾನದ ಪ್ರಸಾದ ಸೇವಿಸಿ 100ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಚಿಕ್ಕೋಡಿ ತಾಲೂಕಿನ ಜೋಡಟ್ಟಿ ಗ್ರಾಮದ ಶೇಲವ್ವಾ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮದ್ ಬಳಿಕ ಹಂಚಲಾಗಿದ್ದ ಪ್ರಸಾಅದ ಸೇವಿಸಿ ನೂರಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿದ್ದಾರೆ. ಪ್ರಸಾದ ಸೇವಿಸಿದ ಕೆಲ ಸಮಯದಲ್ಲೇ ಭಕ್ತರಿಗೆ ವಾಂತಿ, ಭೇದಿ ಶುರುವಾಗಿದ್ದು, ತೀವ್ರ ಅಸ್ವಸ್ಥರಾಗಿದ್ದಾರೆ.
ತಕ್ಷಣ ಅಸ್ವಸ್ಥ ಭಕ್ತರನ್ನು ಕಬ್ಬೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಡ್ ಪಾಯಿಸನ್ ಆಗಿ ಭಕ್ತರು ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ. ಪ್ರಸಾದ ಸೇವಿಸಿದ ಎಲ್ಲರಲ್ಲಿಯೂ ಆತಂಕ ಎದುರಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಶಾಸಕ ದುರ್ಯೋಧನ ಐಹೊಳೆ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರನ್ನು ವಿಚಾರಿಸಿದರು. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಸ್ಥಳದಲ್ಲಿ ಇಲ್ಲದಿರುವುದನ್ನು ಕಂಡು ಗರಂ ಆದ ದ್ಶಸಾಕರು ತರಾಟೆಗೆ ತೆಗೆದುಕೊಂಡರು.
ಇಷ್ಟೊಂದು ದೊಡ್ಡ ಪ್ರಮಾಣದ ತುರ್ತು ಪರಿಸ್ಥಿತಿ ಇದ್ದರೂ ಆಸ್ಪತ್ರೆಯಲ್ಲಿ ಕರ್ತವ್ಯನಿರತರಾಗಿರಬೇಕಾದ ತಾಲೂಕು ಆರೋಗ್ಯಾಧಿಕಾರಿ ಗೈರಾಗಿರುವುದು ಕಂಡುಬಂದಿದೆ.
ಆರೋಗ್ಯಾಧಿಕಾರಿ ಡಾ. ರಾಜಶೇಖರ ಖಣದಾಳೆ ಅವರಿಗೆ ಫೋನ್ ಮಾಅಡಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. “ಇಷ್ಟೊಂದು ಜನ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಎಲ್ಲಿದ್ದೀಯಾ? ಸಾರಾಯಿ ಅಂಗಡಿಯಲ್ಲಿದ್ದೀಯಾ? ಕುಡಿದು ಮಲಗಿದ್ದೀಯಾ?” ಎಂದು ಕಟು ಪದಗಳಿಂದ ಬೈದಿದ್ದಾರೆ. ಅಲ್ಲದೆ, “ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡದೆ ತಕ್ಷಣವೇ ಆಸ್ಪತ್ರೆಗೆ ಆಗಮಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಕ್ರಮ ವಹಿಸಬೇಕು” ಎಂದು ಎಚ್ಚರಿಕೆ ನೀಡಿದರು.
ಘಟನಾ ಸ್ಥಳಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಸ್ವಸ್ಥರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

