ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಮಕ್ಕಳ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ, ಬಾಲಕಾರ್ಮಿಕರು ಹಾಗೂ ಭಿಕ್ಷಾಟನೆಯಲ್ಲಿ ತೊಡಗಿದ್ದ 20 ಮಕ್ಕಳನ್ನು ರಕ್ಷಿಸಿರುವ ಘಟನೆ ನಡೆದಿದೆ.
ಈ ಬಾರಿಯ ದಸರಾವನ್ನು ಮಕ್ಕಳ ಸ್ನೇಹಿಯಾಗಿ ರೂಪಿಸುವ ಉದ್ದೇಶದಿಂದ ನಡೆಸಲಾಗಿದ್ದ ಈ ವಿಶೇಶ ಕಾರ್ಯಾಚರಣೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೇಶದ ಇತರ ಭಾಗಗಳಿಂದ ಬಂದಿದ್ದ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ರಕ್ಷಿಸಲಾದ ಮಕ್ಕಳಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದವರು, ರಸ್ತೆಗಳಲ್ಲಿ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರು ಹಾಗೂ ಭಿಕ್ಷಾಟನೆಯಲ್ಲಿ ತೊಡಗಿದ್ದವರು ಸೇರಿದ್ದಾರೆ.
ದಸರಾ ನೋಡಲು ಬಂದಿದ್ದ ಹಾವೇರಿ ಜಿಲ್ಲೆಯ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ತನ್ನ ಸಹೋದರನೊಂದಿಗೆ ಬಂದು ಶೇಂಗಾ ಮಾರಾಟ ಮಾಡುತ್ತಿದ್ದಾಗ ಆತನನ್ನು ರಕ್ಷಿಸಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಮಹದೇವ ಕೋಟೆ ತಿಳಿಸಿದ್ದಾರೆ.
ಉತ್ತರ ಕರ್ನಾಟಕ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಿಂದ ಬಂದಿರುವ ಮಕ್ಕಳು ಇಂತಹ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ, ಅಧಿಕಾರಿಗಳ ಕ್ರಮಕ್ಕೆ ಹೆದರಿ ಹಾವೇರಿಯ ಬೀದಿ ವ್ಯಾಪಾರಿಯೊಬ್ಬರ ಕುಟುಂಬವು ತಮ್ಮ ಮೂವರು ಹೆಣ್ಣುಮಕ್ಕಳನ್ನು ದಸರಾ ಮುಗಿಯುವವರೆಗೆ ಬಾಲಕಿಯರ ಬಾಲಮಂದಿರದ ವಶಕ್ಕೆ ಒಪ್ಪಿಸಿದೆ ಎಂದು ತಿಳಿದುಬಂದಿದೆ.
ದಸರಾ ಸಂದರ್ಭದಲ್ಲಿ ರಸ್ತೆಬದಿಗಳಲ್ಲಿ ವಾಸಿಸುತ್ತಿರುವ ಯುವ ವಲಸೆ ಮಹಿಳೆಯರ ಸಂಕಷ್ಟದ ಬಗ್ಗೆಯೂ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ದಸರಾ ಅಧಿಕಾರಿಗಳು ಈ ಮಹಿಳೆಯರ ಪರಿಸ್ಥಿತಿಯತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಲವಾರು ಯುವ ಮಹಿಳಾ ವ್ಯಾಪಾರಿಗಳು ರಾತ್ರಿ ವೇಳೆ ಸುರಕ್ಷತೆಯಿಲ್ಲದ ಟೆಂಟ್ಗಳು ಮತ್ತು ಕಟ್ಟಡಗಳಲ್ಲಿ ವಾಸಿಸುತ್ತಿರುವುದು ಕಂಡುಬರುತ್ತಿದೆ. ದಸರಾ ಆಚರಣೆಗೆ ಸರ್ಕಾರ ದೊಡ್ಡ ಮೊತ್ತದ ಹಣ ಖರ್ಚು ಮಾಡುತ್ತಿದೆ. ಈ ಮಹಿಳೆಯರ ಸುರಕ್ಷತೆ ಹಾಗೂ ಸ್ಥಿತಿಯನ್ನೂ ಗಮನಿಸಿ ಅವರಿಗೆ ತಾತ್ಕಾಲಿಕ ಆಶ್ರಯ ಒದಗಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.
ದಸರಾ ಹಬ್ಬಕ್ಕೆ ರಜೆ ಕೇಳಿದ್ದಕ್ಕೆ ವಿದ್ಯಾರ್ಥಿಗಳನ್ನು ಕ್ಲಾಸ್ ರೂಮ್ ನಲ್ಲಿ ಕೂಡಿ ಹಾಕಿ ಹಿಂಸೆ: ಟಿ.ಸಿ ಕೊಟ್ಟು ಬೆದರಿಕೆ ಹಾಕಿದ ಕಾಲೇಜು ಆಡಳಿತ ಮಂಡಳಿ
ಬೆಂಗಳೂರು: ನಾಡಿನಾದ್ಯಂತ ದಸರಾ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಸರಾ ಹಬ್ಬಕ್ಕೆ ರಜೆ ಕೇಳಿದ್ದಕ್ಕೆ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಕೂಡಿ ಹಾಕಿ ಚಿತ್ರ ಹಿಂಸೆ ಕೊಟ್ಟು ಬೌನ್ಸರ್ಗಳಿಂದ ಬೆದರಿಕೆ ಹಾಕಿಸಿ, ಕಾಲೇಜು ಅಡಳಿತ ಮಂಡಳಿ ಟಿ.ಸಿ. ನೀಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಕೋಗಿಲು ರಸ್ತೆಯಲ್ಲಿರುವ ಪ್ರೆಸಿಡೆನ್ಸಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಪಿಯು ಕಾಲೇಜು ಮುಖ್ಯಸ್ಥ ಸಲ್ಮಾನ್ ವಿರುದ್ಧ ವಿದ್ಯಾರ್ಥಿಗಳ ಪೋಷಕರು ನೀಡಿದ ದೂರಿನ ಮೇರೆಗೆ ಬೆದರಿಕೆ ಹಾಗೂ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 13ರಂದು ದಸರಾ ರಜೆ ನೀಡುವಂತೆ 15ರಿಂದ 20 ವಿದ್ಯಾರ್ಥಿಗಳ ಒಗ್ಗೂಡಿ ಪ್ರಾಂಶುಪಾಲರಿಗೆ ಒತ್ತಾಯಿಸಿದ್ದರು. ರಜೆ ನೀಡಲು ಆಡಳಿತ ಮಂಡಳಿ ನಿರಾಕರಿಸಿತ್ತು. ಅಕ್ಟೋಬರ್ 14 ರಂದು ಕಾಲೇಜಿಗೆ ಬಂದ ವಿದ್ಯಾರ್ಥಿಗಳನ್ನು ಕಂಪ್ಯೂಟರ್ ಕ್ಲಾಸ್ ರೂಮ್ನಲ್ಲಿ ಕೂಡಿ ಹಾಕಲಾಗಿತ್ತು. ಐ.ಡಿ. ಕಾರ್ಡ್ಗಳನ್ನು ಕಸಿದುಕೊಂಡು ಬೆಳಗ್ಗೆಯಿಂದ ಸಂಜೆವರೆಗೆ ತರಗತಿಯಲ್ಲಿ ಬಲವಂತವಾಗಿ ಇರಿಸಲಾಗಿತ್ತು. ಕಾಲೇಜಿಗೆ ಬೌನ್ಸರ್ಗಳನ್ನು ಕರೆಯಿಸಿಕೊಂಡು ಬೆದರಿಕೆ ಹಾಕಿಸಲಾಗಿತ್ತು.
ಅಲ್ಲದೇ ಕಾಲೇಜಿಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದರು. ಅಲ್ಲದೆ ತರಗತಿಯಲ್ಲಿ ಸಂಜೆವರೆಗೂ ನಿಲ್ ಡೌನ್ ನಲ್ಲಿ ಕೂರಿಸಿಕೊಂಡಿದ್ದರು.
ಸಂಜೆವರೆಗೂ ತಿನ್ನಲೂ ಊಟ ಹಾಗೂ ಕುಡಿಯಲು ನೀರು ಕೊಡದೇ ವಿದ್ಯಾರ್ಥಿಗಳನ್ನು ಸತಾಯಿಸಿದ್ದರು. ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ. ದಸರಾ ರಜೆ ಕೇಳುವುದಿಲ್ಲ ಎಂದು ಹೇಳಿದರೂ ವಿದ್ಯಾರ್ಥಿಗಳನ್ನು ಬಿಟ್ಟು ಕಳುಹಿಸಿಲ್ಲ. ಅಂತಿಮವಾಗಿ ಸಂಜೆವರೆಗೂ ಕೂಡಿ ಹಾಕಿ ಕೊನೆಗೆ ಬಿಟ್ಟು ಕಳುಹಿಸಿದ್ದಾರೆ.
ಬಳಿಕ ಕಾಲೇಜು ಆಡಳಿತ ಮಂಡಳಿಯು ಇ-ಮೇಲ್ ಮುಖಾಂತರ ಟಿ.ಸಿ. ನೀಡಿದ್ದಾರೆ ಎಂದು ದೂರಿನಲ್ಲಿ ವಿದ್ಯಾರ್ಥಿಗಳ ಪೋಷಕರು ತಿಳಿಸಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಲೇಜು ಆಡಳಿತ ಮಂಡಳಿ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.

