ಡಾನ್ ಕಾಸ್ಟರ್(ಇಂಗ್ಲೆಂಡ್): ಉತ್ತರ ಇಂಗ್ಲೆಂಡ್ ನ ವನ್ಯಜೀವಿ ಉದ್ಯಾನವನವೊಂದರಲ್ಲಿ ಹುಲಿಗಳ ಆವರಣಕ್ಕೆ ಪ್ರವೇಶಿಸಿದ ವ್ಯಕ್ತಿಯೊಬ್ಬರು ಹುಲಿಯ ದಾಳಿಗೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಡಾನ್ ಕಾಸ್ಟರ್ ನಗರದ ಸಮೀಪದಲ್ಲಿರುವ ಯಾರ್ಕ್ ಷೈರ್ ವೈಲ್ಡ್‌ಲೈಫ್ ಪಾರ್ಕ್‌ನಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಘಟನೆಗೆ ಸಂಬಂಧಿಸಿದಂತೆ ಸೌತ್ ಯಾರ್ಕ್‌ಷೈರ್ ಪೊಲೀಸರು ತನಿಖೆ ಕೈಗೊಂಡಿದ್ದು, ವ್ಯಕ್ತಿ ಹುಲಿಗಳ ಆವರಣದೊಳಗೆ ಹೇಗೆ ಪ್ರವೇಶಿಸಿದರು ಎಂಬುದನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಶನಿವಾರ ಮಧ್ಯಾಹ್ನ ಸುಮಾರು 1.35ರ ವೇಳೆಗೆ ಯಾರ್ಕ್ ಷೈರ್ ವೈಲ್ಡ್‌ಲೈಫ್ ಪಾರ್ಕ್ ನಲ್ಲಿರುವ ಹುಲಿಗಳ ಆವರಣಕ್ಕೆ ವ್ಯಕ್ತಿಯೊಬ್ಬರು ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ತಕ್ಷಣವೇ ಪೊಲೀಸರು ಹಾಗೂ ತುರ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಆದರೆ, ಅಷ್ಟರಲ್ಲಾಗಲೇ ವ್ಯಕ್ತಿ ಹುಲಿಯ ದಾಳಿಗೆ ಸಿಲುಕಿದ್ದರು. ಘಟನೆಯಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ವ್ಯಕ್ತಿಯ ಗುರುತು ಹಾಗೂ ಅವರು ಆವರಣದೊಳಗೆ ಪ್ರವೇಶಿಸಿದ ನಿಖರ ಸಂದರ್ಭಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಈ ಘಟನೆಯ ಬಳಿಕ ಉದ್ಯಾನವನದ ಸುರಕ್ಷತಾ ಕ್ರಮಗಳ ಕುರಿತು ಹಲವು ಪ್ರಶ್ನೆಗಳು ಮೂಡಿವೆ. ಆದರೆ, ವ್ಯಕ್ತಿ ಆವರಣದೊಳಗೆ ಪ್ರವೇಶಿಸಿದ್ದು ಹೇಗೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಘಟನೆಯ ಸಮಯದಲ್ಲಿ ಹುಲಿಗೆ ಯಾವುದೇ ಗಾಯವಾಗಿಲ್ಲ. ಅದು ತನ್ನ ಆವರಣದೊಳಗೇ ಇತ್ತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸಾರ್ವಜನಿಕರಿಗೆ ಮತ್ತಷ್ಟು ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಉದ್ಯಾನವನದಲ್ಲಿದ್ದ ಸಂದರ್ಶಕರನ್ನು ಹೊರಗೆ ಕಳುಹಿಸಲಾಯಿತು. ಶನಿವಾರ ರಾತ್ರಿ ಕೂಡ ಪೊಲೀಸರು ಸ್ಥಳದಲ್ಲಿದ್ದು, ಘಟನೆಯ ಕುರಿತು ಪರಿಶೀಲನೆ ನಡೆಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಟ
ಘಟನೆಗೆ ಸ್ವಲ್ಪ ಮುನ್ನ ವ್ಯಕ್ತಿ ಹುಲಿಗಳ ಆವರಣದೊಳಗೆ ಇರುವುದನ್ನು ತೋರಿಸುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ, ಆತಂಕಕಾರಿ ವಿಡಿಯೋವನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಮೃತ ವ್ಯಕ್ತಿಯ ಕುಟುಂಬಕ್ಕೆ ಘಟನೆಯ ಕುರಿತು ಮಾಹಿತಿ ನೀಡಲಾಗಿದ್ದು, ಅವರಿಗೆ ವಿ ಅಧಿಕಾರಿಗಳ ಮೂಲಕ ಅಗತ್ಯ ಬೆಂಬಲ ಒದಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಕುಟುಂಬದ ದುಃಖದಲ್ಲಿ ಭಾಗಿಯಾಗಿರುವುದಾಗಿ ತಿಳಿಸಿರುವ ಪೊಲೀಸರು, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಉದ್ಯಾನವನ ತಾತ್ಕಾಲಿಕವಾಗಿ ಬಂದ್
ಹುಲಿಗಳ ಆವರಣಕ್ಕೆ ಸಂಬಂಧಿಸಿದ ಗಂಭೀರ ಘಟನೆಯ ಹಿನ್ನೆಲೆಯಲ್ಲಿ ಯಾರ್ಕ್‌ಷೈರ್ ವೈಲ್ಡ್‌ಲೈಫ್ ಪಾರ್ಕ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಘಟನೆಗೆ ನಿಖರ ಕಾರಣವೇನು, ವ್ಯಕ್ತಿ ಆವರಣದೊಳಗೆ ಪ್ರವೇಶಿಸಲು ಸಾಧ್ಯವಾಗಿದ್ದು ಹೇಗೆ ಹಾಗೂ ಸುರಕ್ಷತಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಿತ್ತೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಉದ್ಯಾನವನದ ಆಡಳಿತ ಮಂಡಳಿ ಹೇಳಿದೆ.
