HomeKarnatakaಕಲಬುರಗಿಯಲ್ಲಿ ಶಂಕಿತ ಉಗ್ರ ಬಂಧನ ಪ್ರಕರಣ: ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ಪತ್ತೆ

ಕಲಬುರಗಿಯಲ್ಲಿ ಶಂಕಿತ ಉಗ್ರ ಬಂಧನ ಪ್ರಕರಣ: ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ಪತ್ತೆ

ಕಲಬುರಗಿ: ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಶಂಕಿತನೋರ್ವನನ್ನು ಬಂಧಿಸಲಾಗಿದ್ದು, ಆತನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿಗಳು ಪತ್ತೆಯಾಗಿವೆ.

ಬಂಧನಕ್ಕೊಳಗಾಗಿರುವ ಪಶ್ಚಿಮ ಬಂಗಾಳ ಮೂಲದ ಮಮ್ತಾಜ್ ಮಲಿಕ್ ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಮಮ್ತಾಜ್ ಮಲಿಕ್‌ನ ಮೊಬೈಲ್ ಪರಿಶೀಲನೆ ವೇಳೆ ಪಾಕಿಸ್ತಾನ ಮೂಲದ ವ್ಯಕ್ತಿಗಳು ಹಾಗೂ ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ವಾಟ್ಸ್‌ಆ್ಯಪ್ ಗ್ರೂಪ್‌ಗಳು ಮತ್ತು ಇನ್‌ಸ್ಟಾಗ್ರಾಂ ಖಾತೆಗಳ ಸಂಪರ್ಕದ ಮಾಹಿತಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಂಬಂಧ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ದಾಖಲಿಸಿರುವ ದೂರಿನ ಪ್ರಕಾರ, ಮಮ್ತಾಜ್ ಮಲಿಕ್ ಉರ್ದು ಭಾಷೆಯ ‘ಇಮಾಮ್ ಮೇಂದಿ’ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ನ ಸದಸ್ಯನಾಗಿದ್ದ. ಪಾಕಿಸ್ತಾನದ ಜೈನುಲ್ ಅಬ್ದಿನ್ ಎಂಬ ವ್ಯಕ್ತಿ ತನ್ನನ್ನು ಈ ಗ್ರೂಪ್‌ಗೆ ಸೇರಿಸಿದ್ದಾಗಿ ಮಮ್ತಾಜ್ ಹೇಳಿದ್ದಾನೆ. ಈ ವ್ಯಕ್ತಿ ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ ಆರೋಪವೂ ಇದೆ.

ಅದಲ್ಲದೆ, ‘Kashmiri Tiger 313’, ‘I Love Pakistan I Love Kashmir’ ಹಾಗೂ ‘major_iqbal_isi’ ಸೇರಿದಂತೆ ಪಾಕಿಸ್ತಾನಕ್ಕೆ ಸಂಬಂಧಿಸಿದ ಇನ್‌ಸ್ಟಾಗ್ರಾಂ ಖಾತೆಗಳನ್ನು ಮಮ್ತಾಜ್ ಫಾಲೋ ಮಾಡುತ್ತಿದ್ದ ಎಂಬ ಆರೋಪವಿದೆ. ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ರೀಲ್ಸ್‌ಗಳಿಗೆ ಲೈಕ್ ಮಾಡಿರುವ ಮಾಹಿತಿಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಮಮ್ತಾಜ್ ಮಲಿಕ್‌ನ ಮೊಬೈಲ್‌ನಲ್ಲಿದ್ದ ಕೆಲವು ಫೋಟೋಗಳು ಮತ್ತು ವಿಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಡಿಜಿಟಲ್ ಸಾಕ್ಷ್ಯಗಳ ಸ್ವರೂಪ ಹಾಗೂ ಅವುಗಳಿಗೂ ಶಂಕಿತನಿಗೂ ಇರುವ ಸಂಬಂಧದ ಬಗ್ಗೆ ತನಿಖೆ ಮುಂದುವರಿದಿದೆ.

ಇನ್ನು ಚೌಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುಶೀಲ್ ಕುಮಾರ್ ನೀಡಿದ ದೂರಿನ ಮೇರೆಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಮಮ್ತಾಜ್ ಮಲಿಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 113(3) ಮತ್ತು 197(1) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯೊಂದಿಗೆ ನಂಟು: ಕಲಬುರಗಿಯಲ್ಲಿ ಮತ್ತೋರ್ವ ಶಂಕಿತ ಅರೆಸ್ಟ್

