ಬೆಂಗಳೂರಿನ ಜನಪ್ರಿಯ ಮಳಿಗೆಯೊಂದರಲ್ಲಿ ನಡೆದ ಅಮಾನವೀಯ ಹಾಗೂ ಆಘಾತಕಾರಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಗರದ ಪ್ರತಿಷ್ಠಿತ ಮಾರಾಟ ಮಳಿಗೆಯೊಂದರಲ್ಲಿ ನಡೆದ ಈ ಕೃತ್ಯವು ಮಹಿಳೆಯರ ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಘಟನೆಯ ವಿವರಗಳ ಪ್ರಕಾರ, ಯುವತಿಯೊಬ್ಬರು ನಗರದ ಪ್ರತಿಷ್ಠಿತ ಮಾಲ್ನಲ್ಲಿರುವ ಜನಪ್ರಿಯ ಬಟ್ಟೆ ಮಳಿಗೆಗೆ ಭೇಟಿ ನೀಡಿದ್ದರು. ಅಲ್ಲಿ ಕೆಲವು ಬಟ್ಟೆಗಳನ್ನು ಧರಿಸಿ ಪರೀಕ್ಷಿಸಿದ ಬಳಿಕ, ಮನೆಯಲ್ಲಿ ತುರ್ತು ಕೆಲಸವಿದ್ದ ಕಾರಣ ಯಾವುದೇ ಖರೀದಿಯನ್ನು ಮಾಡದೆ ಹೊರಡಲು ಮುಂದಾಗಿದ್ದರು. ಆದರೆ ಅವರು ಮಳಿಗೆಯಿಂದ ಹೊರಬರುವಾಗ ಏಕಾಏಕಿ ಭದ್ರತಾ ಅಲಾರ್ಮ್ ಸದ್ದು ಮಾಡಿದೆ. ಮಳಿಗೆಯ ನಿಯಮಗಳ ಪ್ರಕಾರ ಇದೊಂದು ಸಾಮಾನ್ಯ ಭದ್ರತಾ ಪ್ರಕ್ರಿಯೆ ಎಂದು ಭಾವಿಸಿದ್ದ ಯುವತಿ, ಸಿಬ್ಬಂದಿಗೆ ಸಹಕರಿಸಲು ಮುಂದಾಗಿದ್ದರು.
ಆದರೆ ಸಿಬ್ಬಂದಿ ಆಯ್ದುಕೊಂಡ ವಿಧಾನವು ಅತ್ಯಂತ ಕಳವಳಕಾರಿಯಾಗಿತ್ತು. ಯುವತಿಯ ಉಡುಪಿನ ಒಳಗೆ ಮತ್ತೊಂದು ಉಡುಪು ಇರಬಹುದು ಎಂದು ಶಂಕಿಸಿದ ಸಿಬ್ಬಂದಿ, ತಪಾಸಣೆ ನಡೆಸುವ ಹೆಸರಿನಲ್ಲಿ ಮಿತಿಮೀರಿದ್ದಾರೆ. ಯುವತಿಯು ಮಹಿಳಾ ಸಿಬ್ಬಂದಿಯನ್ನು ನೇಮಿಸುವಂತೆ ವಿನಂತಿಸಿ, ತಮ್ಮ ಮೇಲಿನ ಉಡುಪಿನ ಅಂಚನ್ನು ಮುಟ್ಟಿ ಪರೀಕ್ಷಿಸಿಕೊಳ್ಳಲು ಮುಕ್ತವಾಗಿ ಅವಕಾಶ ಮಾಡಿಕೊಟ್ಟಿದ್ದರು. ಆದರೂ ಕೇಳದ ಸಿಬ್ಬಂದಿಯೊಬ್ಬರು ಅವರನ್ನು ನೇರವಾಗಿ ಟ್ರಯಲ್ ರೂಮ್ಗೆ ಕರೆದೊಯ್ದು ತಮ್ಮ ಶರ್ಟ್ ಕಳಚುವಂತೆ ಬಲವಂತಪಡಿಸಿದ್ದಾರೆ. ತಾವು ಧರಿಸಿರುವ ಬಟ್ಟೆಯನ್ನು ತೆಗೆಯಲು ಸಾಧ್ಯವಿಲ್ಲ ಎಂದು ಯುವತಿ ಹಲವು ಬಾರಿ ಸ್ಪಷ್ಟವಾಗಿ ನಿರಾಕರಿಸಿದರೂ, ಅಲ್ಲಿಂದ ಹೊರಹೋಗಲು ಬಿಡುವುದಿಲ್ಲ ಎಂದು ಸಿಬ್ಬಂದಿ ಬೆದರಿಕೆ ಹಾಕಿದ್ದಾರೆ.
ಮಳಿಗೆಯ ಸಿಬ್ಬಂದಿಯ ಒತ್ತಡ ಹಾಗೂ ಬೆದರಿಕೆಯಿಂದ ಅಸಹಾಯಕರಾದ ಯುವತಿ ಅಂತಿಮವಾಗಿ ಒತ್ತಡಕ್ಕೆ ಮಣಿದಿದ್ದಾರೆ. ಆದರೆ ಅಲ್ಲಿಗೆ ನಿಲ್ಲದ ಸಿಬ್ಬಂದಿ, ಪ್ಯಾಂಟ್ ಕೂಡ ಕಳಚುವಂತೆ ಪಟ್ಟು ಹಿಡಿದ್ದಾರೆ. ತಮ್ಮ ಒಳ ಉಡುಪನ್ನು ತೆಗೆಯುವಂತೆಯೂ ಒತ್ತಾಯಿಸಿ, ಬರಿಗೈಯಿಂದ ದೇಹವನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಯುವತಿ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ತೀವ್ರ ಅಳಲು ತೋಡಿಕೊಂಡಿದ್ದಾರೆ.
ತಪಾಸಣೆ ಮುಗಿದ ಬಳಿಕ ಯುವತಿಯ ಬಳಿ ಯಾವುದೇ ಕಳವು ಮಾಡಿದ ಬಟ್ಟೆಗಳು ಸಿಕ್ಕಿಲ್ಲ. ಕೊನೆಗೆ ಅಲಾರ್ಮ್ ಮೊಳಗಿದ್ದು ಕೇವಲ ತಾಂತ್ರಿಕ ದೋಷದಿಂದ ಎಂದು ಸಿಬ್ಬಂದಿ ಸಬೂಬು ಹೇಳಿ ಕಳುಹಿಸಿದ್ದಾರೆ. ಈ ಬಗ್ಗೆ ಮಳಿಗೆಯ ವ್ಯವಸ್ಥಾಪಕರನ್ನು ಪ್ರಶ್ನಿಸಿದಾಗ, ಸಿಬ್ಬಂದಿ ತಪ್ಪು ಮಾಡಿದ್ದಾರೆ ಎಂದು ಆರಂಭದಲ್ಲಿ ಒಪ್ಪಿಕೊಂಡರೂ, ನಂತರ ಅವರ ಪರವಾಗಿ ವಾದಿಸಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ, ಈ ವಿಷಯವನ್ನು ದೊಡ್ಡದು ಮಾಡಬೇಡಿ ಎಂದು ಧಮ್ಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ನೊಂದ ಯುವತಿ ಆರೋಪಿಸಿದ್ದಾರೆ.
ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಳಿಗೆಯ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ನೆಟ್ಟಿಗರು ಯುವತಿಗೆ ಸಲಹೆ ನೀಡುತ್ತಿದ್ದಾರೆ.