ಸಂದರ್ಶಕರು, ಸಿಬ್ಬಂದಿ ಹಾಗೂ ಪ್ರಾಣಿಗಳ ಸುರಕ್ಷತೆ ಮತ್ತು ಕ್ಷೇಮವೇ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಅಳಿವಿನಂಚಿನಲ್ಲಿರುವ ಹುಲಿಗಳಿಗಾಗಿ ವಿಶೇಷ ಆವರಣ
ಯಾರ್ಕ್ ಷೈರ್ ವೈಲ್ಡ್‌ಲೈಫ್ ಪಾರ್ಕ್ 2009ರಲ್ಲಿ ಕಾರ್ಯಾರಂಭ ಮಾಡಿತ್ತು. ಇಲ್ಲಿ ಅಳಿವಿನಂಚಿನಲ್ಲಿರುವ ಅಮೂರ್ ಹುಲಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ವಿಶೇಷ ಆವರಣವನ್ನು ನಿರ್ಮಿಸಲಾಗಿದೆ. ಅಮೂರ್ ಹುಲಿಗಳನ್ನು ಸೈಬೀರಿಯನ್ ಹುಲಿಗಳು ಎಂದೂ ಕರೆಯಲಾಗುತ್ತದೆ.
2011ರಲ್ಲಿ ಆರಂಭಿಸಲಾದ ‘ಲ್ಯಾಂಡ್ ಆಫ್ ದಿ ಟೈಗರ್ಸ್’ ಎಂಬ ಆಕರ್ಷಣೆಯು ಹುಲಿಗಳ ವಾಸಸ್ಥಳವನ್ನು ಹೋಲುವ ಅರಣ್ಯ ಮತ್ತು ಹುಲ್ಲುಗಾವಲು ಪ್ರದೇಶಗಳನ್ನು ಒಳಗೊಂಡಿದೆ. ಉದ್ಯಾನವನದ ಮಾಹಿತಿಯ ಪ್ರಕಾರ, ಇಲ್ಲಿ ಸುಮಾರು 300 ಮೀಟರ್ ಉದ್ದದ ಎತ್ತರದ ನಡಿಗೆ ಮಾರ್ಗವನ್ನು ನಿರ್ಮಿಸಲಾಗಿದ್ದು, ಅದರ ಮೂಲಕ ಸಂದರ್ಶಕರು ಹುಲಿಗಳ ಚಲನವಲನಗಳನ್ನು ವೀಕ್ಷಿಸಬಹುದು. ಹುಲಿಗಳು ಅರಣ್ಯ ಪ್ರದೇಶದಲ್ಲಿ ಸಂಚರಿಸುವುದು ಹಾಗೂ ಜಲಪಾತದ ಕೊಳದಲ್ಲಿ ಆಟವಾಡುವುದನ್ನು ವೀಕ್ಷಿಸಲು ಈ ವ್ಯವಸ್ಥೆ ಕಲ್ಪಿಸಲಾಗಿದೆ.
ಸುರಕ್ಷತಾ ಕ್ರಮಗಳ ಕುರಿತು ಚರ್ಚೆ
ವನ್ಯಜೀವಿ ಉದ್ಯಾನವನಗಳಲ್ಲಿ ಅಪಾಯಕಾರಿ ಪ್ರಾಣಿಗಳ ಆವರಣಕ್ಕೆ ಸಾರ್ವಜನಿಕರು ಪ್ರವೇಶಿಸುವುದನ್ನು ತಡೆಯಲು ಕೈಗೊಳ್ಳಲಾಗಿರುವ ಭದ್ರತಾ ಕ್ರಮಗಳ ಮಹತ್ವವನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಆದಾಗ್ಯೂ, ಈ ಪ್ರಕರಣದಲ್ಲಿ ವ್ಯಕ್ತಿ ಆವರಣದೊಳಗೆ ಪ್ರವೇಶಿಸಿದ ನಿಖರ ವಿಧಾನ ಮತ್ತು ಘಟನೆಯ ಸಂಪೂರ್ಣ ಹಿನ್ನೆಲೆ ತನಿಖೆಯ ಬಳಿಕವೇ ಸ್ಪಷ್ಟವಾಗಬೇಕಿದೆ. ಸದ್ಯ ಪೊಲೀಸರು ಪ್ರಕರಣದ ಕುರಿತು ಪರಿಶೀಲನೆ ಮುಂದುವರಿಸಿದ್ದಾರೆ.

