ಹಾಸನ: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಕೆಪಿಎಸ್ ಸಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಡಿಸಿ ಲತಾಕುಮಾರಿ ವಾಟ್ಸಪ್ ಸ್ಟೇಟಸ್ ವೊಂದನ್ನು ಹಾಕಿಕೊಂಡಿದ್ದು, ಈ ಮೂಲಕ ಟಾಂಗ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಅವರು ತಮ್ಮ ವಾಟ್ಸಪ್ ಸ್ಟೇಟಸ್ನಲ್ಲಿ ರಾಷ್ಟ್ರ ಲಾಂಛನ, ಧ್ಯೇಯವಾಕ್ಯ ʻಸತ್ಯಮೇವ ಜಯತೇʼ ಜೊತೆಗೆ ಎರಡು ಸಾಲುಗಳನ್ನ ಹಾಕಿಕೊಳ್ಳುವ ಮೂಲಕ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರೇ ಎಂಬ ಚರ್ಚೆ ಆರಂಭವಾಗಿದೆ.
ನೀವು ನನ್ನ ಮೇಲೆ ಸುಳ್ಳಿನ ದಾಳಿ ಮಾಡಬಹುದು ಆದರೆ ನೀವು ನನ್ನನ್ನು ಸುಳ್ಳಿನಿಂದ ಕುಗ್ಗಿಸಲು (ದುರ್ಬಲಗೊಳಿಸಲು) ಸಾಧ್ಯವಿಲ್ಲ. ಸುಳ್ಳು ದಾಳಿ ಮಾಡಿದ್ರೆ ಸತ್ಯ ರಕ್ಷಣೆ ಮಾಡುತ್ತೆ ಎಂದು ಲತಾಕುಮಾರಿ ತಮ್ಮ ವೈಯುಕ್ತಿಕ ನಂಬರ್ನ ವಾಟ್ಸಪ್ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ಕುಮಾರಸ್ವಾಮಿ ಆರೋಪದ ಬೆನ್ನಲ್ಲೇ ಡಿಸಿ ಅವರ ಈ ವಾಟ್ಸಪ್ ಸ್ಟೇಟಸ್ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.
ಶನಿವಾರವಷ್ಟೇ ಹೆಚ್.ಡಿ.ಕುಮಾರಸ್ವಾಮಿ, ಹಾಸನ ಜಿಲ್ಲಾಧಿಕಾರಿ ಹುದ್ದೆಯಲಿರುವ ಮಹಿಳೆ ಕೆಪಿಎಸ್ಸಿಯಲ್ಲಿ ಏನೇನು ಮಾಡಿದ್ದಾರೆ ಎಂಬುದು ದಾಖಲೆ ಸಮೇತ ಸಾಬೀತಾಗಿದೆ. ಆದರೂ ಅಲ್ಲಿ ಅಕ್ರಮ ಎಸಗಿದ ಇವರನ್ನು ಇಲ್ಲಿ ಜಿಲ್ಲಾಧಿಕಾರಿ ಸ್ಥಾನದಲ್ಲಿ ಕೂರಿಸಿದ್ದಾರೆ. ಅವತ್ತೇ ಅವರನ್ನು ರಜೆಯ ಮೇಲೆ ಕಳಿಸಿ ಸಸ್ಪೆಂಡ್ ಮಾಡಬೇಕಾಗಿತ್ತು ಎಂದು ಕಿಡಿಕಾರಿದ್ದರು.
ಇದೇ ವೇಳೆ ಹಾಸನದಲ್ಲಿ ಗಣೇಶ ವಿಸರ್ಜನೆ ವಿಚಾರವಾಗಿ ಡಿಸಿ, ಎಸ್ ಪಿಗೆ ಪತ್ರ ಬರೆದ ವಿಚಾರವನ್ನೂ ಪ್ರಸ್ತಾಪಿಸಿ ಗುಡುಗಿದ್ದರು. ಗಣಪತಿ ವಿಸರ್ಜನೆ ಹಲವಾರು ವರ್ಷಗಳಿಂದ ಯಾವ ರೀತಿ ನಡೆದುಕೊಂಡು ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಬೀಗ ಹಾಕಿ ಗಣಪತಿ ವಿಸರ್ಜನೆ ಮಾಡಬಾರದು ಎಂದರೆ ಹೇಗೆ? ಎಷ್ಟು ವರ್ಷಗಳಿಂದ ಇದೆಲ್ಲಾ ನಡೆದುಕೊಂಡು ಬಂದಿದೆ, ಜಿಲ್ಲಾ ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿಗೆ ಇವರು ನೋಟಿಸ್ ಕೊಡುತ್ತಾರೆ ಎಂದರೆ ಏನರ್ಥ? ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಆದವರು ಒಟ್ಟಿಗೆ ಕರೆದುಕೊಂಡು ಹೋಗಬೇಕು. ಅದು ಬಿಟ್ಟು ಉದ್ಧಟತನ ತೋರಿಸಿದರೆ ಹೇಗೆ? ಎಂದು ಅವರು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಐಎಎಸ್ ಪಾಸ್ ಮಾಡಿದ್ದರೆ, ಎಸ್ ಪಿ ಐಪಿಎಸ್ ಪಾಸ್ ಮಾಡಿ ಬಂದಿರುತ್ತಾರೆ. ಇವರ ಹಾಗೆಯೇ ಅವರೂ ಪರೀಕ್ಷೆ ಬರೆದು ಪಾಸಾಗಿ ಬಂದಿರುತ್ತಾರೆ. ಪರಸ್ಪರ ಹೊಂದಾಣಿಕೆ ಇಲ್ಲದಿದ್ದರೆ ಹೇಗೆ ಕೆಲಸ ಮಾಡಲು ಆಗುತ್ತದೆ? ಇಂತಹ ವರ್ತನೆ ಸರಿಯಲ್ಲ ಎಂದು ಹೇಳಿದ್ದರು.

