ಬೆಳಗಾವಿ: ರಾಜ್ಯದಲ್ಲಿ ಅಕ್ರಮ ಮಧ್ಯ ಸಾಗಾಟ ಹಾಗೂ ಮಾರಾಟ ಪ್ರಕರಣ ಅವ್ಯಾಹತವಾಗಿ ನಡೆಯುತ್ತಿವೆ. ಅಕ್ರಮವಾಗಿ 24 ಸಾವಿರ ಲೀಟರ್ ಮದ್ಯ ಸಾಗಿಸುತ್ತಿದ್ದ ಭಾರಿ ಗಾತ್ರದ ಟ್ಯಾಂಕರ್ ಅನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿರುವ ಘಟನೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿ ಪಟ್ಟಣದ ಸಮೀಪ ಮಧ್ಯರಾತ್ರಿ ಈ ಕಾರ್ಯಾಚರಣೆ ನಡೆದಿದ್ದು, ಜಪ್ತಿ ಮಾಡಲಾದ ಟ್ಯಾಂಕರ್ ಮತ್ತು ಮದ್ಯದ ಒಟ್ಟು ಮೌಲ್ಯ ₹32.40 ಲಕ್ಷ ಎಂದು ಅಂದಾಜಿಸಲಾಗಿದೆ.
ಅಬಕಾರಿ ಇಲಾಖೆ ಅಧಿಕಾರಿಗಳ ಪ್ರಕಾರ, ಹೊಳಿಹೊಸೂರು ಗ್ರಾಮದಿಂದ ಎಂ.ಕೆ. ಹುಬ್ಬಳ್ಳಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ಸುಮಾರು 12.25ರ ವೇಳೆಗೆ ಗಸ್ತು ತಿರುಗುತ್ತಿದ್ದಾಗ ಈ ಕಾರ್ಯಾಚರಣೆ ನಡೆದಿದೆ. ಈ ವೇಳೆ KA-25-AA-3750 ನೋಂದಣಿ ಸಂಖ್ಯೆಯ ಭಾರತ್‌ಬೆನ್ಜ್ ಟ್ಯಾಂಕರ್ ಅನ್ನು ತಡೆದು ಪರಿಶೀಲಿಸಿದಾಗ, ಅದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 24 ಸಾವಿರ ಲೀಟರ್ ಮದ್ಯ ಪತ್ತೆಯಾಗಿದೆ.
ಬಂಡೆನವಾಜ್ ನಬಿ ಸಾಬ್ ಎಂಬ ಚಾಅಲಕನ್ನು ವಶಕ್ಕೆ ಪಡೆಯಲಾಗಿದೆ. ಈತ ವಿಜಯಪುರ ಜಿಲ್ಲೆಯ ಬೋಳಚಿಕ್ಕಲಕಿ ಗ್ರಾಮದ ನಿವಾಸಿ. ತನಿಖೆ ಮುಂದುವರೆದಿದ್ದು, ವಾಹನದ ಮಾಲೀಕನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಥಮ ಮಾಹಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ದಕ್ಷಿಣ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಮಾಅರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡೇಟಿಂಗ್ ಆಪ್ ಮೂಲಕ ಆರಂಭವಾದ ಪರಿಚಯದಿಂದ ಬ್ಲ್ಯಾಕ್ ಮೇಲ್: ಡಿಜಿಟಲ್ ಸುಂದರಿ ಹಿಂದೆ ಬಿದ್ದು ಲಕ್ಷ ಲಕ್ಷ ಕಳೆದುಕೊಂಡ ಯುವಕ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಆಪ್ ಹೆಸರಲ್ಲಿ ಎಐ ಮೂಲಕ ಯುವತಿಯರನ್ನು ಬಿಂಬಿಸಿ ವಂಚಿಸುತ್ತಿರುವ ಬೃಹತ್ ಜಾಲ ಸಕ್ರಿಯವಾಗಿದ್ದು, ಇಂತಹ ಡಿಜಿಟಲ್ ಸುಂದರಿಯರ ಹಿಂದೆ ಬಿದ್ದು ಯುವಕರು ಲಕ್ಷ ಲಕ್ಷ ಹಣ ಕಳೆದುಕೊಂಡು ಪೇಚಿಗೆ ಸಿಲುಕುತ್ತಿದಾರೆ.
