ರಾಜ್ಯದಲ್ಲಿ ತಲೆದೋರಿರುವ ಮಳೆ ಕೊರತೆ ಹಾಗೂ ತೀವ್ರ ಬರ ಪರಿಸ್ಥಿತಿಯ ನಡುವೆ ಬಳ್ಳಾರಿಯ ಗ್ರಾಮೀಣ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ (ಗುಳೆ) ಹೋಗುವುದನ್ನು ತಡೆಗಟ್ಟಲು ಬಳ್ಳಾರಿ ಜಿಲ್ಲಾಡಳಿತವು ‘ವಿಬಿ-ಜಿ ರಾಮ್ ಜಿ’ (ವಿಕ್ಷಿತ್ ಭಾರತ್- ಗ್ಯಾರಂಟಿ ಫಾರ್ ರೋಜಗಾರ್ & ಅಜೀವಿಕ ಮಿಷನ್ ಗ್ರಾಮೀಣ್) ಯೋಜನೆಯನ್ನು ಸಮರೋಪಾದಿಯಲ್ಲಿ ಜಾರಿಗೊಳಿಸಿದೆ.
ಜಿಲ್ಲೆಯ ಬರಪೀಡಿತ ತಾಲೂಕುಗಳಲ್ಲಿ ಕೆಲಸ ಕೇಳಿದ ಪ್ರತಿಯೊಬ್ಬರಿಗೂ ಉದ್ಯೋಗ ಖಾತ್ರಿಪಡಿಸಲು ಪ್ರತಿನಿತ್ಯ ಕನಿಷ್ಠ 5 ಲಕ್ಷ ಜನರಿಗೆ ಕಾಮಗಾರಿ ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಎಲ್ಲ ಗ್ರಾಮ ಪಂಚಾಯತ್ ಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಬರ ನಿರ್ವಹಣೆಗಾಗಿ ದಾಖಲೆ ಮಟ್ಟದಲ್ಲಿ ಮಾನವ ದಿನಗಳನ್ನು ಸೃಜಿಸಲಾಗುತ್ತಿದ್ದು, ಈಗಾಗಲೇ ರಾಜ್ಯದಲ್ಲಿ 2 ಕೋಟಿಗೂ ಅಧಿಕ ಮಾನವ ದಿನಗಳು ಸೃಜನೆಯಾಗಿವೆ. ಅದೇ ರೀತಿ ಬಳ್ಳಾರಿಯ ಬರಪೀಡಿತ ತಾಲೂಕುಗಳಲ್ಲಿ ಗುಳೇ ಹೋಗುವುದನ್ನು ತಡೆಯಲು ಹೆಚ್ಚಿನ ಜನರಿಗೆ ಕೆಲಸವನ್ನ ಒದಗಿಸಲು ಗಮನಹರಿಸಲಾಗಿದೆ.
ಬರ ಪರಿಸ್ಥಿತಿಯಲ್ಲಿ ಅಂತರ್ಜಲ ಹೆಚ್ಚಿಸಲು ಹೂಳೆತ್ತುವುದು, ಕೆರೆಗಳ ಪುನಶ್ಚೇತನ, ಕೃಷಿ ಹೊಂಡ, ಚೆಕ್ ಡ್ಯಾಂ ಹಾಗೂ ಜಲ ಸಂರಕ್ಷಣೆ ಕಾಮಗಾರಿಗಳಿಗೆ ಆದ್ಯತೆ ನೀಡಿ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸಲಾಗಿದೆ. ಉರಿಬಿಸಿಲಿನಿಂದ ರಕ್ಷಣೆ ಪಡೆಯಲು ನೆರಳು, ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಮತ್ತು ಕೂಲಿ ಕಾರ್ಮಿಕರ ಸ್ಥಳದಲ್ಲೇ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಕಡ್ಡಾಯವಾಗಿ ನಡೆಸಲಾಗುತ್ತಿದೆ. ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳು ಕೆಲಸ ಕೇಳಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಕೆಲಸ ನೀಡಬೇಕು; ತಪ್ಪಿದರೆ ನಿಯಮಾನುಸಾರ ನಿರುದ್ಯೋಗ ಭತ್ಯೆ ಪಾವತಿಸುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ತಿಳಿಸಿದ್ದಾರೆ.
ಹೊಸ ನಿಯಮಾವಳಿಗಳ ಅನ್ವಯ ವಾರ್ಷಿಕ ಕೆಲಸದ ದಿನಗಳನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದ್ದು, ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಕುಟುಂಬಗಳಿಗೆ ಹೆಚ್ಚುವರಿ ಆದಾಯದ ಭದ್ರತೆ ಸಿಕ್ಕಿದೆ. ಮಹಿಳೆಯರು ಮತ್ತು ಪುರುಷರಿಗೆ ಸಮಾನ ಕೂಲಿ ನಿಗದಿಯಾಗಿದ್ದು, ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆಯ ಮೂಲಕ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುತ್ತಿದೆ.
