ವಾಣಿಜ್ಯ ನಗರಿ ಬೆಂಗಳೂರಿಗೆ ವೃತ್ತಿಪರ ಕೆಲಸದ ನಿಮಿತ್ತ ಬಂದಿದ್ದ ವ್ಯಕ್ತಿಯೊಬ್ಬರು ತಾವು ಎದುರಿಸಿದ ಅಹಿತಕರ ಅನುಭವ ಹಾಗೂ ಬೆಂಗಳೂರು ಪೊಲೀಸರ ಮಾನವೀಯ ಹಾಗೂ ತಕ್ಷಣದ ಸ್ಪಂದನೆಯನ್ನು ಸಾಮಾಜಿಕ ಜಾಲತಾಣವಾದ ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ಕ್ಯಾಬ್ನಲ್ಲಿ ಬಿಟ್ಟುಹೋದ ಮೊಬೈಲ್ ಫೋನ್ ಅನ್ನು ವಾಪಸ್ ನೀಡಲು ಚಾಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮ್ಯಾನೇಜರ್ ಜೊತೆ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯು ಕೆಲಸ ಮುಗಿಸಿ ಯಲಹಂಕ ಕಡೆಗೆ ಊಟ ಮಾಡಲು ರಾಪಿಡೋ ಕ್ಯಾಬ್ ಬುಕ್ ಮಾಡಿದ್ದರು. ರೆಸ್ಟೋರೆಂಟ್ಗೆ ತಲುಪಿದ ಬಳಿಕ ಮ್ಯಾನೇಜರ್ ತಮ್ಮ ಮೊಬೈಲ್ ಫೋನ್ ಅನ್ನು ಕ್ಯಾಬ್ನಲ್ಲೇ ಬಿಟ್ಟು ಬಂದಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಅದೇ ನಂಬರ್ಗೆ ಕರೆ ಮಾಡಿದಾಗ ಚಾಲಕ ಮೊದಲು ಒಪ್ಪದಿದ್ದರೂ, ಬಳಿಕ ತನ್ನ ಬಳಿ ಫೋನ್ ಇರುವುದಾಗಿ ಒಪ್ಪಿಕೊಂಡಿದ್ದಾನೆ.
ಚಾಲಕನ ಅತಿಯಾದ ಬೇಡಿಕೆ: ಫೋನ್ ಕಳೆದುಕೊಂಡಿದ್ದವರು ಚಾಲಕನಿಗೆ ತೊಂದರೆಗೆ ತಕ್ಕಂತೆ ಹಣ ನೀಡುವುದಾಗಿ ತಿಳಿಸಿ, ಸ್ವಿಗ್ಗಿ ಜೀನಿ (Swiggy Genie) ಮೂಲಕ ಫೋನ್ ಕಳುಹಿಸುವಂತೆ ಮನವಿ ಮಾಡಿದರು. ಆದರೆ ಚಾಲಕ ತಾನು ಬೇರೆ ಟ್ರಿಪ್ನಲ್ಲಿದ್ದೇನೆ ಎಂದು ನಿರಾಕರಿಸಿದ್ದು, ನೇರವಾಗಿ ಬಂದು ಪಡೆದುಕೊಳ್ಳುತ್ತೇವೆ ಎಂದರೂ ಬೇರೆಡೆ ಇರುವುದಾಗಿ ಹೇಳಿ ಸಬೂಬು ಹೇಳಿದ್ದಾನೆ. ಅಂತಿಮವಾಗಿ ಬೇರೆ ಟ್ರಿಪ್ನಲ್ಲಿ ನಾಲ್ಕು ಸಾವಿರ ರೂಪಾಯಿ ನಷ್ಟವಾಗುತ್ತದೆ ಎಂದು ಹೇಳಿ, ಫೋನ್ ವಾಪಸ್ ನೀಡಲು ಬರೋಬ್ಬರಿ ಮೂರು ಸಾವಿರ ರೂಪಾಯಿಗಳಿಗೆ ಬೇಡಿಕೆ ಇಟ್ಟನು.
ಮಧ್ಯಾಹ್ನದಿಂದ ಸಂಜೆವರೆಗೆ ಚಾಲಕನ ವರ್ತನೆಯಿಂದ ರೋಸಿಹೋದ ಪ್ರಯಾಣಿಕರು, ಯಾವುದೇ ದಾರಿ ಕಾಣದೆ ಕೊನೆಗೆ ಚಿಕ್ಕಜಾಲ ಪೊಲೀಸ್ ಠಾಣೆಯ ಮೊರೆ ಹೋದರು. ಕನ್ನಡ ಬಾರದಿದ್ದರೂ ಸಹ ಸ್ಥಳದಲ್ಲಿದ್ದ ಪೊಲೀಸರು ಹಿಂದಿ ಭಾಷೆಯಲ್ಲಿ ಇವರ ಕಷ್ಟವನ್ನು ಆಲಿಸಿ ತಕ್ಷಣವೇ ನೆರವಿಗೆ ಧಾವಿಸಿದರು.
ಪೊಲೀಸರ ಸಮಯೋಚಿತ ಕ್ರಮ: ಕೂಡಲೇ ಚಾಲಕನನ್ನು ಸಂಪರ್ಕಿಸಿದ ಪೊಲೀಸರು, ಠಾಣೆಗೆ ಬಂದು ಫೋನ್ ಒಪ್ಪಿಸುವಂತೆ ಎಚ್ಚರಿಕೆ ನೀಡಿದರು. ಪೊಲೀಸರ ಧ್ವನಿಯನ್ನು ಕೇಳುತ್ತಿದ್ದಂತೆ ಚಾಲಕನ ಅಹಂಕಾರ ಕರಗಿ, ತಕ್ಷಣವೇ ತಾನು ಕೇವಲ 5 ಕಿ.ಮೀ ದೂರದಲ್ಲೇ ಇರುವುದಾಗಿ ತಿಳಿಸಿ ಸ್ವಿಗ್ಗಿ ಜೀನಿ ಮೂಲಕ ಫೋನ್ ಕಳುಹಿಸಿಕೊಟ್ಟನು. ಪೊಲೀಸರ ಈ ಸಹಾಯಕ್ಕೆ ಧನ್ಯವಾದ ಅರ್ಪಿಸಿರುವ ಸಂತ್ರಸ್ತರು, ಬೆಂಗಳೂರು ಪೊಲೀಸರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

