HomeKarnatakaಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ವಾರ ಪೂರ್ತಿ ನಡೆಯಲಿದೆ ಕಲೆ, ಸಂಸ್ಕೃತಿಯ ಅನಾವರಣ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ವಾರ ಪೂರ್ತಿ ನಡೆಯಲಿದೆ ಕಲೆ, ಸಂಸ್ಕೃತಿಯ ಅನಾವರಣ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ ಹೆಮ್ಮೆಯ ನಾಡಹಬ್ಬ ದಸರಾವನ್ನು ಅಕ್ಟೋಬರ್ 12ರಿಂದ 17ರವರೆಗೆ ವಾರಪೂರ್ತಿ ಸಾಂಸ್ಕೃತಿಕ ಸಂಭ್ರಮದೊಂದಿಗೆ ಆಚರಿಸಲು ಸಜ್ಜಾಗಿದೆ. ಬೆಂಗಳೂರಿನ ಹೆಬ್ಬಾಗಿಲಾಗಿರುವ ನಿಲ್ದಾಣವು, ನಗರದ ಸಾಂಸ್ಕೃತಿಕ ವಿಸ್ತರಣೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣಿಕರ ಪ್ರಯಾಣದ ಅವಧಿಯಲ್ಲೇ ರಾಜ್ಯದ ಸಂಪ್ರದಾಯ, ಕಥೆಗಳು ಮತ್ತು ಸೃಜನಶೀಲ ಪರಂಪರೆಯನ್ನು ಪರಿಚಯಿಸಲು ಹೊರಟಿದೆ.

ವಿಮಾನ ನಿಲ್ದಾಣದಲ್ಲಿನ ಈ ಬಾರಿಯ ದಸರಾ ಆಚರಣೆಯು ಕೇವಲ ಅಲಂಕಾರಕ್ಕೆ ಸೀಮಿತವಾಗಿಲ್ಲ. ಪ್ರತಿಯೊಂದು ಚಟುವಟಿಕೆಯೂ ಕರ್ನಾಟಕದ ಅಪ್ಪಟ ಕಲೆ ಮತ್ತು ಕರಕುಶಲತೆಯನ್ನು ಆಧರಿಸಿದ್ದು, ಪ್ರಯಾಣಿಕರು ಅದರ ಹಿಂದಿನ ಕಥೆಗಳು ಮತ್ತು ಕೌಶಲ್ಯಗಳನ್ನು ಖುದ್ದಾಗಿ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕದ ಆಹಾರ, ಕಲೆ ಮತ್ತು ಕರಕುಶಲ ಸಂಪ್ರದಾಯಗಳ ಆಚರಣೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಸರಾ ಗೊಂಬೆಗಳ ಪ್ರದರ್ಶನ: ಪದ್ಮಶ್ರೀ ಪುರಸ್ಕೃತರು ಹಾಗೂ ಸೂತ್ರಧಾರಿಣಿಯಾಗಿರುವ ಅನುಪಮಾ ಹೊಸ್ಕೆರೆ ಅವರ ನೇತೃತ್ವದಲ್ಲಿ ಟರ್ಮಿನಲ್-2ರ ಆಗಮನ ವಿಭಾಗದ ಮುಂಭಾಗದಲ್ಲಿ ಭವ್ಯವಾದ ದಸರಾ ಗೊಂಬೆಗಳನ್ನು ಪ್ರದರ್ಶಿಸಲಾಗುತ್ತಿದೆ.

ತೊಗಲು ಗೊಂಬೆಯಾಟ: ಅಕ್ಟೋಬರ್ 16 ರಂದು ಸಂಜೆ 6 ರಿಂದ 8 ಗಂಟೆಯವರೆಗೆ ಟರ್ಮಿನಲ್-2ರ ಆಗಮನ ವಿಭಾಗದಲ್ಲಿ 9ನೇ ತಲೆಮಾರಿನ ಸೂತ್ರಧಾರಿ ಗುಂಡುರಾಜು ಮತ್ತು ಅವರ ತಂಡದಿಂದ ಆಕರ್ಷಕ ‘ತೊಗಲು ಗೊಂಬೆಯಾಟ’ ನಡೆಯಲಿದೆ.