ಮಾನವ ದಿನಗಳ ಸೃಜನೆಯಲ್ಲಿ ರಾಜ್ಯದಲ್ಲೇ 3ನೇ ಸ್ಥಾನ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿಜಿ ಜಿ ರಾಮ್ ಜಿ ಯೋಜನೆಯಡಿ ಜಿಲ್ಲಾವಾರು ದೈನಂದಿನ ಪ್ರಗತಿ ವರದಿ ಪ್ರಕಟವಾಗಿದ್ದು, ಬಳ್ಳಾರಿ ಜಿಲ್ಲೆಯು ಮಾನವ ದಿನಗಳ ಸೃಜನೆಯ ಶೇಕಡಾವಾರು ಸಾಧನೆಯಲ್ಲಿ ರಾಜ್ಯದಲ್ಲೇ ಮೂರನೇ ಸ್ಥಾನ ಪಡೆದುಕೊಂಡಿದೆ.
ಬಳ್ಳಾರಿ ಜಿಲ್ಲೆಗೆ 2026–27ನೇ ಸಾಲಿಗೆ ಒಟ್ಟು 51,31,133 ಮಾನವ ದಿನಗಳ ವಾರ್ಷಿಕ ಗುರಿ ನಿಗದಿಪಡಿಸಲಾಗಿದೆ. ಅಕ್ಟೋಬರ್ 15ರ ವೇಳೆಗೆ ಒಟ್ಟು 11,03,119 ಮಾನವ ದಿನಗಳನ್ನು ಯಶಸ್ವಿಯಾಗಿ ಸೃಜಿಸಲಾಗಿದ್ದು, ಒಟ್ಟು ಗುರಿಯಲ್ಲಿ ಶೇ. 21.5 ರಷ್ಟು ಪ್ರಗತಿ ದಾಖಲಾಗಿದೆ. ಹಿಂದಿನ ದಿನಕ್ಕೆ (10,92,098) ಹೋಲಿಸಿದರೆ ಕೇವಲ ಒಂದೇ ದಿನದಲ್ಲಿ 11,021 ಮಾನವ ದಿನಗಳ ಪ್ರಗತಿ ಕಂಡುಬಂದಿದೆ.
ಕಾಮಗಾರಿ ಹಾಗೂ ಕೂಲಿಕಾರರ ವಿವರ:
ಜಿಲ್ಲೆಯಲ್ಲಿ ಮಸ್ಟರ್ ರೋಲ್ ನೀಡಲಾದ ಒಟ್ಟು 213 ಕಾಮಗಾರಿಗಳು ಪ್ರಸ್ತುತ ಚಾಲ್ತಿಯಲ್ಲಿದ್ದು, ಮಸ್ಟರ್ ರೋಲ್ ಪ್ರಕಾರ 17,359 ಕೂಲಿಕಾರರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ ಮೂಲಕ ಅಕ್ಟೋಬರ್ 15ರಂದು 6,951 ಮಾನವ ದಿನಗಳ ಹಾಜರಾತಿ ದಾಖಲಾಗಿದೆ.
ಸಕಾಲಿಕ ವೇತನ ಪಾವತಿ:
ಕೂಲಿಕಾರರಿಗೆ ವೇತನ ಪಾವತಿಯಲ್ಲಿ ಜಿಲ್ಲೆ ಉತ್ತಮ ಸಾಧನೆ ತೋರಿದ್ದು, ಶೇ. 82.31ರಷ್ಟು ವೇತನವನ್ನು 1 ರಿಂದ 8 ದಿನಗಳ ಒಳಗಾಗಿ ಸೃಜಿಸಲಾಗಿದೆ. ಶೇ. 13.3ರಷ್ಟು ವೇತನ 9 ರಿಂದ 15 ದಿನಗಳವರೆಗೆ ಮತ್ತು ಕೇವಲ ಶೇ. 4.4ರಷ್ಟು ವೇತನ ಮಾತ್ರ 15 ದಿನಗಳಿಗಿಂತ ಹೆಚ್ಚು ವಿಳಂಬವಾಗಿದೆ.
ಉದ್ಯೋಗಾವಕಾಶ ಹಾಗೂ 125 ದಿನಗಳ ಗುರಿ:
ಜಿಲ್ಲೆಯಲ್ಲಿ ಒಟ್ಟು 52,862 ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದ್ದು, ಕಳೆದ ಒಂದು ದಿನದಲ್ಲೇ 217 ಹೊಸ ಕುಟುಂಬಗಳು ಯೋಜನೆಯಡಿ ಸೇರ್ಪಡೆಗೊಂಡಿವೆ. ಅಲ್ಲದೆ, 28 ಕುಟುಂಬಗಳು ಈಗಾಗಲೇ 125 ದಿನಗಳ ಕೆಲಸವನ್ನು ಪೂರ್ಣಗೊಳಿಸಿವೆ.
