ಶಿವಮೊಗ್ಗ: ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಮನರಂಜನೆಯ ವ್ಯಕ್ತಿಯಾಗಿದ್ದಾರೆ ಹೊರತು ಗೃಹಖಾತೆಯನ್ನು ನಿಭಾಯಿಸುವ ಶಕ್ತಿ ಅವರಿಗಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಚಾರ, ಕೊಲೆ ಮುಂತಾದ ಹಲವು ವಿಕೃತಗಳು ನಡೆಯುತ್ತಿದ್ದರೂ ಕೂಡ ಅದನ್ನೆಲ್ಲಾ ಬಿಟ್ಟು ಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಆರ್‌ಎಸ್‌ಎಸ್ ಬಗ್ಗೆ ಮಾತನಾಡುವುದು, ಕೇಂದ್ರ ಸಚಿವರು ಎಂಬ ಕನಿಷ್ಟ ಗೌರವವನ್ನು ತೋರಿಸದೆ ಕುಮಾರಸ್ವಾಮಿ ಅವರ ವಿರುದ್ದ ಮಾತನಾಡುವುದು ಮಾಡುತ್ತಿದ್ದಾರೆ. ಅವರು ನಡೆದುಕೊಳ್ಳುವ ರೀತಿ ನೋಡಿದರೆ ಅವರಿಗೆ ಈ ಗೃಹಖಾತೆ ಸರಿ ಹೊಂದುವುದಿಲ್ಲ. ಯಾವುದಾರೂ ಮನರಂಜನೆಗೆ ಸಂಬಂಧಪಟ್ಟ ಇಲಾಖೆಯನ್ನು ತೆಗೆದುಕೊಳ್ಳಿ ಎಂದು ವಾಗ್ದಾಳಿ ನಡೆಸಿದ ಅವರು ಅಧಿಕಾರ ಶಾಶ್ವತ ಅಲ್ಲ ಎಂಬುದನ್ನು ಅವರು ಮೊದಲು ಅರಿತುಕೊಳ್ಳಲಿ ಎಂದರು.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪಗೆ ಜೀವ ಬೆದರಿಕೆ ಕರೆ: ಎಸ್ಪಿಗೆ ದೂರು
ಶಿವಮೊಗ್ಗ: ತಮಗೆ ಅಪರಿಚಿತ ವ್ಯಕ್ತಿಗಳಿಂದ ಜೀವ ಬೆದರಿಕೆ ಕರೆ ಬಂದಿದ್ದು, ಸೂಕ್ತ ಕ್ರಮ ಕೈಗೊಂಡು ರಕ್ಷಣೆ ನೀಡಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟçಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಅವರು ಇಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದರು.
ತಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ದಿ. 17-10-2026 ರಂದು ಇಬ್ಬರು ವ್ಯಕ್ತಿಗಳಿಂದ ಕರೆ ಬಂದಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಲಾಗಿದೆ. ರಿಜ್ವಾನ್ ಬೇಗ್ ಎಂಬಾತ ರಾತ್ರಿ 8:49 ಮತ್ತು 10:49ಕ್ಕೆ ಕರೆ ಮಾಡಿದ್ದಾನೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಂಡು ತಮಗೆ ಮತ್ತು ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಮೊದಲ ಕರೆಯಲ್ಲಿ ರಿಜ್ವಾನ್ ಬೇಗ್ ಎಂಬಾತ ಕರೆ ಮಾಡಿದಾಗ ನಾನು ಕುಟುಂಬದ ಜೊತೆಗೆ ಚಿತ್ರಮಂದಿರದಲ್ಲಿದ್ದೆ. ಆತ ನೀವು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಲ್ಲವೇ ಎಂದು ಪ್ರಶ್ನಿಸಿದ. ಆನಂತರ ಏನೇನೋ ಮಾತನಾಡಲು ಆರಂಭಿಸಿದ. ಆತನ ಮಾತು ಸ್ಪಷ್ಟವಾಗಿ ಕೇಳಿಸಲಿಲ್ಲ. ಆಗ ನಾನು ಸರಿಯಾಗಿ ಮಾತನಾಡುವುದಿದ್ದರೆ ಮಾತನಾಡು, ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡಬೇಕಾಗುತ್ತದೆ ಎಂದಾಗ, ದೂರು ಕೊಡಿ ಎಂದು ಹೇಳಿ ಕರೆ ಕಟ್ ಮಾಡಿದ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಈ.ಕಾಂತೇಶ್, ಮೋಹನ್ ಜಾಧವ್, ಲಕ್ಷ್ಮಿ ಶಂಕರ್ ನಾಯ್ಕ್, ಬಾಲು, ಶಂಕರ್ ನಾಯ್ಕ, ಅನಿತಾ, ಶಿವಾಜಿ, ವಿಜಯ್‌ಕುಮಾರ್, ಸಂತೋಷ್ ಮತ್ತಿತರರು ಇದ್ದರು.
ವಿಶೇಷ ಲೇಸರ್ ಶೋ ಪ್ರದರ್ಶನಕ್ಕೆ ಚಾಲನೆ
ಶಿವಮೊಗ್ಗ: ಮಲೆನಾಡಿನ ಸಾಂಸ್ಕೃತಿಕ ಹೆಗ್ಗುರುತಾದ ‘ಶಿವಮೊಗ್ಗ ನಾಡಹಬ್ಬ ದಸರಾ – 2026’ ಮಹೋತ್ಸವದ ಅಂಗವಾಗಿ, ಶಿವಮೊಗ್ಗ ನಗರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಗರದ ಇತಿಹಾಸವನ್ನು ಸಾರುವ ವಿಶೇಷ ಲೇಸರ್ ಶೋ ಪ್ರದರ್ಶನಕ್ಕೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಮಹಾನಗರ ಪಾಲಿಕೆ ಆವರಣದಲ್ಲಿ ನಿನ್ನೆ ಸಂಜೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಉದ್ಘಾಟನೆಯ ಬಳಿಕ ಮಾತನಾಡಿದ ಶಾಸಕರು, “ನಾಡಹಬ್ಬ ದಸರಾ ಮಹೋತ್ಸವಕ್ಕೆ ಆಧುನಿಕ ತಂತ್ರಜ್ಞಾನದ ಮೆರುಗು ನೀಡುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ಈ ವಿಶೇಷ ಲೇಸರ್ ಶೋ ಆಯೋಜಿಸಲಾಗಿದೆ. ನಮ್ಮ ಶಿವಮೊಗ್ಗದ ಐತಿಹಾಸಿಕ ಹಿನ್ನೆಲೆ, ಕೆಳದಿ ಸಂಸ್ಥಾನದ ಗತವೈಭವ ಹಾಗೂ ಮಲೆನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಪೀಳಿಗೆಗೆ ಆಕರ್ಷಕವಾಗಿ ಪರಿಚಯಿಸಲು ಇಂತಹ ಬೆಳಕು ಮತ್ತು ಧ್ವನಿಯ ಪ್ರದರ್ಶನಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಪ್ರಯೋಜನ ಪಡೆಯಬೇಕು,” ಎಂದು ತಿಳಿಸಿದರು.