ಇಂತದ್ದೇ ಡೇಟಿಂಗ್ ಆ್ಯಪ್ ಮೂಲಕ AI ವೀಡಿಯೊ ಬ್ಲ್ಯಾಕ್‌ಮೇಲ್ ವಂಚನೆ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಯುವಕರನ್ನು ಗುರಿಯಾಗಿಸಿಕೊಂಡು, ನಕಲಿ ವೀಡಿಯೊ ಸೃಷ್ಟಿಸಿ ಹಣ ಸುಲಿಗೆ ಮಾಡುವ ಗ್ಯಾಂಗ್ ಬಲೆಗೆ ಬಿದ್ದ ಬೆಳ್ಳಂದೂರಿನ ಯುವಕ 1.85 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಅಪರಿಚಿತ ವೀಡಿಯೊ ಕರೆಗಳಿಗೆ ಉತ್ತರಿಸದಂತೆ, ಆನ್‌ಲೈನ್ ವಂಚನೆಗಳಿಂದ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಜನರು ಪದೇ ಪದೇ ಮೋಸ ಹೋಗುತ್ತಲೇ ಇರುತ್ತಾರೆ.
23 ವರ್ಷದ ಬೆಳ್ಳಂದೂರಿನ ಯುವಕನೊಬ್ಬ ಸೆಪ್ಟೆಂಬರ್ 27 ರಂದು ಜನಪ್ರಿಯ ಡೇಟಿಂಗ್ ಆ್ಯಪ್ ಮೂಲಕ ಆರಾಧ್ಯ ಹೆಸರಿನ ಯುವತಿಯೊಬ್ಬಳ ಸಂಪರ್ಕಕ್ಕೆ ಬಂದಿದ್ದ. ನಂತರ ಇಬ್ಬರೂ ತಮ್ಮ ಮೊಬೈಲ್ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡಿದ್ದರು. ನಂಬರ್ ವಿನಿಮಯವಾದ ಕೆಲವೇ ಕ್ಷಣಗಳಲ್ಲಿ ಆಕೆಯ ನಂಬರ್‌ನಿಂದ ವಾಟ್ಸಾಪ್ ವೀಡಿಯೋ ಕಾಲ್ ಬಂದಿದ್ದು, ಅದು ಕೇವಲ 5 ರಿಂದ 6 ಸೆಕೆಂಡುಗಳಷ್ಟೇ ಇತ್ತು ಎಂದು ಯುವಕ ಪೊಲೀಸರಿಗೆ ತಿಳಿಸಿದ್ದಾನೆ. ಕಾಲ್ ಕಟ್ ಆದ ಕೆಲವೇ ಕ್ಷಣಗಳಲ್ಲಿ ವಂಚಕರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿ ಮಾರ್ಫ್ ಮಾಡಲಾದ ಯುವಕನ ಅಶ್ಲೀಲ ವೀಡಿಯೋವನ್ನು ಆತನಿಗೆ ಕಳುಹಿಸಿದ್ದಾರೆ.
ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ ವಂಚಕರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಭಯಗೊಂಡ ಯುವಕ ಸ್ನೇಹಿತರಿಂದ ಸಾಲ ಮಾಡಿ ಸೆಪ್ಟೆಂಬರ್ 27 ರಿಂದ 29 ರ ನಡುವೆ ವಿವಿಧ ಯುಪಿಐ ಐಡಿಗಳಿಗೆ ಹಂತ ಹಂತವಾಗಿ ಒಟ್ಟು 1.85 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾನೆ. ನಂತರ ಮೋಸಹೋಗಿರುವುದನ್ನು ಅರಿತ ಯುವಕ ಸೈಬರ್ ಕ್ರೈಮ್‌ಗೆ ಆನ್‌ಲೈನ್ ಮೂಲಕ ದೂರು ನೀಡಿದ್ದಾನೆ.
ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಸೆಕ್ಷನ್ 66C, 66D ಹಾಗೂ ಬಿಎನ್‌ಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪೊಲೀಸರು ಇಂತಹ ಸೈಬರ್ ಅಪರಾಧಗಳ ಬಗ್ಗೆ, ವಂಚನೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರೂ ಜನರು ಮತ್ತೆ ಮತ್ತೆ ಇಂತಹ ಆನ್ ಲೈನ್ ವಂಚನೆ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡು ಪೇಚಿಗೆ ಸಿಲುಕುತ್ತಾರೆ.
ಬೆಂಗಳೂರಿನಲ್ಲಿ ಸೈಬರ್ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 2026 (ಆಗಸ್ಟ್ ವರೆಗೆ) ಈಗಾಗಲೇ 57 ಪ್ರಕರಣಗಳು ವರದಿಯಾಗಿವೆ. ಆನ್‌ಲೈನ್ ಡೇಟಿಂಗ್ ಅನ್ನು ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ವಾಟ್ಸಾಪ್ ಅಥವಾ ಇತರೆ ಆಪ್‌ಗಳಲ್ಲಿ ಬರುವ ಅರಿವಿಲ್ಲದ ವೀಡಿಯೋ ಕಾಲ್‌ಗಳನ್ನು ಸ್ವೀಕರಿಸುವಾಗ ನಾಗರಿಕರು ಅತ್ಯಂತ ಎಚ್ಚರಿಕೆ ವಹಿಸಬೇಕು.

