ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಿಂದ ಬರೋಬ್ಬರಿ 1.3 ಲಕ್ಷ ಗ್ರಾಹಕರು ಹೊರ ನಡೆದಿದ್ದಾರೆ.
200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯಿಂದ ರಾಜ್ಯಾದ್ಯಂತ ಸುಮಾರು 1.3 ಲಕ್ಷ ಗ್ರಾಹಕರು ಸ್ವಯಂಪ್ರೇರಿತರಾಗಿ ಹೊರನಡೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಮೂರು ವರ್ಷಗಳಿಂದ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದರೂ, ಇತ್ತೀಚೆಗೆ ಇಂಧನ ಇಲಾಖೆ ನಡೆಸಿದ ಮನೆಮನೆ ಪರಿಶೀಲನಾ ಅಭಿಯಾನದಲ್ಲಿ ವೈಯಕ್ತಿಕ ದಾಖಲೆಗಳನ್ನು ನೀಡಲು ನಿರಾಕರಿಸಿ ಯೋಜನೆಯಿಂದ ಹೊರಗುಳಿಯಲು ಇಚ್ಛಿಸಿದ್ದಾರೆ.
ಈ ಪೈಕಿ ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯೊಂದರಲ್ಲೇ ಅತ್ಯಧಿಕ ಅಂದರೆ 1.2 ಲಕ್ಷ ಗ್ರಾಹಕರು ಯೋಜನೆ ಬೇಡವೆಂದು ತಿಳಿಸಿದ್ದಾರೆ. ಮನೆಮನೆಗೆ ಭೇಟಿ ನೀಡಿದ ಸಿಬ್ಬಂದಿಗೆ ಆಧಾರ, ಪಾನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ನೀಡಲು ಗ್ರಾಹಕರು ಹಿಂದೇಟು ಹಾಕಿದ್ದಾರೆ. ವಿಶೇಷವಾಗಿ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ನಿವಾಸಿಗಳು ತಮ್ಮ ವೈಯಕ್ತಿಕ ಮಾಹಿತಿ ಹಾಗೂ ದಾಖಲೆಗಳು ದುರುಪಯೋಗವಾಗಬಹುದು ಎಂಬ ಗೌಪ್ಯತೆಯ ಭೀತಿಯಿಂದ ದಾಖಲೆ ಹಂಚಿಕೊಳ್ಳಲು ಒಪ್ಪಿಲ್ಲ.
ರಾಜ್ಯದಲ್ಲಿ ಒಟ್ಟು 2.1 ಕೋಟಿ ಗೃಹ ಬಳಕೆಯ ವಿದ್ಯುತ್ ಗ್ರಾಹಕರಿದ್ದು, 1.8 ಕೋಟಿ ಗ್ರಾಹಕರು ಯೋಜನೆಯಡಿ ನೋಂದಾಯಿಸಿಕೊಂಡಿದ್ದರು. ಆದರೆ ಮನೆಮನೆ ಸಮೀಕ್ಷೆ ವೇಳೆ ಸುಮಾರು 25.7 ಲಕ್ಷ ಅರ್ಹ ಗ್ರಾಹಕರು ನಿಗದಿತ ಸಮಯದಲ್ಲಿ ಪರಿಶೀಲನೆಗೆ ಲಭ್ಯವಾಗಿಲ್ಲ ಅಥವಾ ದಾಖಲೆ ಸಲ್ಲಿಸಿಲ್ಲ. ಪರಿಶೀಲನೆಗೆ ತಪ್ಪಿಸಿಕೊಂಡ ಗ್ರಾಹಕರು ತಮ್ಮ ಹತ್ತಿರದ ಉಪವಿಭಾಗೀಯ ಕಚೇರಿಗೆ ಭೇಟಿ ನೀಡಿ ಅಕ್ಟೋಬರ್ 31ರೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅಧಿಕಾರಿಗಳು ಮತ್ತೊಂದು ಅವಕಾಶ ನೀಡಿದ್ದಾರೆ.
ದಾಖಲೆ ನೀಡಲು ನಿರಾಕರಿಸಿದ ಗ್ರಾಹಕರ ವಿವರಗಳನ್ನು ಕಲೆಹಾಕಲಾಗುತ್ತಿದ್ದು, ಇಂಧನ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗುವುದು. ಸರ್ಕಾರದ ಮುಂದಿನ ನಿರ್ದೇಶನದಂತೆ ಈ ಕುರಿತು ಕ್ರಮ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಸ್ಕಾಂ ವ್ಯಾಪ್ತಿಯಲ್ಲಿನ 69 ಲಕ್ಷ ಫಲಾನುಭವಿಗಳ ಪೈಕಿ 16 ಲಕ್ಷ ಮಂದಿಯ ವಿವರ ಹಾಗೂ ದಾಖಲೆಗಳು ಇನ್ನೂ ಲಭ್ಯವಾಗಿಲ್ಲ. ಮನೆಗೆ ಬೀಗ ಹಾಕಿರುವುದು ಅಥವಾ ಬಾಡಿಗೆದಾರರು ಸ್ಥಳಾಂತರಗೊಂಡಿರುವುದರಿಂದ ಮೂರ್ನಾಲ್ಕು ಬಾರಿ ಭೇಟಿ ನೀಡಿದರೂ ಸಿಬ್ಬಂದಿಗೆ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲ.
ದಾಖಲೆ ಸಲ್ಲಿಸದ ಗ್ರಾಹಕರು ಅಕ್ಟೋಬರ್ 31ರೊಳಗೆ ಹತ್ತಿರದ ಬೆಸ್ಕಾಂ ಉಪವಿಭಾಗೀಯ ಕಚೇರಿಗೆ ತೆರಳಿ ಅಗತ್ಯ ವಿವರ ನೀಡಲು ಕೊನೆಯ ಅವಕಾಶ ಕಲ್ಪಿಸಲಾಗಿದೆ. ಈ ಗಡುವಿನೊಳಗೆ ಮಾಹಿತಿ ನೀಡದವರನ್ನು ಪರಿಶೀಲನೆಯಿಂದ ಹೊರಗುಳಿದವರೆಂದು ಪರಿಗಣಿಸಿ, ಗೃಹಜ್ಯೋತಿ ಯೋಜನೆಯಿಂದ ಅವರನ್ನು ಶಾಶ್ವತವಾಗಿ ರದ್ದುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