11 ಲಕ್ಷ ಮಾನವ ದಿನಗಳ ಸೃಜನೆ; ಸಂಡೂರು ಮುಂಚೂಣಿ:
ಬಳ್ಳಾರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 2026-27ನೇ ಸಾಲಿನ ವಿಬಿ ಜಿ ರಾಮ್ ಜಿ ಯೋಜನೆಯಡಿ ಅಕ್ಟೋಬರ್ 15 ರವರೆಗೆ ಒಟ್ಟು 11,03,119 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ಜಿಲ್ಲೆಯ ಐದು ತಾಲೂಕುಗಳ ಒಟ್ಟು 100 ಗ್ರಾಮ ಪಂಚಾಯಿತಿಗಳ ಪೈಕಿ ಸಂಡೂರು ತಾಲೂಕು ಸಾಧನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.
ವಾರ್ಷಿಕ ಗುರಿ ಮತ್ತು ಪ್ರಗತಿ:
ಜಿಲ್ಲೆಗೆ 2026-27ನೇ ಸಾಲಿನಲ್ಲಿ ನಿಗದಿಪಡಿಸಲಾದ ವಾರ್ಷಿಕ ಗುರಿ 51,31,133 ಮಾನವ ದಿನಗಳಾಗಿದ್ದು, ಪ್ರಸ್ತುತ 11,03,119 ಮಾನವ ದಿನಗಳ ಸೃಜನೆಯೊಂದಿಗೆ ಶೇ. 21.50 ರಷ್ಟು ಪ್ರಗತಿ ದಾಖಲಾಗಿದೆ. ಅಕ್ಟೋಬರ್ ಅಂತ್ಯದವರೆಗಿನ ಗುರಿ (ಶೇ. 44) 22,57,699 ಮಾನವ ದಿನಗಳಾಗಿದೆ.
ಉದ್ಯೋಗ ಪಡೆದ ಕುಟುಂಬಗಳು:
ಜಿಲ್ಲೆಯಾದ್ಯಂತ ಒಟ್ಟು 52,862 ಕುಟುಂಬಗಳಿಗೆ ಉದ್ಯೋಗ ಒದಗಿಸಲಾಗಿದೆ. ಇದರಲ್ಲಿ ಸಿರುಗುಪ್ಪ ತಾಲೂಕು ಗರಿಷ್ಠ 13,941 ಕುಟುಂಬಗಳಿಗೆ ಹಾಗೂ ಕುರುಗೋಡು ತಾಲೂಕು 6,863 ಕುಟುಂಬಗಳಿಗೆ ಕೆಲಸ ನೀಡಿವೆ. ಉದ್ಯೋಗ ಸೃಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಜಿಲ್ಲಾ ಮಟ್ಟದಲ್ಲಿ ಶೇ. 58.74 ರಷ್ಟಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಂಡೂರಿನಲ್ಲಿ ಗರಿಷ್ಠ ಶೇ. 65.32 ರಷ್ಟು ಮಹಿಳಾ ಕಾರ್ಮಿಕರು ಭಾಗವಹಿಸಿದ್ದಾರೆ.
125 ದಿನ ಪೂರೈಸಿದ ಕುಟುಂಬಗಳು:
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 28 ಕುಟುಂಬಗಳು 125 ದಿನಗಳ ಉದ್ಯೋಗವನ್ನು ಪೂರ್ಣಗೊಳಿಸಿವೆ (ಪರಿಶಿಷ್ಟ ಪಂಗಡದ 3 ಹಾಗೂ ಇತರೆ 25 ಕುಟುಂಬಗಳು). ಇದರಲ್ಲಿ 26 ಕುಟುಂಬಗಳು ಸಂಡೂರು ತಾಲೂಕಿನವರಾಗಿದ್ದರೆ, ಕುರುಗೋಡು ಹಾಗೂ ಸಿರುಗುಪ್ಪದಲ್ಲಿ ತಲಾ ಒಂದು ಕುಟುಂಬ ನೂರು ದಿನ ಪೂರೈಸಿವೆ.
ಕೃಷಿ ಕೆಲಸಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಸಣ್ಣ ಮತ್ತು ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು ಕುಟುಂಬ ಸಮೇತ ಪರಸ್ಥಳಗಳಿಗೆ ಗುಳೆ ಹೋಗುವುದು ತಪ್ಪಿದೆ. ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಎದುರಿಸುತ್ತಿದ್ದ ನೂರಾರು ಪದವೀಧರ ಯುವಕ-ಯುವತಿಯರೂ ಸ್ಥಳೀಯವಾಗಿ ಈ ಯೋಜನೆಯಡಿ ನೋಂದಾಯಿಸಿಕೊಂಡು ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಅಂತರ್ಜಲ ಮರುಪೂರಣ, ರಸ್ತೆ ಸಂಪರ್ಕ ಮತ್ತು ಕೃಷಿ ಪೂರಕ ಮೂಲಸೌಕರ್ಯಗಳು ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ತಿಳಿಸಿದ್ದಾರೆ.

