ನವದೆಹಲಿ- ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಾಗೂ ಸಕ್ಕರೆ ವಲಯದ ವಿವಿಧ ಬೇಡಿಕೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ನೀತಿ ಆಯೋಗದ ಮಾಜಿ ಸದಸ್ಯ ಹಾಗೂ ಖ್ಯಾತ ಕೃಷಿ ಅರ್ಥಶಾಸ್ತ್ರಜ್ಞ ಪ್ರೊ. ರಮೇಶ್ ಚಂದ್ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ಕಬ್ಬು ಬೆಳೆಗಾರರ ಪ್ರತಿನಿಧಿಗಳು ಹಾಗೂ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರು, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರ ನಡುವೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಹಿನ್ನೆಲೆಯಲ್ಲಿ ಈ ಸಮಿತಿ ರಚಿಸಲಾಗಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ಕಬ್ಬು ಬೆಳೆಗಾರರ ಪ್ರತಿನಿಧಿಗಳು ಹಾಗೂ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರು, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರ ನಡುವೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಹಿನ್ನೆಲೆಯಲ್ಲಿ ಈ ಸಮಿತಿ ರಚಿಸಲಾಗಿದೆ.
ಕಬ್ಬು ಬೆಳೆಗಾರರ ಆದಾಯ ಮತ್ತು ಬೆಲೆ ಪರಿಶೀಲನೆ
ಕಬ್ಬು ಬೆಳೆಗಾರರಿಗೆ ಕೃಷಿ ವೆಚ್ಚಕ್ಕೆ ಅನುಗುಣವಾಗಿ ಲಾಭದಾಯಕ ಆದಾಯ ದೊರೆಯಬೇಕು ಎಂಬ ಬೇಡಿಕೆಯನ್ನು ಸಮಿತಿ ಪ್ರಮುಖವಾಗಿ ಪರಿಶೀಲಿಸಲಿದೆ. ಕೃಷಿ ಉತ್ಪಾದನಾ ವೆಚ್ಚ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ, ರೈತರಿಗೆ ದೊರೆಯಬೇಕಾದ ನ್ಯಾಯಯುತ ಬೆಲೆಯ ಕುರಿತು ಶಿಫಾರಸುಗಳನ್ನು ರೂಪಿಸಲಿದೆ.
ಇದರ ಜತೆಗೆ ಸಕ್ಕರೆ ಉತ್ಪಾದನಾ ವೆಚ್ಚ, ಮಾರುಕಟ್ಟೆಯಿಂದ ದೊರೆಯುವ ಆದಾಯ ಮತ್ತು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ, ಸಕ್ಕರೆಯ ‘ಎಕ್ಸ್-ಮಿಲ್’ ಕನಿಷ್ಠ ಮಾರಾಟ ಬೆಲೆಯನ್ನು (MSP) ಪರಿಷ್ಕರಿಸುವ ಬೇಡಿಕೆಯನ್ನೂ ಸಮಿತಿ ಪರಿಶೀಲಿಸಲಿದೆ. ಈ ಬೆಲೆ ಪರಿಷ್ಕರಣೆಯು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಕಾರ್ಯಸಾಧ್ಯತೆ ಹಾಗೂ ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿಸುವ ಸಾಮರ್ಥ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನೂ
ಗಮನಿಸಲಿದೆ.
ಸಕ್ಕರೆ ಕಾರ್ಖಾನೆಗಳ ತೀಕ್ಷ್ಣ ಪರಿಶೀಲನೆ
ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕ ಮಾಡುವ ಪ್ರಕ್ರಿಯೆಯಲ್ಲಿನ ಪಾರದರ್ಶಕತೆ ಮತ್ತೊಂದು ಪ್ರಮುಖ ಪರಿಶೀಲನಾ ವಿಷಯವಾಗಿದೆ. ತೂಕದ ಯಂತ್ರಗಳ ಸರಿಯಾದ ಹೊಂದಾಣಿಕೆ, ಕ್ಯಾಲಿಬ್ರೇಷನ್, ನಿಯಮಿತ ತಪಾಸಣೆ ಮತ್ತು ಪರಿಶೀಲನಾ ವ್ಯವಸ್ಥೆಗಳ ಸಮರ್ಪಕತೆಯನ್ನು ಸಮಿತಿ ಅವಲೋಕಿಸಲಿದೆ.
ಅಲ್ಲದೆ, ಕಬ್ಬಿನಿಂದ ಸಕ್ಕರೆ ಉತ್ಪಾದನೆಯಾಗುವ ಪ್ರಮಾಣವನ್ನು ಸೂಚಿಸುವ ಸಕ್ಕರೆ ಇಳುವರಿ (ರಿಕವರಿ) ಲೆಕ್ಕಾಚಾರ ಮತ್ತು ವರದಿ ಮಾಡುವ ಪ್ರಸ್ತುತ ವಿಧಾನಗಳನ್ನೂ ಪರಿಶೀಲಿಸಲಾಗುತ್ತದೆ. ಇಳುವರಿ ನಿರ್ಧಾರದಲ್ಲಿ ರೈತರಿಗೆ ಅನುಮಾನ ಮೂಡದಂತೆ ಪಾರದರ್ಶಕ ವ್ಯವಸ್ಥೆ ರೂಪಿಸುವ ಕುರಿತು ಶಿಫಾರಸುಗಳನ್ನು ನೀಡುವ ನಿರೀಕ್ಷೆಯಿದೆ.