ಕಲಬುರಗಿ: ಲಷ್ಕರ್-ಎ-ತೈಬಾ ಉಗ್ರ ಸಂಘನೆಗಳೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಕಲಬುರಗಿಯಲ್ಲಿ ಓರ್ವ ಶಂಕಿತನನ್ನು ಕೇಂದ್ರ ಗುಪ್ತಚರ ಇಲಾಖೆ ಮತ್ತು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಸರಾಫ್ ಬಜಾರ್‌ನಲ್ಲಿ ಚಿನ್ನಾಭರಣ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮಮ್ತಾಜ್‌ವುಲ್‌ ಮಲೀಕ್ ಬಂಧಿತ ಆರೋಪಿ. ಈತ ಲಷ್ಕರ್-ಎ-ತೈಬಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಸಹೋದರನೊಂದಿಗೆ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಮ್ತಾಜ್‌ವುಲ್‌ ಮಲೀಕ್, ಸಾಮಾಜಿಕ ಜಾಲತಾಣಗಳ ಮೂಲಕ ಲಷ್ಕರ್ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ. ಹಲವು ಮಹತ್ವದ ವಿಷಯಗಳನ್ನು ಮೆಸೇಜ್ ಮೂಲಕ ಹಂಚಿಕೊಂಡಿದ್ದ ಎಂಬ ಮಾಹಿತಿ ಲಭಿಸಿದೆ. ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕೆಲ ದಿನಗಳ ಹಿಂದೆ ಕಸಾಯಿಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಯುವಕನನ್ನು ಬಂಧಿಸಲಾಗಿತ್ತು. ಈ ನಡುವೆಯೇ ಕಲಬುರಗಿಯಲ್ಲಿ ಇದೀಗ ಮತ್ತೊಬ್ಬ ಶಂಕಿತ ವ್ಯಕ್ತಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ.

ಕೆಲ ದಿನಗಲ ಹಿಂದೆ ಪಾಕಿಸ್ತಾನ ಮೂಲದ ಘೋಷಿತ ಉಗ್ರ ಶಹಜಾದ್ ಭಟ್ಟಿ ಆ್ಯಂಡ್​ ಇತರರೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಹಿನ್ನೆಲೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಯಣಕೂರ ಗ್ರಾಮದ ವಿಶಾಲ್ ಮೇತ್ರೆ ಎಂಬಾತನನ್ನು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಎನ್​ಐಎ ಅ1ರಂದು ಬಂಧಿಸಿತ್ತು. ಆ ಬಳಿಕ ವಿಶಾಲ್​ ಮೇತ್ರೆ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿ ಪಾಕಿಸ್ತಾನ ಮೂಲದ ಉಗ್ರರ ಜಾಲದ ಜೊತೆ ನಂಟಿದೆ. ವಾಟ್ಸ್​​ಆ್ಯಪ್​​​, ಇನ್​​ಸ್ಟಾಗ್ರಾಮ್​​​​ ಮೂಲಕ ಪಾಕ್ ಮೂಲದ ಶಹಜಾದ್ ಭಟ್ಟಿ ರಾಣಾ ಹುನೇನ್ ಜೊತೆ ವಿಶಾಲ್​ ಮೇತ್ರೆ ಸಂಪರ್ಕ ಹೊಂದಿದ್ದ. ಅಕ್ರಮಶಸ್ತ್ರಾಸ್ತ್ರ ಖರೀದಿ,ಸಾಗಣೆ ಕುರಿತು ಚರ್ಚಿಸಿದ್ದ ಎಂಬ ಬಗ್ಗೆ ಎಫ್​​ಐಆರ್​​ನಲ್ಲಿ ಉಲ್ಲೇಖಿಸಲಾಗಿತ್ತು.

ಕಳೆದ ಜೂನ್ ನಲ್ಲಿ 20 ವರ್ಷದ ಸುಹೇಲ್ ಎಂಬಾತನನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗ್ರಾಮವೊಂದರಲ್ಲಿ ಬಂಧಿಸಲಾಗಿತ್ತು. ಈತ ಉತ್ತರ ಪ್ರದೇಶದ ಮೂಲದವನಾಗಿದ್ದು, ಪೇಂಟರ್ ಸೋಗಿನಲ್ಲಿ ತಲೆಮರೆಸಿಕೊಂಡಿದ್ದ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಮತ್ತು ವಿದೇಶಿ ಹ್ಯಾಂಡ್ಲರ್‌ಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಆನ್‌ಲೈನ್ ಉಗ್ರಗಾಮಿ ಪ್ರೇರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಎನ್ಐಎ ಖಚಿತ ಮಾಹಿತಿ ಮೇರೆಗೆ ಈತನನ್ನು ಬಂಧಿಸಲಾಗಿತ್ತು. ಇದೀಗ ಕಲಬುರಗಿಯಲ್ಲಿ ಇನ್ನೋರ್ವ ಶಂಕಿತನನ್ನು ಬಂಧಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular