ಗುಜರಾತ್‌ನ ಗಾಂಧಿನಗರದಲ್ಲಿ ನವರಾತ್ರಿ ಉತ್ಸವದ ಸಂಭ್ರಮ ಮುಗಿಸಿ ವಾಪಸ್ಸಾಗುತ್ತಿದ್ದ ಸ್ನೇಹಿತರ ಕಾರು ಅಪಘಾತಕ್ಕೀಡಾಗಿ ಮೂವರು ಯುವಕ-ಯುವತಿಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ದಸರಾ ಹಬ್ಬದ ಮುಂಜಾನೆ ಅಡಲಾಜ್ ರಸ್ತೆಯ ಮಹಾರಾಜ ಹೋಟೆಲ್ ಬಳಿ ಈ ಭೀಕರ ದುರಂತ ಸಂಭವಿಸಿದ್ದು, ಮತ್ತೊಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ನಾಲ್ವರು ಸ್ನೇಹಿತರು ಹ್ಯುಂಡೈ ವೆರ್ನಾ ಕಾರಿನಲ್ಲಿ ಗರ್ಬಾ ಆಡಿ ಅಹಮದಾಬಾದ್ ಕಡೆಗೆ ಮರಳುತ್ತಿದ್ದರು. ಆ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಅತಿವೇಗದ ಕಾರು ರಸ್ತೆಯ ಮಧ್ಯೆ ಇದ್ದ ವಿಭಜಕಕ್ಕೆ ಜೋರಾಗಿ ಡಿಕ್ಕಿಹೊಡೆದು ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗೆಇದ್ದ ನಾಲ್ವರು ಪ್ರಯಾಣಿಕರು ವಾಹನದ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದರು.
ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಮತ್ತು ಸ್ಥಳೀಯರು ಕೂಡಲೇ ಧಾವಿಸಿ ಬಂದು ಹೆಚ್ಚಿನ ಶ್ರಮದ ಬಳಿಕ ಪ್ರಯಾಣಿಕರನ್ನು ಹೊರತೆಗೆದಿದ್ದಾರೆ. ತೀವ್ರ ಸ್ವರೂಪದ ತಲೆಗೆ ಪೆಟ್ಟು ಬಿದ್ದ ಕಾರಣ ಯುವಕ ಹಾಗೂ ಯುವತಿಯೊಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಕೂಡಲೇ ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಯುವತಿಯೊಬ್ಬರು ಮೃತಪಟ್ಟಿದ್ದಾರೆ.
ಮೃತಪಟ್ಟ ಯುವತಿಯನ್ನು ರಾಜಕೋಟ್ ಮೂಲದ ಇಪ್ಪತ್ತೈದು ವರ್ಷದ ಆಸ್ಥಾ ಎಂದು ಗುರುತಿಸಲಾಗಿದೆ. ಈಕೆ ಅಹಮದಾಬಾದ್‌ನ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಎಂಬಿಬಿಎಸ್ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದರು. ಉಳಿದ ಇಬ್ಬರು ಮೃತರ ಅಧಿಕೃತ ಗುರುತನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ತೀವ್ರವಾಗಿ ಗಾಯಗೊಂಡಿರುವ ಮತ್ತೊಬ್ಬ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಡಲಾಜ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕ್ರೇನ್ ಸಹಾಯದಿಂದ ಅಪಘಾತಕ್ಕೀಡಾದ ವಾಹನವನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲಾಗಿದೆ. ಗರ್ಬಾ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕರ ಬಾಳಿನಲ್ಲಿ ನಡೆದ ಈ ಅನಾಹುತ ಸ್ಥಳೀಯವಾಗಿ ತೀವ್ರ ಶೋಕಮೂಡಿಸಿದೆ.