ಕರಕುಶಲ ಕಲೆಗಳ ಅನುಭವ: ಟರ್ಮಿನಲ್ 1 ಮತ್ತು 2ರಲ್ಲಿ ಪ್ರಯಾಣಿಕರಿಗೆ ಕರಕುಶಲ ಕಲೆಗಳ ನೇರ ಅನುಭವ ಪಡೆಯಲು ಅವಕಾಶವಿದೆ. ಚನ್ನಪಟ್ಟಣ ಎಕ್ಸ್‌ ಪೀರಿಯೆನ್ಸ್ ಸೆಂಟರ್‌ ನಲ್ಲಿ ಮರದ ಬೊಂಬೆಗಳಿಗೆ ಬಣ್ಣ ಹಚ್ಚಬಹುದು. ಹಾಗೆಯೇ ಟೆರಾಕೋಟಾ (ಮಣ್ಣಿನ) ಎಕ್ಸ್‌ಪೀರಿಯೆನ್ಸ್ ಸೆಂಟರ್‌ನಲ್ಲಿ ಮಣ್ಣಿನ ಮೂರ್ತಿಗಳಿಗೆ ಬಣ್ಣ ಬಳಿಯುವ ಅವಕಾಶವಿದೆ.

ಸಾಂಪ್ರದಾಯಿಕ ದೇಸಿ ಆಟಗಳು: ‘ಕವಡೆ’ ಸಂಸ್ಥೆಯ ಸಹಯೋಗದೊಂದಿಗೆ ಸಿದ್ಧಪಡಿಸಲಾದ ಗೇಮ್ಸ್ ಝೋನ್‌ನಲ್ಲಿ ಪ್ರಯಾಣಿಕರು ಹುಲಿ-ಕುರಿ, ಸಾಲು ಆಟ, ಚೌಕಾಬಾರ, ಅಳುಗುಳಿಮಣೆ ಮತ್ತು ಹಾವು-ಏಣಿಯಂತಹ ಕರ್ನಾಟಕದ ಸಾಂಪ್ರದಾಯಿಕ ಬೋರ್ಡ್ ಗೇಮ್‌ಗಳನ್ನು ಆಡಬಹುದಾಗಿದೆ.

ವಿಮಾನ ನಿಲ್ದಾಣದ ಕಲೆ ಮತ್ತು ಸಂಸ್ಕೃತಿ ಕಾರ್ಯಕ್ರಮದ ವಿಸ್ತರಣೆ

‘ಕಲೆ ಮತ್ತು ಸಂಸ್ಕೃತಿ ಕಾರ್ಯಕ್ರಮ’ದ ಭಾಗವಾಗಿ ಕರ್ನಾಟಕದ ಕಲಾತ್ಮಕ ಸಂಪ್ರದಾಯಗಳಿಗೆ ಬಿಐಎಎಲ್‌ ಒತ್ತು ನೀಡುತ್ತಿದೆ. ಚನ್ನಪಟ್ಟಣದ ಬೊಂಬೆ ತಯಾರಿಕಾ ಸಂಪ್ರದಾಯದಿಂದ ಪ್ರೇರಿತವಾದ ‘ಫ್ಲೈಟ್ಸ್ ಆಫ್ ವಂಡರ್’, ಟೆರಾಕೋಟಾ ಕಲೆಗಳಿಂದ ಪ್ರೇರಿತವಾದ ‘ಫೈಂಡ್ ಮಿ ಎ ಲವ್ ಸಾಂಗ್’ ಮತ್ತು ‘ಖೋರಾ’ ಎಂಬ ಕಲಾಕೃತಿಗಳು ಇಲ್ಲಿ ಗಮನ ಸೆಳೆಯುತ್ತಿವೆ.

ಇದರ ಜೊತೆಗೆ ಮೈಸೂರು ಮಹಾರಾಜರು ಸೃಷ್ಟಿಸಿದ ಆಟಗಳಿಂದ ಪ್ರೇರಿತವಾಗಿರುವ ಯಯಾತಿ ಗೋಡ್ಬೋಲೆ ಅವರ 12 ಫ್ಲೋರ್ ಇನ್‌ ಲೇಗಳು (ನೆಲದ ಮೇಲಿನ ಕಲಾಕೃತಿಗಳು) ಸಹ ವಿಮಾನ ನಿಲ್ದಾಣದ ಸೌಂದರ್ಯವನ್ನು ಹೆಚ್ಚಿಸಿವೆ.

