ಬೆಳಗಾವಿ: ಬೆಳಗಾವಿ ಕುಂದಾನಗರ ಬೆಳಗಾಅವಿಯಲ್ಲಿ ಪ್ರಭಾವಿ ರಾಜಕಾರಣಿಗಳ ಒಡೆತನದ ಪ್ರತಿಷ್ಠಿತ ಕ್ಲಬ್ ಮತ್ತು ಹೋಟೆಲ್ಗಳ ಮೇಲೆ ಬೆಳಗಾವಿ ಕಮಿಷನರ್ ಪ್ರಕಾಶ್ ನಿಕ್ಕಂ ನೇತೃತ್ವದಲ್ಲಿ ದಿಢೀರ್ ದಾಳಿ ನಡೆದಿದೆ.
40ಕ್ಕೂ ಹೆಚ್ಚು ಕಡೆ ಪೊಲೀಸರು ದಾಳಿ ನಡೆಸಿದ್ದು, ನಿಯಮ ಗಾಳಿಗೆ ತೂರಿ ಕ್ಲಬ್ ನಡೆಸುತ್ತಿರುವುದು ಬೆಳಕಿಗೆ ಬಂದ ಕಾರಣ ಕ್ಲಬ್ ಮತ್ತು ಪಬ್ಗಳ ಬಾಗಿಲನ್ನು ಮುಚ್ಚಿಸಿದ್ದಾರೆ. ದಾಳಿ ವೇಳೆ ಕೆಲವು ಕಡೆಗಳಲ್ಲಿ ಅಪ್ರಾಪ್ತರು ಕೂಡ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ರೀತಿಯಲ್ಲಿ, ನಿಗದಿತ ಡೆಸಿಬಲ್ ಮೀರಿ ಕಿವಿಗಡಚಿಕ್ಕುವ ಶಬ್ದದೊಂದಿಗೆ ಡಿಜೆ/ಸೌಂಡ್ ಸಿಸ್ಟಮ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಶಬ್ದ ಮಾಲಿನ್ಯ ನಿಯಂತ್ರಣ ನಿಯಮಾವಳಿಗಳನ್ನು ಗಾಳಿಗೆ ತೂರಿದ ಸ್ಥಳಗಳ ವಿರುದ್ಧವೂ ಪ್ರಕರಣ ದಾಖಲಿಸಲು ಸಿದ್ಧತೆ ನಡೆದಿದೆ.
ಪರವಾನಗಿ ನಿಯಮಾವಳಿಗಳು, ನಿಗದಿತ ಸಮಯ ಮತ್ತು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಕ್ಲಬ್ ಮತ್ತು ಪಬ್‌ಗಳನ್ನು ಪೊಲೀಸರು ಸ್ಥಳದಲ್ಲೇ ಬಾಗಿಲು ಹಾಕಿಸಿದ್ದಾರೆ.
ಇನ್ನು ದಾಳಿ ವಿಚಾರ ಸಂಬಂಧ ಬೆಳಗಾವಿ ಪೊಲೀಸ್ ಕಮಿಷನರ್ ಪ್ರಕಾಶ್ ನಿಕ್ಕಂ ಪ್ರತಿಕ್ರಿಯಿಸಿದ್ದು, ಕ್ಲಬ್, ಹೊಟೆಲ್, ಡಾಬಾಗಳ ಮೇಲೆ ದಾಳಿ ಮಾಡಿದ್ದೇವೆ. ಅಪ್ರಾಪ್ತರು ಬರುವ ಬಗ್ಗೆ ಐಡಿ ಕಾರ್ಡ್ ಪರಿಶೀಲಿಸಿದ್ದೇವೆ. ಕೆಲವು ಕಡೆಗಳಲ್ಲಿ ನಿಯಮಗಳನ್ನ ಮೀರಿದ್ದು ಕಂಡು ಬಂದಿದೆ. ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ರಾತ್ರಿ 11ರ ನಂತರ ಎಲ್ಲವೂ ಬಂದ್ ಮಾಡಲು ಸೂಚನೆ ನೀಡಲಾಗಿದ್ದು, ದಾಂಡಿಯಾ ವೇಳೆ ಹೆಣ್ಣು ಮಕ್ಕಳ ಸುರಕ್ಷತೆಗೂ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.
ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆ ಕಾಪಾಡುವುದು ಮೊದಲ ಆದ್ಯತೆ. ಎಷ್ಟೇ ಪ್ರಭಾವಿ ವ್ಯಕ್ತಿಗಳ ಸಂಸ್ಥೆಗಳಾಗಿದ್ದರೂ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪರವಾನಗಿ ಷರತ್ತುಗಳನ್ನು ಉಲ್ಲಂಘಿಸುವ, ಅಪ್ರಾಪ್ತರಿಗೆ ಪ್ರವೇಶ ನೀಡುವ ಹಾಗೂ ನಿಗದಿತ ಸಮಯ ಮೀರಿ ವ್ಯವಹರಿಸುವ ಯಾವುದೇ ಅಡ್ಡೆಗಳಿಗೂ ರಿಯಾಯಿತಿ ಇಲ್ಲ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

