ಚೆನ್ನೈ: ಹಿರಿಯ ಸಂಗೀತ ನಿರ್ದೇಶಕ ದೇವಾ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
80-90 ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜನಪ್ರಿಯ ಸಂಗೀತ ನಿರ್ದೇಶಕಾಗಿ ಗುರುತಿಸಿಕೊಂಡಿದ್ದ ದೇವಾ ಹಲವಾರು ಅದ್ಭುತ ಗೀತೆಗಳನ್ನು ನೀಡಿದ್ದರು. ದೇವಾ ಅವರ ಪೂರ್ಣ ಹೆಸರು ದೇವನೇಶನ್ ಚೊಕ್ಕಲಿಂಗಂ. ದೇವಾ ಅವರ ಅಗಲಿಗೆ ದಕ್ಷಿಣ ಭಾರತದ ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಖುಗಿಸಿದೆ.
ದೇವಾ ಅವರ ಆರೋಗ್ಯದಲ್ಲಿ ಹಠಾತ್ ಏರುಪೇರು ಉಂಟಾಗಿತ್ತು. ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ ಸುಮಾರು 8.30ರ ವೇಳೆಗೆ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿ ಗುರುತಿಸಿಕೊಂಡಿದ್ದ ಅವರು ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರಗಳಿಗೆ ಹಾಡುಗಳು ಹಾಗೂ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 400ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ ಹೆಗ್ಗಳಿಕೆ ಅವರದು. ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಅವರ ಸಂಗೀತಕ್ಕೆ ದೊಡ್ಡ ಅಭಿಮಾನಿ ಬಳಗವಿತ್ತು. ಜನಪದ ಸಂಗೀತದ ಸೊಗಡನ್ನು ಜನಪ್ರಿಯ ಚಿತ್ರಗೀತೆಗಳೊಂದಿಗೆ ಬೆರೆಸುವ ಮೂಲಕ ಅವರು ವಿಶಿಷ್ಟ ಗುರುತು ಮೂಡಿಸಿದ್ದರು.
ದೇವಾ ಅವರು ಕನ್ನಡದಲ್ಲಿ ಅಮೃತ ವರ್ಷಿಣಿ, ರಾಜಾ, ಕೋಟಿಗೊಬ್ಬ, ನಾನು ನಾನೆ, ನಟ, ಸೈನಿಕ, ಸಿಂಹಾದ್ರಿಯ ಸಿಂಹ, ವಿಜಯದಶಮಿ, ರಾಜಾ ನರಸಿಂಹ, ಕದಂಬ, ವಿಷ್ಣು ಸೇನಾ, ಆಕಾಶ ಗಂಗೆ, ಬೊಂಬಾಟ್ ಕಾರ್, ಓಲವೇ ಮಂದಾರ, ಸೂಪರ್ ಶಾಸ್ತ್ರಿ ಮತ್ತು ಭೀಷ್ಮ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು.