ವಿಮಾನ ನಿಲ್ದಾಣದ ತುಂಬೆಲ್ಲಾ ಕರ್ನಾಟಕದ ಶೈಲಿಯ ಹೂಕುಂಡಗಳು, ದಸರಾ ಛತ್ರಿಗಳು ಮತ್ತು ಲಾಂಛನಗಳನ್ನು ಅಳವಡಿಸಲಾಗಿದೆ. ‘ಬೆಂಗಳೂರು ಡ್ಯೂಟಿ ಫ್ರೀ’ ಮಳಿಗೆಯಲ್ಲಿ ಸಾಂಪ್ರದಾಯಿಕವಾಗಿ ಅಲಂಕೃತಗೊಂಡ ಆನೆಯ ಪ್ರತಿಕೃತಿ ಹಾಗೂ ಕೇವಲ ಮಹಿಳೆಯರೇ ಭಾಗವಹಿಸುವ ‘ಡೊಳ್ಳು ಕುಣಿತ’ವೂ ಪ್ರಯಾಣಿಕರನ್ನು ರಂಜಿಸಲಿದೆ.

ದಸರಾ ಊಟದ ಸವಾಲು

ಪ್ರಸಿದ್ಧ ಬಾಣಸಿಗ ರಣವೀರ್ ಬ್ರಾರ್ ಅವರ ಸಹಯೋಗದಲ್ಲಿ ವಿಮಾನ ನಿಲ್ದಾಣದ ‘080 ಲಾಂಜ್’ “ಒಂದು ದಸರಾ ಸವಾಲು. ಕನ್ನಡಿಗರ ಉತ್ತರ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ. ಕನ್ನಡಿಗರು ತಮ್ಮ ನೆಚ್ಚಿನ ದಸರಾ ಅಡುಗೆಯ ‘ರೆಸಿಪಿ’ಯನ್ನು ಹಂಚಿಕೊಳ್ಳುವಂತೆ ಕೇಳಲಾಗಿದೆ. ಇದರಲ್ಲಿ ವಿಜೇತವಾದ ರೆಸಿಪಿಯನ್ನು ಅಕ್ಟೋಬರ್ 20 ರಂದು ವಿಮಾನ ನಿಲ್ದಾಣದ 080 ಲಾಂಜ್‌ನ ಬಾಣಸಿಗರು ತಯಾರಿಸಿ ಪ್ರಯಾಣಿಕರಿಗೆ ಬಡಿಸಲಿದ್ದಾರೆ.

ಈ ಕುರಿತು ಮಾತನಾಡಿದ ಬಿಐಎಎಲ್‌ ನ ಚೀಫ್ ಮಾರ್ಕೆಟಿಂಗ್ ಆಫೀಸರ್ ಶಾಲಿನಿ ರಾವ್,  “ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಕರ್ನಾಟಕದ ಸಂಸ್ಕೃತಿ ಮತ್ತು ಆತಿಥ್ಯದ ಅನುಭವವಾಗಬೇಕು ಎಂಬುದು ನಮ್ಮ ಉದ್ದೇಶ. ಅಕ್ಟೋಬರ್ 12 ರಿಂದ 17 ರವರೆಗೆ, ಪ್ರಯಾಣಿಕರು ನಮ್ಮ ಕಲೆ, ಸಂಗೀತ, ನೃತ್ಯ ಮತ್ತು ಸಾಂಪ್ರದಾಯಿಕ ಆಟಗಳಲ್ಲಿ ಮಗ್ನರಾಗಬಹುದು. ಇದು ಅವರ ಪ್ರಯಾಣವನ್ನು ಮತ್ತಷ್ಟು ಸ್ಮರಣೀಯವಾಗಿಸಲಿದೆ,” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ಆಚರಣೆಗಳು ಬೆಂಗಳೂರು ವಿಮಾನ ನಿಲ್ದಾಣದ ಬೃಹತ್ ‘ಫೀಲ್ಸ್ ಲೈಕ್ ಬಿಎಲ್ಆರ್’ ಅಭಿಯಾನದ ಭಾಗವಾಗಿದ್ದು, ಇದು ದೇಶ-ವಿದೇಶಗಳ ಪ್ರಯಾಣಿಕರಿಗೆ ಕರ್ನಾಟಕದ ಶ್ರೀಮಂತ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular