ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಹಾಗೂ ಸಂಸದೀಯ ಮಂಡಳಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.
79ರ ವಯಸ್ಸಿನಲ್ಲಿ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿರುವ ಸೋನಿಯಾ ಗಾಂಧಿ, ತಮ್ಮ ಬಹುನಿರೀಕ್ಷಿತ ಆತ್ಮಚರಿತ್ರೆ “ಬಿಲಾಂಗಿಂಗ್: ಎ ಜರ್ನಿ ಆಫ್ ಲವ್” ಪುಸ್ತಕದ ಮೊದಲ ನೋಟದ ವಿಡಿಯೋ ರೀಲ್ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಈವರೆಗೆ ಫೇಸ್ಬುಕ್, ಎಕ್ಸ್ ಅಥವಾ ಇನ್ಸ್ಟಾಗ್ರಾಮ್ನಂತಹ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯ ಖಾತೆ ಹೊಂದಿರದ ಸೋನಿಯಾ ಗಾಂಧಿ, ಇದೇ ಮೊದಲ ಬಾರಿಗೆ ಇನ್ ಸ್ಟಾಗ್ರಾಮ್ ಮೂಲಕ ಡಿಜಿಟಲ್ ಜಗತ್ತಿಗೆ ಪದಾರ್ಪಣೆ ಮಾಡಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾದ ಮೊದಲ ಭಾವನಾತ್ಮಕ ವಿಡಿಯೋದಲ್ಲಿ, ಸೋನಿಯಾ ಗಾಂಧಿ ಅವರು ತಮ್ಮ ಆತ್ಮಚರಿತ್ರೆಯ ಮುದ್ರಿತ ಪ್ರತಿಯನ್ನು ಮೊದಲ ಬಾರಿಗೆ ಕೈಗೆತ್ತಿಕೊಂಡು ಪುಟಗಳನ್ನು ತಿರುಗಿಸುವುದನ್ನು ಕಾಣಬಹುದು. ಪಕ್ಕದಲ್ಲೇ ಕುಳಿತಿರುವ ಮಗಳು ಪ್ರಿಯಾಂಕಾ ಗಾಂಧಿ ಅವರಿಗೆ ಪುಸ್ತಕದಲ್ಲಿರುವ ಹಳೆಯ ಅಪರೂಪದ ಛಾಯಾಚಿತ್ರಗಳನ್ನು ತೋರಿಸುತ್ತಾ, “ಪ್ರಿಯಾಂಕಾ, ನೋಡು ಇಲ್ಲಿ ತುಂಬಾ ಹಳೆಯ ಚಿತ್ರಗಳಿವೆ” ಎಂದು ಖುಷಿಯಿಂದ ಹೇಳುತ್ತಾರೆ. ಪುಸ್ತಕದಲ್ಲಿ ಪತಿ ದಿ. ರಾಜೀವ್ ಗಾಂಧಿ, ಪುತ್ರ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಅವರ ಬಾಲ್ಯದ ಹಲವು ಕೌಟುಂಬಿಕ ಕ್ಷಣಗಳ ಚಿತ್ರಗಳಿವೆ. ವೀಡಿಯೊದ ಕೊನೆಯಲ್ಲಿ ಅವರು ಸಂಭ್ರಮದ ಸಂಕೇತವಾಗಿ ಸಿಹಿತಿಂಡಿಗಳನ್ನು ಹಂಚುವುದು ಕಂಡುಬಂದಿದೆ.
ಎಲ್ಲರಿಗೂ ನಮಸ್ಕಾರ, ಈ ಸುಂದರ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನಗೆ ಅಪಾರ ಸಂತೋಷವಾಗುತ್ತಿದೆ. ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿಯ ಮೊದಲ ನೋಟ ಇಲ್ಲಿದೆ. ಇದು ಪ್ರೀತಿ, ಕರ್ತವ್ಯ, ಅಗಲಿಕೆಯ ನೋವು ಮತ್ತು ಬದುಕಿನ ನೈಜ ಅರ್ಥವನ್ನು ಕಂಡುಕೊಳ್ಳುವ ಪಯಣದ ಕಥೆ. ಈ ಪುಸ್ತಕವನ್ನು ನಿಮ್ಮ ಕೈಗಿಡಲು ನಾನು ಕಾತರಳಾಗಿದ್ದೇನೆ ಎಂದು ಬರೆದಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ಅವರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಪ್ರಕಾಶನ ಸಂಸ್ಥೆಯಾದ ಹಾರ್ಪರ್ಕಾಲಿನ್ಸ್ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ. ಪ್ರಸ್ತುತ ಅವರು ಇನ್ಸ್ಟಾಗ್ರಾಮ್ನಲ್ಲಿ ಕಾಂಗ್ರೆಸ್ ಅಧಿಕೃತ ಖಾತೆ, ರಾಹುಲ್ ಮತ್ತು ಪ್ರಿಯಾಂಕಾ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.
ಪ್ರಿಯಾಂಕಾ ಗಾಂಧಿ ಪುತ್ರನ ಛಾಯಾಚಿತ್ರ ಪ್ರದರ್ಶನಕ್ಕೆ ಅಡ್ಡಿ: 74 ಛಾಯಾಚಿತ್ರಗಳನ್ನು ತೆರವುಗೊಳಿಸಿದ ಬಿಕಾನೆರ್ ಹೌಸ್: ಕಾಂಗ್ರೆಸ್ ಆಕ್ರೋಶ
ನವದೆಹಲಿ: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ, ಛಾಯಾಗ್ರಾಹಕ ರೆಹಾನ್ ವಾದ್ರಾ ಆಯೋಜಿಸಿದ್ದ ಏಕವ್ಯಕ್ತಿ ಕಲಾ ಪ್ರದರ್ಶನ ಆರಂಭಕ್ಕೂ ಮುನ್ನವೇ ಭಾರಿ ವಿವಾದಕ್ಕೆ ಕಾರಣವಾಗಿದೆ. ನವದೆಹಲಿಯ ಪ್ರತಿಷ್ಠಿತ ಬಿಕಾನೆರ್ ಹೌಸ್ನಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ, 74 ಛಾಯಾಚಿತ್ರಗಳನ್ನು ತೆರವುಗೊಳಿಸಲಾಗಿದೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಮತ್ತು ಯುವಕರ ಪ್ರತಿಭಟನೆಗಳನ್ನು ಬಿಂಬಿಸುವ ಸುಮಾರು 74 ಛಾಯಾಚಿತ್ರಗಳನ್ನು ಬಿಕಾನೆರ್ ಹೌಸ್ ನಿಂದ ಆಡಳಿತ ಮಂಡಳಿಯು ಬಲವಂತವಾಗಿ ತೆರವುಗೊಳಿಸಿದೆ ಎಂದು ತಿಳಿದುಬಂದಿದೆ.
ರೆಹಾನ್ ವಾದ್ರಾ ‘ನೋ ಐಡಿಯಾ ಈಸ್ ಫೈನಲ್’ (No Idea is Final) ಹೆಸರಿನಲ್ಲಿ ತಮ್ಮ ಮೂರನೇ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಆಯೋಜಿಸಿದ್ದರು. ಇದರಲ್ಲಿ ವನ್ಯಜೀವಿಗಳು, ಅಮೂರ್ತ ಕಲೆ ಮತ್ತು ಕಳೆದ ಆರು ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಯುವ ಚಳವಳಿಗಳ ಬೀದಿ ಛಾಯಾಗ್ರಹಣ ಸೇರಿದಂತೆ 100ಕ್ಕೂ ಹೆಚ್ಚು ಕಲಾಕೃತಿಗಳನ್ನು ಇರಿಸಲಾಗಿತ್ತು. ಆದರೆ, ಪ್ರದರ್ಶನ ಆರಂಭವಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ, ಪ್ರದರ್ಶನದ ಬಹುತೇಕ ಅರ್ಧ ಭಾಗವನ್ನು ಅಂದರೆ 74 ಫೋಟೋಗಳು ತೆಗೆದುಹಾಕುವಂತೆ ಬಿಕಾನೆರ್ ಹೌಸ್ ಆಡಳಿತ ಸೂಚಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೆಹಾನ್ ವಾದ್ರಾ, “ಸಂಜೆ 5 ಗಂಟೆಯೊಳಗೆ ಪ್ರತಿಭಟನಾ ಚಿತ್ರಗಳನ್ನು ತೆಗೆಯದಿದ್ದರೆ ಇಡೀ ಪ್ರದರ್ಶನವನ್ನೇ ರದ್ದುಗೊಳಿಸುವುದಾಗಿ ಮಧ್ಯಾಹ್ನ 3.30ಕ್ಕೆ ಆಡಳಿತ ಎಚ್ಚರಿಕೆ ನೀಡಿತು. ದೇಶದ ಪ್ರಸ್ತುತ ರಾಜಕೀಯ ವಾತಾವರಣದಲ್ಲಿ ಇಂತಹ ಫೋಟೋಗಳನ್ನು ಪ್ರದರ್ಶಿಸಲು ಇದು ಸರಿಯಾದ ಸಮಯವಲ್ಲ ಎಂದು ಸಮರ್ಥಿಸಿಕೊಂಡರು” ಎಂದು ತಿಳಿಸಿದ್ದಾರೆ.
ತ್ರಿವರ್ಣ ಧ್ವಜವನ್ನು ಒಳಗೊಂಡ ಎರಡು ಛಾಯಾಚಿತ್ರಗಳನ್ನು ತೆಗೆಯುವಂತೆ ಕೇಳಿದರು. ಆದರೆ ಭಾರತೀಯ ಧ್ವಜದ ಚಿತ್ರವನ್ನು ತೆಗೆದುಹಾಕಲು ನಾನು ಖಡಾಖಂಡಿತವಾಗಿ ನಿರಾಕರಿಸಿದೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಈ ಚಿತ್ರಗಳು ಯಾವುದೇ ರಾಜಕೀಯ ಸಂದೇಶ ಹೊಂದಿಲ್ಲ, ಸಮಾಜದಲ್ಲಿ ನಡೆಯುವುದನ್ನು ದಾಖಲಿಸುವುದು ಕಲಾವಿದನಾಗಿ ನನ್ನ ಕರ್ತವ್ಯ. ಪ್ರದರ್ಶನದ ಸಂಪೂರ್ಣ ವಿನ್ಯಾಸವನ್ನು ಮೊದಲೇ ನೀಡಿದ್ದರೂ ಕೊನೆ ಕ್ಷಣದಲ್ಲಿ ಶೇ.50 ಕಲಾಕೃತಿಗಳನ್ನು ಸೆನ್ಸಾರ್ ಮಾಡಲಾಗಿದೆ. ಮುಂದೆ ಸೂಕ್ತ ಸ್ಥಳ ಸಿಕ್ಕಾಗ ಇಡೀ ಸಂಗ್ರಹವನ್ನು ಸಾರ್ವಜನಿಕರಿಗೆ ಪ್ರದರ್ಶಿಸುತ್ತೇನೆ ಎಂದಿದ್ದಾರೆ.
ಈ ಘಟನೆ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ಹಾಸ್ಯಾಸ್ಪದ. ದೇಶಾದ್ಯಂತ ಯುವಕರ ಧ್ವನಿಯನ್ನು ಹೇಗೆ ಹತ್ತಿಕ್ಕಲಾಗುತ್ತಿದೆಯೋ ಹಾಗೆಯೇ ಇಲ್ಲಿ ಒಬ್ಬ ಯುವ ಕಲಾವಿದನ ಧ್ವನಿಯನ್ನು ಅಡಗಿಸಲಾಗುತ್ತಿದೆ. ಆ ಚಿತ್ರಗಳಲ್ಲಿ ಯಾರ ವಿರುದ್ಧವೂ ಅವಹೇಳನಕಾರಿ ಅಂಶಗಳಿರಲಿಲ್ಲ, ಕೇವಲ ನೈಜ ದೃಶ್ಯಗಳಿದ್ದವು. ಇದು ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ ಎಂಬುದನ್ನು ತೋರಿಸುತ್ತದೆ. ಇಂದು ನನ್ನ ಮಗನಿಗೆ ಹೀಗಾಗಿದೆ, ನಾಳೆ ಬೇರೊಬ್ಬ ಕಲಾವಿದನಿಗೂ ಇದು ಆಗಬಹುದು ಎಂದು ಕಿಡಿಕಾರಿದ್ದಾರೆ.
ಎಐಸಿಸಿ ಮುಖಂಡ ಪವನ್ ಖೇರಾ ಮಾತನಾಡಿ, ತ್ರಿವರ್ಣ ಧ್ವಜ ಕೂಡ ಸೆನ್ಸಾರ್ ಕತ್ತರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರೆ, ಸಮಸ್ಯೆ ಇರುವುದು ಕಲೆಯಲ್ಲಲ್ಲ, ಅಧಿಕಾರದಲ್ಲಿರುವವರ ಮನಸ್ಥಿತಿಯಲ್ಲಿ. ಕೇಂದ್ರ ಸರ್ಕಾರವು ಸ್ವತಂತ್ರ ಆಲೋಚನೆಗಳು ಮತ್ತು ಪ್ರತಿಭಟನೆಗಳಿಗೆ ಎಷ್ಟು ಹೆದರುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಟೀಕಿಸಿದ್ದಾರೆ.

