ವಿಯೆಟ್ನಾಂನ ಹೋ ಚಿ ಮಿನ್ ನಗರದಲ್ಲಿ ಭಾರತೀಯ ಯುವಕನೊಬ್ಬನಿಗೆ ಎದುರಾದ 60 ವರ್ಷದ ಅಮೆರಿಕನ್ ವೃದ್ಧನೊಬ್ಬನ ಪರಿಚಯವು, ಸಮಾಜದಲ್ಲಿ ವ್ಯಕ್ತಿಯೊಬ್ಬನ ಜೀವಿತಾವಧಿಯ ಆಯ್ಕೆಗಳು, ಸ್ವಾತಂತ್ರ್ಯ ಮತ್ತು ಏಕಾಂಗಿತನದ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ವಿಯೆಟ್ನಾಂ ಪ್ರವಾಸದಲ್ಲಿದ್ದ ಪ್ರಾಂಜಲ್ ಸೋನಿ ಎಂಬ ಭಾರತೀಯ ಯುವಕ, ನ್ಯೂಯಾರ್ಕ್ ಮೂಲದ 60 ವರ್ಷದ ವ್ಯಕ್ತಿಯನ್ನು ಭೇಟಿಯಾಗಿದ್ದರು. ಮಾತುಕತೆಯ ಸಂದರ್ಭದಲ್ಲಿ ಆ ವ್ಯಕ್ತಿಯು ತಾನು ಮದುವೆಯಾಗಿಲ್ಲ, ಮಕ್ಕಳೂ ಇಲ್ಲ ಮತ್ತು ಅಮೆರಿಕದಲ್ಲಿ ಕೆಲವು ತಿಂಗಳುಗಳ ಕಾಲ ಕ್ಲೀನಿಂಗ್ ಕೆಲಸ ಮಾಡಿ ಸಂಪಾದಿಸಿದ ಹಣದಿಂದ ಏಷ್ಯಾದ ದೇಶಗಳನ್ನು ಸುತ್ತುತ್ತಿರುವುದಾಗಿ ತಿಳಿಸಿದ್ದಾರೆ. ಹಣ ಮುಗಿಯುತ್ತಿದ್ದಂತೆ ಮತ್ತೆ ಕಷ್ಟಪಟ್ಟು ಕೆಲಸ ಮಾಡಿ ಮುಂದಿನ ಪ್ರವಾಸಕ್ಕೆ ಹಣ ಜೋಡಿಸುವುದು ಅವರ ಜೀವನಶೈಲಿಯಾಗಿತ್ತು.
ಈ ವಿಭಿನ್ನ ಜೀವನ ಶೈಲಿಯನ್ನು ಕಂಡು ಅಚ್ಚರಿಗೊಂಡ ಸೋನಿ, “ನೀವು ಏಕೆ ಮದುವೆಯಾಗಲಿಲ್ಲ? 80 ವರ್ಷ ವಯಸ್ಸಾದಾಗ ನಿಮ್ಮನ್ನು ಯಾರು ನೋಡಿಕೊಳ್ಳುತ್ತಾರೆ?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಸುನಕ್ಕ ವೃದ್ಧ, “ನ್ಯೂಯಾರ್ಕ್ನಲ್ಲಿ ಇಂತಹ ವಿಷಯಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ, ನಿಮಗಿಷ್ಟ ಬಂದಂತೆ ನೀವಿಲ್ಲಿ ಜೀವಿಸಬಹುದು” ಎಂದು ಉತ್ತರಿಸಿದ್ದಾರೆ.
ನಮ್ಮ ದೇಶದಲ್ಲಿ ಈ ವಯಸ್ಸಿನವರು ಮೊಮ್ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದರೆ, ಈ ವೃದ್ಧ ತಮ್ಮ ಉಳಿತಾಯದ ಹಣದಲ್ಲಿ ವಿಯೆಟ್ನಾಂನ ಹಾಸ್ಟೆಲ್ಗಳಲ್ಲಿ ವಾಸಿಸುತ್ತಾ ಜೀವನ ಆನಂದಿಸುತ್ತಿರುವುದು ಭಾರತೀಯ ಯುವಕನಿಗೆ ಆಶ್ಚರ್ಯ ತಂದಿದೆ. ಸೋನಿ ಅವರು ಈ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ನೆಟಿಜನ್ಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಆತನ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಕುಟುಂಬವಿಲ್ಲದ ಆತನ ಏಕಾಂಗಿ ಜೀವನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

