ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ‘ರಣಬಲಿ’ ಚಿತ್ರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಎರಡನೇ ದಿನವೂ ಉತ್ತಮ ಕಲೆಕ್ಷನ್ ಕಾಯ್ದುಕೊಂಡಿದೆ. ಮೊದಲ ದಿನಕ್ಕೆ ಹೋಲಿಸಿದರೆ ಶನಿವಾರ ಭಾರತೀಯ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಶೇಕಡಾ 21.1 ರಷ್ಟು ಇಳಿಕೆ ಕಂಡುಬಂದಿದೆಯಾದರೂ, ಜಾಗತಿಕ ಮಟ್ಟದಲ್ಲಿ ಚಿತ್ರ ಭರ್ಜರಿ ಗಳಿಕೆ ದಾಖಲಿಸಿದೆ.
ಆನ್ಲೈನ್ ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ಸಂಸ್ಥೆ ಸ್ಯಾಕ್ನಿಲ್ಕ್ (Sacnilk) ವರದಿಯ ಪ್ರಕಾರ, ಶನಿವಾರ ಭಾರತದಲ್ಲೆಲ್ಲ ಸೇರಿ ‘ರಣಬಲಿ’ ಚಿತ್ರ 7.30 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಮೊದಲ ದಿನ ಶುಕ್ರವಾರ 9.25 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ, ಕೇವಲ ಎರಡೇ ದಿನಗಳಲ್ಲಿ ಭಾರತದಲ್ಲಿ ಒಟ್ಟು 16.55 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಕಲೆಹಾಕಿದೆ.
ವಿಶ್ವಾದ್ಯಂತ ₹26.65 ಕೋಟಿ ಕಲೆಕ್ಷನ್:
ದೇಶೀಯ ಮಾರುಕಟ್ಟೆಯಲ್ಲಿ ಭಾರತದ ಒಟ್ಟು ಗ್ರೋಸ್ ಗಳಿಕೆ 19.25 ಕೋಟಿ ರೂಪಾಯಿಗೆ ತಲುಪಿದ್ದರೆ, ವಿದೇಶಿ ಮಾರುಕಟ್ಟೆಯಿಂದ (Overseas) 7.40 ಕೋಟಿ ರೂಪಾಯಿ ಹರಿದುಬಂದಿದೆ. ಇದರೊಂದಿಗೆ ಎರಡನೇ ದಿನದ ಅಂತ್ಯಕ್ಕೆ ವಿಶ್ವಾದ್ಯಂತ ಚಿತ್ರದ ಒಟ್ಟು ಗ್ರೋಸ್ ಗಳಿಕೆ 26.65 ಕೋಟಿ ರೂಪಾಯಿ ತಲುಪಿದೆ. ಶನಿವಾರ ಒಂದೇ ದಿನ ವಿದೇಶಗಳಿಂದ 2 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಗಮನಿಸುವುದಾದರೆ, ಶನಿವಾರ ಶೇಕಡಾ 53 ರಷ್ಟು ಆಕ್ಯುಪೆನ್ಸಿ ವರದಿಯಾಗಿದೆ. ತೆಲುಗು 2D ಆವೃತ್ತಿಯಲ್ಲಿ ನೈಟ್ ಶೋಗಳಿಗೆ ಅತಿ ಹೆಚ್ಚು ಅಂದರೆ ಶೇಕಡಾ 65.77 ರಷ್ಟು ಆಕ್ಯುಪೆನ್ಸಿ ಕಂಡುಬಂದಿದೆ.
ಏನಿದು ರಣಬಲಿ ಕಥೆ?
ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಚಿತ್ರವು 1876-1878ರ ಮದ್ರಾಸ್ ಕ್ಷಾಮದ ಹಿನ್ನೆಲೆಯಲ್ಲಿ ರಾಯಲಸೀಮಾ ಪ್ರದೇಶದಲ್ಲಿ ನಡೆದ ಕಥೆಯನ್ನು ಹೊಂದಿದೆ. ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಸ್ಥಳೀಯರನ್ನು ಸಂಘಟಿಸಿ ಹೋರಾಡುವ ಕುದುರೆ ಸವಾರನ ಪಾತ್ರದಲ್ಲಿ ವಿಜಯ್ ದೇವರಕೊಂಡ ಮಿಂಚಿದ್ದರೆ, ಜಯಮ್ಮ ಎಂಬ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಅಜಯ್-ಅತುಲ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