ಯಾಂತ್ರೀಕೃತ ವಿಧಾನದಲ್ಲಿ ಕಟಾವು ಮಾಡಿದ ಕಬ್ಬಿನ ತೂಕದಲ್ಲಿ ಕಡಿತ ಮಾಡುವ ಪ್ರಸ್ತುತ ಪದ್ಧತಿಗಳ ಬಗ್ಗೆಯೂ ಸಮಿತಿ ಪರಿಶೀಲನೆ ನಡೆಸಲಿದೆ. ಯಂತ್ರಗಳ ಮೂಲಕ ಕಟಾವು ಮಾಡುವಾಗ ವಾಸ್ತವವಾಗಿ ಎಷ್ಟು ನಷ್ಟ ಉಂಟಾಗುತ್ತದೆ, ನಷ್ಟವಿದ್ದಲ್ಲಿ ಅದರ ಪ್ರಮಾಣ ಎಷ್ಟಿದೆ ಮತ್ತು ಅದಕ್ಕೆ ಅನುಗುಣವಾಗಿ ತೂಕದಲ್ಲಿ ಕಡಿತ ಮಾಡುವುದು ನ್ಯಾಯಸಮ್ಮತವೇ ಎಂಬುದನ್ನು ಮೌಲ್ಯಮಾಪನ ಮಾಡಲಿದೆ.
ಈ ಪದ್ಧತಿಗಳಿಂದ ರೈತರಿಗೆ ಪಾವತಿಯಾಗುವ ಕಬ್ಬಿನ ಬೆಲೆಯಲ್ಲಿ ಎಷ್ಟು ಆರ್ಥಿಕ ನಷ್ಟ ಉಂಟಾಗುತ್ತದೆ ಎಂಬುದನ್ನೂ ಪರಿಶೀಲಿಸಲಾಗುತ್ತದೆ. ಇದರಿಂದ ರೈತರಿಗೆ ಅನಗತ್ಯವಾಗಿ ಬೆಲೆ ಕಡಿತವಾಗುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ರೂಪಿಸುವ ಸಾಧ್ಯತೆಯಿದೆ.
ಸಮಾಲೋಚನೆ ಮತ್ತು ವರದಿ
ಸಮಿತಿಯು ಕಬ್ಬು ಬೆಳೆಗಾರರ ಸಂಘಟನೆಗಳು, ಸಕ್ಕರೆ ಕಾರ್ಖಾನೆಗಳ ಸಂಘಗಳು, ರಾಜ್ಯ ಸರ್ಕಾರಗಳು ಹಾಗೂ ಕೃಷಿ ಮತ್ತು ಸಕ್ಕರೆ ವಲಯದ ತಜ್ಞರೊಂದಿಗೆ ಸಮಾಲೋಚನೆ ನಡೆಸಲಿದೆ. ಪರಿಶೀಲನೆಯ ನಂತರ ತನ್ನ ಸಂಶೋಧನೆಗಳು ಮತ್ತು ನಿರ್ದಿಷ್ಟ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಆದಷ್ಟು ಶೀಘ್ರವಾಗಿ ಸಂಬಂಧಪಟ್ಟ ಸಮರ್ಥ ಪ್ರಾಧಿಕಾರಕ್ಕೆ ಸಲ್ಲಿಸಲಿದೆ.
ಸಮಿತಿಯ ಅಧ್ಯಕ್ಷ ಪ್ರೊ. ರಮೇಶ್ ಚಂದ್ ಅವರು ಕೃಷಿ ಅರ್ಥಶಾಸ್ತ್ರ ಮತ್ತು ಸಾರ್ವಜನಿಕ ನೀತಿ ಕ್ಷೇತ್ರದಲ್ಲಿ ಅನುಭವ ಹೊಂದಿರುವ ತಜ್ಞರಾಗಿದ್ದಾರೆ. ಅವರು 2015ರಿಂದ 2026ರವರೆಗೆ ನೀತಿ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಇದಕ್ಕೂ ಮುನ್ನ ICAR-NEAP ಸಂಸ್ಥೆಯ ನಿರ್ದೇಶಕರಾಗಿ ಹಾಗೂ ಹದಿನೈದನೇ ಹಣಕಾಸು ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಕೃಷಿ ಅಭಿವೃದ್ಧಿ, ರೈತರ ಸಮಸ್ಯೆಗಳು, ಆಹಾರ ಭದ್ರತೆ, ಕೃಷಿ ಮಾರುಕಟ್ಟೆಗಳು ಮತ್ತು ಬೆಲೆ ನೀತಿಯ ಕುರಿತ ಅವರ ಪರಿಣತಿಯನ್ನು ಗಮನದಲ್ಲಿಟ್ಟುಕೊಂಡು ಸಮಿತಿಯ ನೇತೃತ್ವ ವಹಿಸಲಾಗಿದೆ.
ಕೃಷಿ ಆಯುಕ್ತರು, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸಕ್ಕರೆ ವಿಭಾಗದ ಜಂಟಿ ಕಾರ್ಯದರ್ಶಿ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾನೂನು ಮಾಪನಶಾಸ್ತ್ರ ವಿಭಾಗದ ಜಂಟಿ ಕಾರ್ಯದರ್ಶಿಗಳು ಸಮಿತಿಯ ಸದಸ್ಯರಾಗಿದ್ದಾರೆ.

